‘ಕೊಠಾರಿಎನ್ನುವ ಪದವು ‘ಉಗ್ರಾಣ’ ಎನ್ನುವ ಅರ್ಥ ನೀಡುತ್ತದೆ. ಇವರು ಉಗ್ರಾಣ ನೋಡಿಕೊಳ್ಳುವ ವಂಶದವರೆಂದು ಹೇಳುತ್ತಾರೆ. ಕೊಟಾರಿ, ಕೋಠಾರಿ ಎಂದೂ ಇವರನ್ನು ಕರೆಯುತ್ತಾರೆ. ಇವರು ವ್ಯವಸಾಯ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ತುಳು ಇವರ ಮಾತೃಭಾಷೆ, ಕನ್ನಡದಲ್ಲಿ ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಕಂಡುಬರುವ ಕೆಲವು ಬಳ್ಳಿಗಳು ಎಂದರೆ-ಕರಮರನ್ಯ, ಬಂಗೇರಣ್ಯ, ಸಲಿಯಣ್ಯ, ಉಪ್ಪೇಣ್ಯ, ಗುಜ್ಜೇರಣ್ಯ ಇತ್ಯಾದಿ. ಉಪ್ಪೇಣ್ಯ ಬಳ್ಳಿಯು ಇತರರಿಗಿಂತ ಕೀಳು ಎಂದು ಪರಿಗಣಿಸುತ್ತಾರೆ. ಬಳ್ಳಿಗಳ ಹಂತದಲ್ಲಿ ಹೊರಬಾಂಧವ್ಯ ಹಾಗೂ ಸಮುದಾಯ ಹಂತದಲ್ಲಿ ಒಳಬಾಂಧವ್ಯ ವಿವಾಹಗಳು ನಡೆಯುತ್ತವೆ. ಸೋದರ ಸಂಬಂಧಿ ಮದುವೆಗಳು ಇವರಲ್ಲಿ ಕಂಡುಬರುತ್ತವೆ. ವಿವಾಹ ವಿಚ್ಛೇದನಕ್ಕೆ ಅವಕಾಶವಿದೆ. ವಿಧವೆ, ವಿಧುರ ಹಾಗೂ ವಿಚ್ಛೇದಿತರಿಗೆ ವಿವಾಹದ ಅವಕಾಶವಿದೆ. ಹಿರಿಯ ಮಗ ತಂದೆ ನಂತರ ಮನೆಯ ವಾರಸುದಾರನಾಗುತ್ತಾನೆ. ಹೆರಿಗೆಗೆ  ಮೊದಲಿನ ಕಾರ್ಯವಾದ ‘ಬಯಕೆ’ ಕಾರ್ಯವನ್ನು ಗರ್ಭಿಣಿಯಾದ ಏಳನೆಯ ತಿಂಗಳಲ್ಲಿ ಮಾಡುತ್ತಾರೆ. ಜನನ ಸೂತಕವು ಹನ್ನೆರಡು ದಿನಗಳವರೆಗೆ ಇದ್ದು ಹದಿಮೂರನೇ ದಿನ ನಾಮಕರಣ ಮಾಡುತ್ತಾರೆ. ಮದುವೆಯ ಮುಖ್ಯ ಆಚರಣೆಗಳೆಂದರೆ ಹಾರ ಬದಲಾಯಿಸುವುದು, ತಾಳಿ ಕಟ್ಟುವುದು, ಧಾರೆ ಮುಂತಾದವು ಸೇರಿವೆ. ಶವವನ್ನು ಸುಡುತ್ತಾರೆ, ಸಾವಿನ ಸೂತಕ ಹತ್ತು ದಿನಗಳವರೆಗೆ ಇರುತ್ತದೆ.

ಇವರ ಮುಖ್ಯ ವೃತ್ತಿ ವ್ಯವಸಾಯ, ವ್ಯವಸಾಯದಲ್ಲಿ ಕೂಲಿಗಳಾಗಿಯೂ ದುಡಿಯುತ್ತಾರೆ. ಇವರಲ್ಲಿ ಕೆಲವರು, ಸರ್ಕಾರಿ ಹಾಗೂ ಖಾಸಗಿ  ಸಂಸ್ಥೆಗಳಲ್ಲಿ ನೌಕರಿ ಹಾಗೂ ಬೀಡಿ ಸುತ್ತುವ ಕೆಲಸದಲ್ಲಿ ತೊಡಗಿದ್ದಾರೆ. ಸಮುದಾಯದ ಒಳಿತಿಗಾಗಿ ಆಧುನಿಕ ಸಂಘಟನೆಯನ್ನು ಇವರು ಹೊಂದಿದ್ದಾರೆ. ಬ್ರಾಹ್ಮಣರು ಇವರ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಡುವ ಪುರೋಹಿತರು. ಆಧುನಿಕ ವೈದ್ಯಕೀಯ ಪದ್ಧತಿ, ಸ್ವಯಂ-ಉದ್ಯೋಗ ಅವಕಾಶಗಳನ್ನು ರೂಪಿಸುವ ಯೋಜನೆಗಳು ಹಾಗೂ ಇನ್ನಿತರೆ ಆಧುನಿಕ ಸಾಮಾಜಿಕ ಸಂಸ್ಥೆಗಳ ಉಪಯೋಗ ಪಡೆಯುತ್ತಿದ್ದಾರೆ.