ಕೊರಗ ಎಂಬುದು ಮಂಗಳೂರಿನ ಬಜಪೆಯ ಹತ್ತಿರ ಇರುವ ಒಂದು ಊರಿನ ಹೆಸರು. ಅದು ಪುರಾತನ ಕಾಲದಲ್ಲಿ ಕೊರಗರು ನೆಲೆಸಿದ ಕೇರಿಯಾಗಿತ್ತು ಎಂದು ಪೂರ್ವಿಕರು ಅಭಿಪ್ರಾಯವಿದೆ. ಇವರು ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹೊಲೆಯರ ಒಂದು ಉಪಪಂಗಡವೆಂದು ಹೇಳಲಾಗಿದೆ. ಕುರವರು ಎಂಬ ಪದಕ್ಕೆ ಬೆಟ್ಟದಲ್ಲಿ ವಾಸಮಾಡುವವರು ಎಂಬ ಅರ್ಥವಿದೆ. ಈ ಪದದಿಂದ ಕೊರಗ ಎಂಬ ಪದ ಉತ್ಪತ್ತಿಯಾಗಿರಬಹುದು. ಈ ಪದದ ಉತ್ಪತ್ತಿಯ ಬಗ್ಗೆ ನಿಖರವಾಗಿ ಹೇಳುವುದು ಕಷ್ಟ. ಕೊರಗ ಭಾಷೆಯನ್ನು ತಮ್ಮ ಸಮುದಾಯದ ಒಳಗೆ, ಇತರರೊಂದಿಗೆ ತುಳು ಮತ್ತು ಕನ್ನಡ ಭಾಷೆಯನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ನೆಲೆಯಾಗಿದ್ದಾರೆ.

ಇವರಲ್ಲಿ ಕಂಡುಬರುವ ಮುಖ್ಯ ಉಪ ಪಂಗಡಗಳೆಂದರೆ, ಸೊಪ್ಪು ಕೊರಗ, ಕುಂಟುಕೊರಗ, ತಿಪ್ಪಿಕೊರಗ, ಒಂಟಿಕೊರಗ, ಕುಪ್ಪಟಕೊರಗ, ಹಂಡೆಕೊರಗ, ಕಡಪಕೊರಗ, ಇತ್ಯಾದಿ. ಈ ವರ್ಗೀಕರಣವನ್ನು ಮಾಡುವಾಗ ವಿದ್ವಾಂಸರು ಇವರ ಉಡುಗೆ ತೊಡುಗೆ ಹಾಗೂ ಆಚಾರ ವಿಚಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುತ್ತಾರೆ. (ಕೆ.ಬಿ. ಕೊಪ್ಪದ, ೧೯೭೧) ಅವರು ಕೊರಗರಲ್ಲಿ ಇರುವ ಹದಿನೇಳು ಬಳ್ಳಿಗಳನ್ನು ಗುರುತಿಸಿರುತ್ತಾರೆ. ಅವುಗಳೆಂದರೆ, ಉಪ್ಪರು, ಅಲೇರು, ಪದ್ವಮ್ಮ, ಚೆರ್ಕಾಡಿ, ಮುಕ್ಕ, ಕೊನಾರು, ಗುತ್ತಾರು, ಕುತ್ತಾರು, ತಾಡಿಯಾರು, ಹಂಚಾರು, ಖುಜಗಾರು, ಎಲ್ಕಿಜಿಯಾರು, ಒಜಾರ್ತು, ತಾಲಿಮನ್, ಕುಂಕುರಿಸಿ, ಒಡಿಯಾರು, ಒಂಗೇರು. ಇವುಗಳ ಜೊತೆಗೆ ಎ.ವಿ. ನಾವಡರವರು ಕೊರವರು ಪೂಜಿಸುವ ದೈವ ಅಥವಾ ಭೂತಕ್ಕೆ ಸಂಬಂಧಿಸಿದ ಕೆಲವು ಬಳ್ಳಿಗಳನ್ನು ಗುರುತಿಸಿದ್ದಾರೆ – ಕುಂದನ್ನಾಯ, ಸಾಲೆನ್ನಾಯ, ಮುಂಜಿತ್ತೆನ್ನಾಯ, ಖಂಗೆರನ್ನಾಯ, ತಡ್ವೆನ್ನಾಯ, ತಿರ್ಗನ್ನಾಯ, ಇತ್ಯಾದಿ.

ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹದ ಪದ್ಧತಿಯನ್ನು ಅನುಸರಿಸಿದರೆ, ಬಳ್ಳಿಗಳ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿಯನ್ನು ಅನುಸರಿಸುತ್ತಾರೆ. ಇವರಲ್ಲಿ ಗಂಡು, ಹೆಣ್ಣುಗಳ ಪರಸ್ಪರ ಭೇಟಿ ಮಾಡಿ, ಅವರ ಒಪ್ಪಿಗೆಯ ನಂತರವೆ ಹಿರಿಯರು ಮದುವೆ ನಿಶ್ಚಯ ಮಾಡುತ್ತಾರೆ. ಹಿಂದೆ ಮದುವೆ ಮಾಡಲು ತಮ್ಮ ತಮ್ಮ ಭೂಮಾಲೀಕರ ಒಪ್ಪಿಗೆ ಪಡೆಯಬೇಕಿತ್ತು. ಆದರೆ ಇಂದು ಈ ಪದ್ಧತಿ ಬದಲಾಗಿದೆ. ಮದುವೆಯು ತಂದೆಯ ಸಹೋದರಿಯ ಮಗಳು ಅಥವಾ ತಾಯಿಯ ಸಹೋದರನ ಮಗಳ ಜೊತೆ ಸಾಧ್ಯವಿದೆ. ಹೆಂಡತಿಯು ವಿಚ್ಛೇದನ ಬಯಸಿದರೆ ವಧುದಕ್ಷಿಣೆಯನ್ನು ಗಂಡನಿಗೆ ಹಿಂತಿರುಗಿಸಬೇಕಾಗುತ್ತದೆ. ವಿಧವೆ, ವಿಧುರ ಹಾಗೂ ವಿಚ್ಛೇದಿತರ ವಿವಾಹಗಳಿಗೆ ಅವಕಾಶವಿದೆ. ಇವರಲ್ಲಿ ಹೆಂಗಸರು ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.

