ಕೊಲಾರಿಗಳನ್ನು ಕೊಲಯಾರಿ ಎಂದು ಕರೆಯುತ್ತಾರೆ. ಇವರನ್ನು ಮಣಿಯಾಣಿ, ಯಾದವ ಎಂದೂ ಕರೆಯುತ್ತಾರೆ. ಇವರು ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ. ಕನ್ನಡ, ತುಳು ಹಾಗೂ ಕೊಡವ ಭಾಷೆ ಮಾತನಾಡುತ್ತಾರೆ. ಇವರಲ್ಲಿ ಹೊರಬಾಂಧವ್ಯ ಬೆಡಗುಗಳಾದ-ಕೊಡಯಾಲ್, ಅಂಬೆಲ, ನನ್ನಾಲ್ಡಿ, ಪಚ್ಚೆಮಾರ, ನಂದ ಕರಿಯರ, ಚಾರ ಕರಿಯರ ಇತ್ಯಾದಿಗಳಿವೆ. ಮೊದಲ ಎರಡು ಬೆಡಗುಗಳು ಸಾಮಾಜಿಕವಾಗಿ ಉತ್ತಮವಾದವು ಎಂದು ಪರಿಗಣಿತವಾಗಿವೆ. ತಾಯಿಯ ಸಹೋದರನ ಮಗಳು, ತಂದೆಯ ಸಹೋದರಿಯ ಮಗಳನ್ನು ಮದುವೆಯಾಗಬಹುದು. ವಯಸ್ಕ ಮದುವೆಗಳು ಮಾತುಕತೆಯ ಮೂಲಕ ನಡೆಯುತ್ತವೆ. ಬೆಡಗುಗಳ ಮಟ್ಟದಲ್ಲಿ ಹೊರಬಾಂಧವ್ಯ ಹಾಗೂ ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ ಪದ್ಧತಿಯನ್ನು ಅನುಸರಿಸುತ್ತಾರೆ. ಮದುವೆಯ ನಂತರ ಸ್ತ್ರೀ ಕೇಂದ್ರಿತ ಕುಟುಂಬದಲ್ಲಿ ವಾಸಿಸುತ್ತಾರೆ. ಇವರಲ್ಲಿ ಈಗಲೂ ಅವಿಭಕ್ತ ಕುಟುಂಬಗಳು ಹೆಚ್ಚಾಗಿ ಕಾಣಸಿಗುತ್ತವೆ. ಇತ್ತೀಚೆಗೆ ಗಂಡು ಮಗುವನ್ನು ವಂಶೋದ್ಧಾರಕ ಎಂದು ಕರೆಯುವ ಮಟ್ಟಿಗೆ ಬದಲಾಗುತ್ತಿದ್ದಾರೆ. ಸಾಂಪ್ರದಾಯಿಕವಾಗಿ ಮನೆ ವಾರಸುದಾರಿಕೆಯು ಹಿರಿಯ ಸಹೋದರಿಯ ಮಗನಿಗೆ ದೊರೆಯುತ್ತದೆ. ಜನನ ಸೂತಕವು ಸುಮಾರು ಹದಿನಾರು ದಿನಗಳವರೆಗೆ ಇರುತ್ತದೆ. ನಾಮಕರಣವು ನಂತರ ನಡೆಯುತ್ತದೆ. ಋತುಮತಿಯಾದ ‘ಗ್ರಾಂಡಿ ಮಂಗಳ’ ಎಂಬ ಕಾರ್ಯವನ್ನು ಮಾಡುತ್ತಾರೆ. ಶವವನ್ನು ಸುಡುತ್ತಾರೆ ಹಾಗೂ ಸಾವಿನ ಸೂತಕವು ಹದಿನಾರು ದಿನಗಳವರೆಗೆ ಇರುತ್ತದೆ.

ಇವರ ಸಾಂಪ್ರದಾಯಿಕ ವೃತ್ತಿಯೆಂದರೆ ಕೃಷಿ, ಕೆಲವರು ಖಾಸಗಿ ವಲಯದಲ್ಲಿನ ನೌಕರಿಗೆ ಸೇರಿದ್ದಾರೆ. ಗೋಡಂಬಿ ಸಂಗ್ರಹಣೆ ಹಾಗೂ ಬೀಡಿ ಸುತ್ತುವುದು ಇವರ ಹೆಂಗಸರು ಮತ್ತು ಮಕ್ಕಳು ಮಾಡುವ ಇತರೆ ವೃತ್ತಿಗಳು. ಪ್ರಾಂತೀಯ ಸಂಘಟೆನಯಾದ “ಯಾದವ ಸಂಘ”ವು ಕೇರಳದ ಕಾಯಿನ್ ಗಡಿಯಲ್ಲಿ ಸ್ಥಾಪನೆಯಾಗಿದ್ದು ಇವರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ.

ಕೊಲಾರಿಗಳ ಮನೆದೇವರುಗಳೆಂದರೆ ಕೃಷ್ಣ ಹಾಗೂ ವೆಂಕಟರಮಣ. ಪುಲಿ, ಪಂಜುರ್ಲಿ, ಗುಳಿಗ ಹಾಗೂ ಕಲ್ಲುರ್ತಿ ಭೂತಗಳನ್ನೂ ಇವರು ಪೂಜಿಸುತ್ತಾರೆ. ಬ್ರಾಹ್ಮಣ ಪುರೋಹಿತರು ಮತ್ತು ಇವರದೇ ಜಾತಿಯ ಪುರೋಹಿತರು ಇವರ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಡುತ್ತಾರೆ. ಆಧುನಿಕ ವಿದ್ಯಾಭ್ಯಾಸದ ಬಗ್ಗೆ ಇತ್ತೀಚೆಗೆ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿವರಾಗಿದ್ದಾರೆ.