‘ಕೋಟೆಗಾರಎನ್ನುವ ಪದ ‘ಕೋಟೆ’ ಎನ್ನುವ ಪದದಿಂದ ಬಂದಿದೆ. ಇವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇವರು ಬೆಳಗಾವಿ ಜಿಲ್ಲೆಯಿಂದ ವಲಸೆ ಬಂದಿರಬಹುದೆಂದು ಊಹಿಸಲಾಗಿದೆ. ಇವರು ಕನ್ನಡವನ್ನು ಮಾತನಾಡುತ್ತಾರೆ. ಇವರನ್ನು ಹಲವು ಹೊರಬಾಂಧವ್ಯ ಬೆಡಗುಗಳಾಗಿ ವಿಭಾಗಿಸಲಾಗಿದೆ. ತಂದೆಯ ಸಹೋದರಿಯ ಮಗಳು, ತಾಯಿಯ ಸಹೋದರನ ಮಗಳು ಅಥವಾ ಹಿರಿಯಕ್ಕನ ಮಗಳ ಜೊತೆ ಮದುವೆಯಾಗಲು ಅವಕಾಶವಿದೆ. ಹೆಂಗಸರೂ ವ್ಯವಸಾಯದಲ್ಲಿ ಪಾಲ್ಗೊಂಡು ಮನೆಯ ಆದಾಯಕ್ಕೆ ಸಹಾಯಕರಾಗುತ್ತಾರೆ.

ಸಾಂಪ್ರದಾಯಿಕವಾಗಿ ಇವರು ಶವ ಹೊರುವವರಾಗಿದ್ದರು. ಆದರೆ ಈಗ ಅವರು ಚರ್ಮದ ಕೆಲಸಗಳಲ್ಲಿ ತೊಡಗಿದ್ದಾರೆ. ಚಾಟಿ, ತೊಗಲಿನ ಬಾರು ತಯಾರಿಸುವುದು, ವ್ಯವಸಾಯದಲ್ಲಿ ದಿನಗೂಲಿ, ಬುಟ್ಟಿ ಹೆಣೆಯುವುದು, ಮರಕಡಿಯುವುದು, ಹುಲ್ಲು ಮಾರುವ ಕೆಲಸಗಳನ್ನು ಮಾಡುತ್ತಾರೆ. ಕರಿಯಮ್ಮ ಮತ್ತು ಯಲ್ಲಮ್ಮ ಇವರ ಮನೆ ದೇವರುಗಳು. ಸಾಂಪ್ರದಾಯಿಕ ಹಬ್ಬವಾದ ಮಾರಿ ಹಬ್ಬದಲ್ಲಿ ಭಾಗವಹಿಸುತ್ತಾರೆ. ಆಧುನಿಕ ವಿದ್ಯಾಭ್ಯಾಸದ ಬಗ್ಗೆ ಹುಡುಗರನ್ನು ಪ್ರೋತ್ಸಾಹಿಸುತ್ತಾರೆ, ಆದರೆ ಹುಡುಗಿಯರಿಗೆ ಹೆಚ್ಚಿನ ಪ್ರೋತ್ಸಾಹವಿಲ್ಲ. ಆಧುನಿಕ ಅಭಿವೃದ್ಧಿ ಯೋಜನೆಗಳು ಹಾಗೂ ಇತರೆ ಸಂಸ್ಥೆಗಳ ಪ್ರಯೋಜನ ಪಡೆಯುವಲ್ಲಿ ಹಿಂದುಳಿದಿದ್ದಾರೆ.