ಕ್ರೈಸ್ತರು ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಇದ್ದರು ಎಂದು ಕೆಲವು ಇತಿಹಾಸಕಾರರು ಗುರುತಿಸುತ್ತಾರೆ. ಆದರೆ ೧೬ನೇ ಶತಮಾನದಲ್ಲಿ ಮೈಸೂರು ಅರಸರ ಅನುಮತಿಯಿಂದ ಕ್ರೈಸ್ತರ ಮತಪ್ರಚಾರ ಅಧಿಕೃತವಾಗಿ ಪ್ರಾರಂಭವಾಗುತ್ತದೆ. ೧೮೨೦ರಲ್ಲಿ ವೆಸ್ಲಿಮಿಶನ್ ಮೈಸೂರಿನಲ್ಲಿ ಮತ್ತು ಲಂಡನ್ ಮಿಷನಿನ ಪ್ರಾಟೆಸ್ಟಂಟ್ ಪಾದ್ರಿಗಳು ಬಳ್ಳಾರಿಯಲ್ಲಿ, ಸಿರಿಯನ್ ಪಾದ್ರಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತಪ್ರಚಾರ ಪ್ರಾರಂಭಿಸಿದರು. ಬೆಳಗಾವಿ, ಧಾರವಾಡ, ಗುಲ್ಬರ್ಗ ಹಾಗೂ ಬೀದರ ಜಿಲ್ಲೆಗಳಲ್ಲಿ ಪ್ರಾಟೆಸ್ಟಂಟ್‌ರು ಹೆಚ್ಚಾಗಿ ಕಂಡುಬರುತ್ತಾರೆ. ಈ ಭಾಗಗಳಲ್ಲಿ ೧೮೩೪ರಲ್ಲಿ ಜರ್ಮನಿಯ ಬಾಸೆಲ್ ಮಿಶನ್ ಮತ್ತು ಅಮೇರಿಕದ ಬ್ಯಾಪ್ಪಿಸ್ಟ್ ಚರ್ಚ್ ಬೀದರನಲ್ಲಿ ಸಾಕಷ್ಟು ಕೆಲಸವನ್ನು ಮಾಡಿದೆ. ಈ ಸಂಸ್ಥೆಗಳು ಮಾಡಿರುವ ಪ್ರಚಾರ ಹಾಗೂ ಪ್ರಭಾವಗಳಿಗೆ ಒಳಗಾಗಿ ಹಲವಾರು ಸಮುದಾಯಗಳು ಕ್ರೈಸ್ತಮತ ಸ್ವೀಕರಿಸುವಂತೆ ಮಾಡಿದೆ.

ಕ್ರಿಶ್ಚಿಯನ್ನರಲ್ಲಿ ಮುಖ್ಯವಾಗಿ ಕ್ಯಾಥೊಲಿಕ್, ಪ್ರಾಟೆಸ್ಟಂಟ್ ಪಂಗಡಗಳಿವೆ. ಕ್ಯಾಥೋಲಿಕರು ಏಸುವಿನ ಜೊತೆಗೆ ಅನೇಕ ಕ್ರಿಶ್ಚಿಯನ್ ಸಂತರನ್ನು ಹಾಗೂ ಮೇರಿಯನ್ನು ಪೂಜಿಸುತ್ತಾರೆ. ಆದರೆ ಪ್ರಾಟೆಸ್ಟಂಟ್‌ರಿಗೆ ವಿಗ್ರಹಾರಾಧನೆ ಅಷ್ಟು ಮುಖ್ಯವಲ್ಲ. ಕ್ರಿಶ್ಚಿಯನ್ನರನ್ನು ಕರ್ನಾಟಕದಲ್ಲಿ ಭಾಷೆಯ ಆಧಾರದ ಮೇಲೂ ಗುರುತಿಸಬಹುದು. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕೊಂಕಣಿ ಮಾತನಾಡುವ ಕ್ಯಾಥೋಲಿಕ್‌ರು ಹೆಚ್ಚಾಗಿ ಕಂಡು ಬರುವುದಲ್ಲದೆ ಚರ್ಚಿನಲ್ಲಿ ಪ್ರಾರ್ಥನೆಯನ್ನು ಕೊಂಕಣಿ ಭಾಷೆಯಲ್ಲಿ ಮಾಡುತ್ತಾರೆ. ಇದಲ್ಲದೆ, ಮೈಸೂರು, ಬೆಂಗಳೂರು, ಬಳ್ಳಾರಿ ಹಾಗೂ ಮುಂತಾದ ಜಿಲ್ಲೆಗಳಲ್ಲಿ ತಮಿಳು, ತೆಲುಗು ಭಾಷೆಗಳಲ್ಲಿ ಪ್ರಾರ್ಥನೆ ನಡೆಯುವ ಚರ್ಚುಗಳಿವೆ. ಆದರೆ ಹಳೇಮೈಸೂರು ಭಾಗದ ಹೆಚ್ಚಿನ ಚರ್ಚುಗಳಲ್ಲಿ ಪ್ರಾರ್ಥನೆ ಕನ್ನಡದಲ್ಲಿ ನಡೆಯುತ್ತದೆ. ಕರ್ನಾಟಕದಲ್ಲಿ ಕೆಲವು ದಲಿತರು ಕೆಳಜಾತಿಯ ಜನರು ಉದಾ: ಆದಿದ್ರಾವಿಡ, ಆದಿಕರ್ನಾಟಕ, ಚರೋಡಿ, ಗೊಲ್ಲ, ಸಿದ್ದಿ, ಲಂಬಾಣಿ ಇತ್ಯಾದಿ ಸಮುದಾಯಗಳಲ್ಲಿ ಕೆಲವರು ಕ್ರೈಸ್ತಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಆದರೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಕೆಲವರು ತಮ್ಮ ಹಿಂದಿನ ಧಾರ್ಮಿಕ ಆಚರಣೆಗಳನ್ನು ಈಗಲೂ ನಡೆಸಿಕೊಂಡು ಬರುತ್ತಿದ್ದಾರೆ. ಈ ರೀತಿ ಎರಡೂ ಧರ್ಮಗಳ (ಹಿಂದೂ, ಕ್ರೈಸ್ತ) ಧಾರ್ಮಿಕ ಆಚರಣೆಗಳನ್ನು ಹೊಂದಿರುವ ಜನರನ್ನು ಗುರುತಿಸಬಹುದು. ಹೀಗೆ ಕರ್ನಾಟಕದಲ್ಲಿ ಕ್ರೈಸ್ತಧರ್ಮವು ಹಲವಾರು ರೂಪಾಂತರಗಳನ್ನು ಹೊಂದಿದೆ.

