ಕೊರಮರನ್ನು ಕೊರಚ, ಕೊರಮ, ಕೊರವಂಜಿ, ಕೊರವತ್ತಿ ಕೊರಚಿ, ಯರಕುಲ, ಕೊರಮಶೆಟ್ಟಿ, ಕುಂಚಿಕೊರವ ಹೀಗೆ ಇನ್ನು ಹಲವಾರು ಹೆಸರುಗಳಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಕರೆಯುತ್ತಾರೆ. ಇವರು ತಮ್ಮ ಮೂಲವನ್ನು ಕುರು ವಂಶದಿಂದಲೇ ಗುರುತಿಸಿಕೊಳ್ಳುತ್ತಾರೆ. ಈ ಸಮುದಾಯದ ಜನರು ಮೊದಲು ಊರೂರು ತಿರುಗಿ ಕಣಿ ಹೇಳುವುದು, ಹಚ್ಚೆ ಹುಯ್ಯುವುದು, ಹಳ್ಳಿಗಳಲ್ಲಿ ಜನರಿಗೆ ನಾಟಿ ಔಷಧಿ ಕೊಡುವ ವೃತ್ತಿಗಳನ್ನವಲಂಬಿಸಿ ಅಲೆಮಾರಿ ಜೀವನ ನಡೆಸುತ್ತಿದ್ದರು. ನಾಗರಿಕತೆಯ ಗಾಳಿ ಬೀಸತೊಡಗಿದಂತೆ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಾರಂಭವಾದಂತೆ ಈ ಕಣಿ ಹೇಳುವುದು, ಹಚ್ಚೆ ಹಾಕಿಸಿಕೊಳ್ಳುವುದು ಕಾಯಿಲೆಗಳಿಗೆ ನಾಟಿ ಔಷಧಿ ನೀಡುವುದು ಮಾಯವಾದುದರಿಂದ ಈ ಕಸುಬುಗಳನ್ನೇ ಪ್ರಧಾನವಾಗಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕೊರಮ ಸಮುದಾಯಕ್ಕೆ ಜೀವನದ ಮಾರ್ಗ ದುಸ್ತರವಾಯಿತು. ಈ ಬದಲಾವಣೆಗಳಿಂದ ಕಂಲಾದ ಕೆಲವರು ಅನ್ಯಮಾರ್ಗ ಇಲ್ಲದೆ ಕಣಿ ಹೇಳುವುದರ ಮೂಲಕ ದಿನವಿಡೀ ಊರೂರು ಅಲೆದು ಸಿಕ್ಕುತ್ತಿದ್ದ ಅಲ್ಪ ಸ್ವಲ್ಪ ದವಸಧಾನ್ಯಗಳಿಂದಲೇ ಜೀವನ ಸಾಗಿಸುತ್ತದ್ದರು. ಆದರೆ ಈ ವೃತ್ತಿಯಿಂದಲೇ ಜೀವನ ಸಾಗಿಸುವುದು ಸಾಧ್ಯವೇ ಇಲ್ಲ ಎಂದೆನಿಸಿದಾಗ ಅನ್ಯ ಮಾರ್ಗವಿಲ್ಲದೆ ತಮ್ಮ ಕುಲ ಕಸುಬಿನ ಜೊತೆಗೆ ಬುಟ್ಟಿ ಹೆಣೆಯುವ ಕಸುಬನ್ನು ರೂಢಿಸಿಕೊಂಡರು. ಬಿದಿರು, ಈಚಲುಗರಿಗಳಿಂದ ಮಂಕರಿ, ಕುಕ್ಕೆ, ಮೊರಗಳನ್ನು ಹೆಣೆಯುವುದು. ಇದೇ ವೃತ್ತಿಯನ್ನು ಕೆಲವರು ಇಂದಿಗೂ ಕೂಡ ತಮ್ಮ ಜೀವನದ ಮುಖ್ಯ ಕಸುಬಾಗಿ ಉಳಿಸಿಕೊಂಡಿದ್ದಾರೆ. ಕೆಲವು ಗ್ರಾಮಗಳಲ್ಲಿ ಇವರನ್ನು ಕುಕ್ಕೆ ಕೊರಮರೆಂದೇ ಕರೆಯುತ್ತಿದ್ದಾರೆ. ಈ ಸಮುದಾಯದ ಜನರು ಮೂಲತಃ ಒಂದೇ ಬುಡಕಟ್ಟಿಗೆ ಸೇರಿದ ಜನ ಎನ್ನವುದರಲ್ಲಿ ಸಾಕಷ್ಟು ಪುರಾವೆಗಳಿವೆ. ಕೊರಮರು ಬೆಂಗಳೂರು, ತುಮಕೂರು, ಚಿತ್ರದುರ್ಗ, ಕೋಲಾರ, ಧಾರವಾಡ, ಬೆಳಗಾವಿ, ಬಳ್ಳಾರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಇವರನ್ನು ಕೊರವ ಎಂದು ಪೂರ್ಣ ದಕ್ಷಿಣದಿಂದ ಉತ್ತರದ ಆರ್ಕಾಟ್‌ವರೆಗೆ ಕರೆದರೆ, ಕೆಲವೆಡೆ ಕೊರಚ ಎಂದು, ಮತ್ತೆ ಕೆಲವು ಜಿಲ್ಲೆಗಳಲ್ಲಿ ಯೆರಕುಲ ಎಂದು ಕರೆಯುತ್ತಾರೆ. ಇವರ ಮಾತೃಭಾಷೆ ತಮಿಳು, ಇವರು ಕನ್ನಡ ಭಾಷೆಯಲ್ಲೂ ವ್ಯವಹರಿಸಬಲ್ಲರು.

ಕೊರಮರನ್ನು ಎರಡು ಪಂಗಡಗಳಾಗಿ ವಿಭಾಗಿಸಬಹುದು, ಅವೆಂದರೆ ಸತಪಡೆ ಹಾಗೂ ಕಬಂಡೆ. ಇವರಲ್ಲಿ ಅನೇಕ ಬಳ್ಳಿಗಳಿವೆ – ಮೈನಕಣವರ, ಚಿತ್ರಪಟರೆವರ, ದಾಸೆಗೊಣ್ಣವರ, ಶಿಕಾರಿಪುರಿ ಇತ್ಯಾದಿ. ಇವರ ಮನೆತನದ ಹೆಸರುಗಳೆಂದರೆ ಮಣಿಕವರ, ಚಿತ್ರಾಪಟಮವರ, ದಸಗೊಣ್ಣವರ, ಶಿಕಾಲಪುರಿ, ಎಂಟರನವರ, ಅಂಬಜೋಲ, ಅವುಗಳು, ಬರಡಿ  ಹಾಗೂ ದಾಸಗಿ. ಎಂಥೋವನ್ (೧೯೨೨) ಇವರಲ್ಲಿ ಹತ್ತು ಒಳಬಾಂಧವ್ಯ ಬಳ್ಳಿಗಳನ್ನು ಗುರುತಿಸಿದ್ದಾರೆ. ಅವೆಂದರೆ, ಆದವಿ/ಕಲ್, ಕೈಕಡಿ, ಬಿಡ್/ವೀರ, ಡಬ್ಬ/ ಊರು, ಘಂಟೆಚೋರ, ಕುಂಚಿ, ಮೋಡಿ, ಪತ್‌ರಾದ, ಸನಾದಿ ಹಾಗೂ ಸುಲಿ. ಮದುವೆಯು ಸೋದರ ಸಂಬಂಧದಲ್ಲಿ ಹೆಚ್ಚಾಗಿ ನಡಿಯುತ್ತವೆ. ತೆರ ಕೊಡುವ ಪದ್ಧತಿಯಿದ್ದರು ಇತ್ತೀಚಿಗ ವರದಕ್ಷಿಣೆಯ ಪದ್ಧತಿ ಆಚರಣೆಯಲ್ಲಿ ಬರತೊಡಗಿದೆ. ವಿವಾಹ ವಿಚ್ಛೇದನೆಗೆ ಅವಕಾಶವಿದೆ. ವಿಧವೆ, ವಿಧುರರು ಮತ್ತು ವಿಚ್ಛೇದಿತರು ವಿವಾಹ ಮಾಡಿಕೊಳ್ಳಲು ಅವಕಾಶವಿದೆ. ತಂದೆ ನಂತರ ಕುಟುಂಬದ ಹಿರಿಯ ಮಗ ವಾರಸುದಾರನಾಗುತ್ತಾನೆ. ನಾಮಕರಣವನ್ನು ಮಗು ಹುಟ್ಟಿದ ಐದನೆಯ ಅಥವಾ ಹದಿಮೂರನೆಯ ದಿನದಂದು ಮಾಡುತ್ತಾರೆ. ಮಕ್ಕಳಿಗೆ ಮುಂಡನ ಕಾರ್ಯವನ್ನು ಮೂರು ವರುಷದ ಒಳಗೆ ಮಾಡಿಸುತ್ತಾರೆ. ಮದುವೆ ಕಾರ್ಯಗಳು ಹೆಣ್ಣಿನ ಮನೆಯಲ್ಲಿಯೇ ನಡೆಯುತ್ತವೆ. ಕೊರವರಿಂದ ಆಚರಿಸಲ್ಪಡುವ ಮುಖ್ಯ ಮದುವೆ ಶಾಸ್ತ್ರಗಳೆಂದರೆ, ವೀಳ್ಯ, ಸುರಿಗೆನೀರು, ಧಾರೆ, ತಾಳಿಕಟ್ಟುವುದು, ಇತ್ಯಾದಿ. ಶವವನ್ನು ಸಾಮಾನ್ಯವಾಗಿ ಹೂಳುತ್ತಾರೆ. ಹನ್ನೊಂದನೇ ದಿನ ಸಂಬಂಧಿಕರಿಗೆ ಸಾಂಪ್ರದಾಯಿಕವಾಗಿ ಔತಣವನ್ನು ಕೊಡಲಾಗುತ್ತದೆ. ಪ್ರತಿವರ್ಷವೂ ಹಿರಿಯರ ಪೂಜೆಯನ್ನು ಮಾಡುತ್ತಾರೆ.