ಕೊರಗ ದಂಪತಿಗಳು

ಕೊರಗ ದಂಪತಿಗಳು

ಬುಟ್ಟಿ ಹೆಣೆಯುತ್ತಿರುವ ಕೊರಗ ಮಹಿಳೆ

ಬುಟ್ಟಿ ಹೆಣೆಯುತ್ತಿರುವ ಕೊರಗ ಮಹಿಳೆ

ಇವರ ಸಾಂಪ್ರದಾಯಿಕ ವೃತ್ತಿ ಬುಟ್ಟಿ ಹೆಣೆಯುವುದು ಜೊತೆಗೆ ವ್ಯವಸಾಯದ ಕೂಲಿಗಳಾಗಿ ದುಡಿಯುತ್ತಾರೆ. ಇತ್ತೀಚೆಗೆ ಕೆಲವರು ಭೂಮಿ ಉಳುಮೆ ಮಾಡುತ್ತಿದ್ದಾರೆ. ಅತ್ಯಂತ ಕಡಿಮೆ ಜನರು ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಯಲ್ಲಿದ್ದಾರೆ. ಇಲ್ಲಾ ಬುಡಕಟ್ಟು ಸಮುದಾಯಗಳಲ್ಲಿ ಕಂಡು ಬರುವಂತೆ ಕೊರಗ ಸಮುದಾಯದಲ್ಲಿ ಅವರದೇ ಆದ ನ್ಯಾಯವ್ಯವಸ್ಥೆ ಇದೆ. ಇದರ ನೇತೃತ್ವ ಕೊರಗ ಸಮಾಜದಲ್ಲಿ ಹಿಡಿತವಿರುವ ಹಿರಿಯ ವ್ಯಕ್ತಿ ವಹಿಸುತ್ತಾನೆ. ಇವನನ್ನು ಗುರಿಕಾರ ಎಂಬ ಹಸರಿನಲ್ಲಿ ಕರೆಯುತ್ತಾರೆ. ನ್ಯಾಯ ವಿಚಾರಣೆಯನ್ನು, ಸಾಮಾನ್ಯವಾಗಿ ದೇವರ ಹಬ್ಬ, ಉತ್ಸವ, ಭೂತಕೋಲ, ಮದುವೆ, ಸತ್ತವರಿಗೆ ನಡೆಸುವ ವಾರ್ಷಿಕ ಆಚರಣೆಗಳ ಸಂದರ್ಭದಲ್ಲಿ, ಕುಟುಂಬದ ಎಲ್ಲಾ ಸದಸ್ಯರು ಸೇರಿ ಸಮಸ್ಯೆಗಳನ್ನು ವಿಚಾರಣೆಗೆ ಒಳಪಡಿಸುತ್ತಾರೆ. ಸಮೂಹ ಮಾಧ್ಯಮ, ರಸ್ತೆ ಸಂಪರ್ಕ, ಗ್ರಾಮೀಣ ಹಾಗು ಬುಡಕಟ್ಟು ಸಮುದಾಯಗಳ ಅಭಿವೃದ್ಧಿ, ಸ್ವಯಂ-ಉದ್ಯೋಗವನ್ನು ಬೆಂಬಲಿಸುವ ಕಾರ್ಯಕ್ರಮಗಳನ್ನು ಬಳಸಿಕೊಳ್ಳುವಲ್ಲಿ ಹಿಂದುಳಿದಿದ್ದಾರೆ. ಆಧುನಿಕ ಶಿಕ್ಷಣ, ಬ್ಯಾಂಕ್ ಹಾಗೂ ಇತರೆ ಆಧುನಿಕ ಸಾಮಾಜಿಕ ಸಂಸ್ಥೆಗಳ ಪ್ರಯೋಜನವನ್ನು ಪಡೆದುಕೊಂಡು ಅಭಿವೃದ್ಧಿ ಸಾಧಿಸಲು, ಕೊರಗ ಯುವ ವಿದ್ಯಾವಂತರು ವ್ಯವಸ್ಥಿತವಾದ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಇವರ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಇನ್ನೂ ಸುಧಾರಣೆಯಾಗಬೇಕಾಗಿದೆ.

ನೋಡಿ:

ಅಮೃತ ಸೋಮೇಶ್ವರ., ೧೯೮೨. ಕೊರಗು, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು.

ನಾವಡ. ಎ.ವಿ., ೧೯೯೮. ‘ಕೊರಗರು’, (ಸಂ). ಲಕ್ಕಪ್ಪಗೌಡ, ಕರ್ನಾಟಕ ಬುಡಕಟ್ಟುಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.

ಪುರುಷೋತ್ತಮೆ ಬಿಳಿಮಲೆ, ೧೯೯೦. ಕರಾವಳಿ ಜಾನಪದ, ಪ್ರಸಾರಾಂಗ ಮಂಗಳೂರು ವಿಶ್ವವಿದ್ಯಾಲಯ, ಮಂಗಳ ಗಂಗೋತ್ರಿ.

ಪುರುಷೋತ್ತಮ ಬಿಳಿಮಲೆ., ೧೯೯೩. ಕೊರಗರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಆಕಾಡೆಮಿ, ಬೆಂಗಳೂರು.

Bhat, D.N.S., 1971. The Koraga Language, Deccan College PG and Research Institute, Poona.

Chandrasekhar, A.D. Xaviour, S.M. Sirajuddin., 1998. ‘Opportunity of Natural Selection Among the Koraga Tribe of Karnatgaka’, Journal of Human Ecology.

Marulasiddaiah, H.M. 1998. Socio-Economic Changes Among The Koraga. Ph.D. Thesis, University of Mysore, Mysore.

Raghava Rao, D.V., 1981. Integegrated Development of a Primitive Tribge: Koraga. Institute for Social and Economic change, Bangalore.

Reddy, P.H. P.J. Bhattacharjee, and M. Venugopala Rao, 1`984. Tribes in Karnataka – A Study of Socio-Economic and Demographic Characteristics of Koragas, Population centre, Bangalore.