 

ಕ್ರೈಸ್ತ : ಗೌಡಿ

ಗೌಡಿ ಕ್ರೈಸ್ತರು ರೋಮನ್ ಕ್ಯಾಥೋಲಿಕ್ಕರ ಒಂದು ಗುಂಪು. ಇವರನ್ನು ನಾಯ್ಕ ಕ್ರಿಶ್ಚಿಯನ್‌ರೆಂದೂ ಕರೆಯುತ್ತಾರೆ. ಇವರ ಮೌಖಿಕ ಪರಂಪರೆಯ ಪ್ರಕಾರ ಇವರು ಗೋವಾದಿಂದ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಮುದ್ರ ದಡಕ್ಕೆ ವಲಸೆ ಬಂದವರು. ಇವರು ಆಪ್ತರೊಂದಿಗೆ ಕೊಂಕಣಿಯನ್ನೇ ಬಳಸಿದರೂ, ತುಳು ಭಾಷೆಯಲ್ಲಿ ಮಾತನಾಡಬಲ್ಲರು. ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಚರ್ಚಿನ ಅನುಮತಿಯೊಂದಿಗೆ ರಕ್ತಸಂಬಂಧಿಗಳಲ್ಲಿ ಮದುವೆಗೆ ಅವಕಾಶವಿದೆ. ಇಬ್ಬರ ಒಪ್ಪಿಗೆಯ ಮೂಲಕ ಮದುವೆಗಳು ನಡೆಯುತ್ತವೆ. ವಿವಾಹ ವಿಚ್ಛೇದನೆಗೆ ಅವಕಾಶವಿಲ್ಲ. ಆದರೆ ವಿಧುರ, ವಿಧವೆಯರ ವಿವಾಹಗಳಿಗೆ ಅವಕಾಶವಿದೆ. ಹೆಂಗಸರೂ ಮನೆಯ ಆದಾಯಕ್ಕೆ ಸಹಾಯ ಮಾಡುತ್ತಾರೆ. ಮದುವೆಯು ಚರ್ಚ್‌‌ನಲ್ಲಿ ನಡೆಯುತ್ತದೆ. ಕ್ರಿಶ್ಚಿಯನ್ ಪರಂಪರೆಯ ರೀತಿಯಲ್ಲಿ ಶವವನ್ನು ಹೂಳುತ್ತಾರೆ. ಸತ್ತವರಿಗಾಗಿ, ಮೂರನೇ, ಏಳನೇ, ಮೂವತ್ತನೇ ಹಾಗೂ ವರ್ಷ ತುಂಬಿದ ದಿನ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಇವರಲ್ಲಿ ಕೆಲವರು ಈಗಲೂ ತಮ್ಮ ಸಾಂಪ್ರದಾಯಿಕ ವೃತ್ತಿಗಳಾದ ವ್ಯವಸಾಯ, ಮೀನು ಹಿಡುಯುವುದರ ಜೊತೆಗೆ ಹಾಗೂ ಕೃಷಿ ಕಾರ್ಮಿಕರಿದ್ದಾರೆ. ಇತ್ತೀಚೆಗೆ ಇವರಲ್ಲಿ ಬಹಳಷ್ಟು ಜನ ಚಿಕ್ಕ ಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ. ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರರಾಗಿದ್ದಾರೆ. ಹೆಂಗಸರು ತಮ್ಮ ವಿರಾಮದ ವೇಳೆಯಲ್ಲಿ ಬೀಡಿ ಕಟ್ಟುತ್ತಾರೆ. ಚರ್ಚ್‌‌ನ ಮುಖ್ಯಸ್ಥರು ಜಗಳಗಳಂತಹ ಕೆಲವು ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಇವರಲ್ಲಿ ಕೋಮಿನ ಸಂಘಟನೆಗಳಿವೆ. ಅವುಗಳು ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿವೆ. ತಮ್ಮ ಉಪಯೋಗಕ್ಕೆ ಚಾಪೆ/ತಟ್ಟುಗಳನ್ನು ಹಾಗೂ ಮೀನು ಹಿಡಿಯುವ ಬಲೆಗಳನ್ನು ನೇಯ್ದುಕೊಳ್ಳುತ್ತಾರೆ. ಈ ಸಮುದಾಯದಲ್ಲಿ ಕೆಲವರು ಆಧುನಿಕ ವೃತ್ತಿಗಳಲ್ಲಿ ತೊಡಗಿದ್ದಾರೆ. ಇವರಲ್ಲಿ ಕೆಲವರು ಸ್ವಯಂ-ಉದ್ಯೋಗ ರೂಪಿಸಿಕೊಂಡಿದ್ದಾರೆ. ಆಧುನಿಕ ಶಿಕ್ಷಣ, ಆರೋಗ್ಯ, ಇತ್ಯಾದಿ ಆಧುನಿಕ ಸಂಸ್ಥೆಗಳ ಜೊತೆ ವ್ಯವಹರಿಸಿ ಅವುಗಳಿಂದ ಉಪಯೋಗವನ್ನು ಪಡೆದುಕೊಳ್ಳಬೇಕಾಗಿದೆ.

