ಕೊಮಾರ ಪಂತರನ್ನು ಕೊಮಾರ ಪೈಕಿ, ಹಾಗೂ ಕ್ಷತ್ರಿಯ ಕೊಮಾರ ಪಂತ ಎಂದು ಕರೆಯುತ್ತಾರೆ. ಇವರು ಕರ್ನಾಟಕದಲ್ಲಿ ಕಾರವಾರ, ಅಂಕೋಲ ಹಾಗೂ ಕುಮಟಾ ತಾಲ್ಲೂಕುಗಳಲ್ಲಿ ಕಂಡುಬರುತ್ತಾರೆ. ಇವರು ತಮ್ಮ ಹೆಸರಿನ ಜೊತೆ ನಾಯಕ ಹಾಗೂ ಮೆರ್ವಿ ಎಂದು ಸೇರಿಸಿಕೊಳ್ಳುತ್ತಾರೆ. ಕೊಮಾರ ಪಂಠ ಎನ್ನುವ ಹೆಸರು ಇವರು ‘ಕುಮಾರ ರಾಮನ ಅನುಯಾಯಿಗಳು, ಎನ್ನುವುದನ್ನು ಹೇಳುತ್ತದೆ. ಇವರು ಕನ್ನಡ, ಕೊಂಕಣಿ ಹಾಗೂ ಹಿಂದಿ ಭಾಷೆಗಳನ್ನು ಮಾತನಾಡಿ, ಕನ್ನಡ ಲಿಪಿಯ ಜೊತೆ ದೇವನಾಗರಿ ಲಿಪಿಯನ್ನು ಬಳಸುತ್ತಾರೆ. ಈ ಸಮುದಾಯದಲ್ಲಿ ಹದಿನೆಂಟು ಹೊರಬಾಂಧವ್ಯ ಬಳ್ಳಿಗಳಿವೆ – ಕೊನಕರ್, ಫೊಂಡೇಕರ್, ತಲ್‌ಪನ್‌ಕರ್, ಮಹಲ್‌ಸೈಕರ್, ಬಡಕರ್, ನಂದನ್‌ಕರ್, ಗಡ್ಡೇಕಾರ್ ಇತ್ಯಾದಿ. ಈ ಬಳ್ಳಿಗಳ ಹೆಸರುಗಳನ್ನು ಮನೆತನದ ಹೆಸರುಗಳಾಗಿಯೂ ಬಳಸುತ್ತಾರೆ. ಮದುವೆಯು ಸೋದರ ಸಂಬಂಧದಲ್ಲಿ ಹೆಚ್ಚಾತಗಿ ನಡೆಯುತ್ತದೆ. ಮದುವೆಗಳು ಮಾತುಕತೆಗಳ ಮೂಲಕ ನಡೆಯುತ್ತದೆ. ಏಕಪತಿತ್ವ/ಏಕಪತ್ನಿತ್ವ ಇವರ ವಿಹಾರ ಪದ್ಧತಿಯಾಗಿದೆ. ಮದುವೆಯು ವಧುವಿನ ಮನೆಯಲ್ಲಿ ಜರಗುತ್ತದೆ. ವಧುವನ್ನು ಕರೆತಂದು ವರನ ಮುಂದೆ ಕೂಡಿಸುತ್ತಾರೆ. ಅವರ ನಡುವೆ ಒಂದು ಬಟ್ಟೆಯನ್ನು ಅಡ್ಡ ಹಿಡಿಯುತ್ತಾರೆ. ಮಂತ್ರೋಚ್ಛಾರಣೆ ಜರುಗಿದ ನಂತರ ಬಟ್ಟೆಯನ್ನು ತೆಗೆಯುತ್ತಾರೆ. ಆಗ ವಧೂವರರು ಹಾರ ಬದಲಾಯಿಸುತ್ತಾರೆ. ನಂತರ ಧಾರೆ ಮುಹೂರ್ತ ಇರುತ್ತದೆ. ಗಂಡುಮಕ್ಕಳು ಆಸ್ತಿಯಲ್ಲಿ ಸಮಪಾಲು ಪಡೆಯುತ್ತಾರೆ. ತಂದೆಯ ನಂತರ ಹಿರಿಯಮಗ ಮನೆಯ ವಾರಸುದಾರನಾಗುತ್ತಾನೆ. ಜನನದ ಸೂತಕವು ಹತ್ತು ದಿನಗಳವರೆಗೆ ಇರುತ್ತದೆ. ಹನ್ನೊಂದನೇ ದಿನ ನಾಮಕರಣ ಮಾಡುತ್ತಾರೆ. ಮುಂಡನ ಕಾರ್ಯವು ಮೂರು ವರ್ಷದ ಒಳಗೆ ಕೇವಲ ಬಾಲಕರಿಗೆ ಮಾತ್ರ ನಡೆಯುತ್ತದೆ. ಕಿವಿ ಚುಚ್ಚಿಸುವ ಕಾರ್ಯವನ್ನು ಬಾಲಕ, ಬಾಲಕಿಯರಿಬ್ಬರಿಗೂ ಮಾಡುತ್ತಾರೆ. ಶವವನ್ನು ಸುಡುತ್ತಾರೆ. ಸಾವಿನ ಸೂತಕವು ಹತ್ತು ದಿನಗಳವೆರೆಗೆ ಇರುತ್ತದೆ. ಕೆಲವು ಜನರಿಗೆ ಮಾತ್ರ ಸ್ವಂತ ಭೂಮಿಯಿದೆ. ಈ ಪ್ರದೇಶಕ್ಕೆ ಮೊದಲು ಇವರು ಸೈನಿಕರಾಗಿ ಬಂದರು. ನಂತರ ಇವರು ತಾಳೆಮರದಿಂದ ಹೆಂಡ ಇಳಿಸುವ ಕಾರ್ಯಕ್ಕೆ ತೊಡಗಿದರು, ಈಗ ಅದನ್ನು ಬಿಟ್ಟಿದ್ದಾರೆ. ಇತ್ತೀಚೆಗೆ ಕೂಲಿ, ನಾರಿನ ಕೆಲಸ, ಜಟಕಾ ಓಡಿಸುವುದು, ಉಳುಮೆ ಮಾಡುವುದು, ಕಾರ್ಮಿಕರಾಗಿ, ಗಣಿಗಾರಿಕೆ, ಬಡಗಿಗಳಾಗಿ ಇತರೆ ಕರ ಕುಶಲಕಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೆಲವರು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ನೆಲ ಹಾಗೂ ಗೋಡೆಯ ಮೇಲೆ ಚಿತ್ರಗಳನ್ನು ಬರೆಯುವ ವಿಶಿಷ್ಠ ಕಲೆ ಇದೆ. ಜಾನಪದ ನೃತ್ಯಗಳಾದ ಸುಗ್ಗಿ ಕುಣಿತ ಮತ್ತು ಕೋಲಾಟಗಳನ್ನು ಜಾನಪದ ಹಾಡುಗಳ ಜೊತೆ ಮಾಡುತ್ತಾರೆ. ಅವುಗಳನ್ನು ಕೊಮಾರ ಪಂತದವರ ರಂಗ ಕಲೆಗಳು ಎಂದು ಕರೆಯುತ್ತಾರೆ. ಇವರಿಗೆ ಆಧುನಿಕ ಶಿಕ್ಷಣದ ಬಗ್ಗೆ ಆಸಕ್ತಿ ಇದೆ. ಸಾಂಪ್ರದಾಯಿಕ ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಗಳೆರಡನ್ನೂ ಪ್ರೋತ್ಸಾಹಿಸುತ್ತಾರೆ. ಇವರಲ್ಲಿ ಕೆಲವರು ಸ್ವಯಂ ಉದ್ಯೋಗ ಯೋಜನೆಗಳು ಹಾಗೂ ಬ್ಯಾಂಕಿನ ಸಾಲ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ನೋಡಿ :

ನಾಯಕ ಎನ್.ಆರ್., ೧೯೮೬. ಕೊಮಾರಪಂತ,  ವೈಜಯಂತಿ, ಉತ್ತರ ಕನ್ನಡ, ಜಿಲ್ಲಾ ಸಾಂಸ್ಕೃತಿಕ ಸಂಘ, ಮೈಸೂರು.