ಕೊರವರ ಸಾಂಪ್ರದಾಯಿಕ ವೃತ್ತಿಯೆಂದರೆ ಕಸಬರಿಕೆ ಮತ್ತು ಹಗ್ಗ ತಯಾರಿಸುವುದು. ಗಂಡಸರಿಗೆ ಕೊಳಲು ನುಡಿಸುವುದರಲ್ಲಿ, ಶಹನಾಯಿ ನುಡಿಸುವುದರಲ್ಲಿ ಮತ್ತು ದುಡಿ ಬಾರಿಸುವುದರಲ್ಲಿ ಪರಿಣತಿ ಇದೆ. ಇವರು ವ್ಯವಸಾಯದ ಕೂಲಿಗಳಾಗಿಯೂ ದುಡಿಯುತ್ತಾರೆ. ಇವರಲ್ಲಿನ ಸಮುದಾಯದ ನಾಯಕರು ಜಗಳಗಳನ್ನು ಬಗೆಹರಿಸಿ ತಪ್ಪಿತಸ್ಥರಿಗೆ ದಂಡ ಅಥವಾ ವಾಗ್ದಂಡನೆ ವಿಧಿಸುತ್ತಾರೆ.

ಇವರು ದೇವರು ಹನುಮಂತ, ಕಾರಪ್ಪ, ದ್ಯಾಮವ್ವ, ದುರ್ಗವ್ವ, ಎಲ್ಲಮ್ಮ, ಕಾಳಪ್ಪ,ಇವು ಇವರ ಕೆಲವು ಮನೆ ದೇವರುಗಳು. ಸವದತ್ತಿ ಮತ್ತು ಮೈಲಾರ ಇವು ಇವರ ಶ್ರೀಕ್ಷೇತ್ರಗಳು. ಜಂಗಮ ಅಥವಾ ಬ್ರಾಹ್ಮಣ ಪುರೋಹಿತರು ಇವರ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಡುತ್ತಾರೆ. ಇವರು ಗ್ರಾಮದ ಹಬ್ಬಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಸಂಗೀತ ವಾದ್ಯಗಳನ್ನು ನುಡಿಸುತ್ತಾರೆ. ಹೀಗೆ ಸಂಗೀತಗಾರರಾದುದರಿಂದ ಇವರು ಸಮಾಜದ ಇತರೆ ಎಲ್ಲಾ ಜನವರ್ಗಗಳ ಜೊತೆ ಮೊದಲಿನಿಂದಲೂ ಉತ್ತಮ ಸಾಮಾಜಿಕ ಸಂಬಂಧ ಹೊಂದಿದ್ದಾರೆ. ಇವರು ಮಕ್ಕಳು ಇತ್ತೀಚೆಗೆ ಶಾಲೆಗೆ ಸೇರುತ್ತಿದ್ದಾರೆ. ಇವರು ಸರ್ಕಾರಿ ರಿಯಾಯಿತಿ ಸಾಲಯೋಜನೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮ ಗಳನ್ನು ಉಪಯೋಗಿಸಿಕೊಂಡು ಬದಲಾವಣೆ ಹೊಂದಬೇಕಾಗಿದೆ.

ನೋಡಿ:

ಮಾನಸ, ೧೯೯೩. ಕೊರವ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು,

Amba Rao U.T., 1975. ‘Kunchi Koravas of Karnataka’, Social Welfare  22(3)

Ashok Kumar, E.N., 1998. ‘The Paradoxes of Tribal Development: A Study of Korachas in Karnataka’, National Seminar on Tribal Transformation and Development  18-19 December 1998.

Bahadur, K.P., 1978. ‘Koravas’, In Caste, Tribe and Culture of India, Karnataka, Kerala and Tamilnadu. ESS Publications, New Delhi

Jana, A.K., 1998. Socio-economic Transformation and Development of the Korava in West Bengal, Nation Seminar on Tribal Transformation and Development, 18-19 December, 1998.

Majumdar, D.N., 1932. ‘The Life Cycle Among the Koravas’, Man in India Vol. 12.