 

ಕ್ರೈಸ್ತ : ಚರೋಡಿ

ರೋಡಿ ಕ್ರೈಸ್ತರನ್ನು, ಕೊಂಕಣಿ ಆಚಾರಿ, ಮೆಸ್ಥಾ, ಖಾಂಡೇಕರ್ ಎಂದು ಕರೆಯುತ್ತಾರೆ. ಇವರು ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ. ಥರ್ಸ್ಟನ್ (೧೯೦೯)ರು, “ಚರೋಡಿಯವರು ಉತ್ತರ ಕ ನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಆಚಾರಿಗಳು, ಇವರು ಕೊಂಕಣಿ ಚೆಪ್ದಾರ ಗುಂಪಿನವರೇ ಆಗಿದ್ದಾರೆ” ಎಂದು ಹೇಳುತ್ತಾರೆ. ಈ ಸಮುದಾಯದವರ ಆಚರಣೆಗಳು ಹಾಗೂ ವಿಧಾಣಗಳಲ್ಲಿ ಹೆಚ್ಚು ಭಿನ್ನತೆಗಳೇನೂ ಇಲ್ಲ. ಸುಮಾರು ಮುನ್ನೂ ವರ್ಷಗಳ ಹಿಂದೆ ಗೋವಾದಿಂದ ಈಗಿರುವ ಸ್ಥಳಗಳಿಗೆ ವಲಸೆ ಬಂದಿರಬಹುದು ಎಂದು ಹೇಳಲಾಗುತ್ತದೆ. ‘ಚಾರ್’ ಅಂದರೆ ‘ನಾಲ್ಕು’ ಹಾಗೂ ‘ಹೋದಿ’ ಅಂದರೆ ದೋಣಿ – ಅಂದರೆ ನಾಲ್ಕುದೋಣಿಯಲ್ಲಿ ಬಂದವರು ಎಂದು ಹೇಳುತ್ತಾರೆ. ಕೊಂಕಣಿಯನ್ನು ಮನೆಯಲ್ಲಿ ಮಾತನಾಡಿ ಉಳಿದವರೊಂದಿಗೆ ಕನ್ನಡ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ.

ಚರೋಡಿ ಕ್ರೈಸ್ತರು ಗೋವಾದಿಮದ ವಲಸೆ ಬಂದಿರುವ ಚರೋಡಿ ಪಂಗಡದ ಒಂದು ಗುಂಪು. ಇವರಲ್ಲಿ ಹಲವು ಹೊರಬಾಂಧವ್ಯದ ಗೋತ್ರಗಳಿವೆ, ಅವನ್ನು ಮುನಿಗಳ ಹೆಸರಿಂದ ಗುರುತಿಸುತ್ತಾರೆ. ಅವೆಂದರೆ ವಿಶ್ವಾಮಿತ್ರ, ಜಮದಗ್ನಿ, ವಸಿಷ್ಠ, ಕಶ್ಯಪ ಇತ್ಯಾದಿ. ಇವರಲ್ಲಿ ಸೋದರ ಸಂಬಂಧಿ ವಿವಾಹಗಳು ನಡೆಯುತ್ತದೆ. ಕುಂಕುಮ, ತಾಳಿ(ಮಂಗಲಸೂತ್ರ) ಹಾಗೂ ಕಾಲುಂಗುರ ಮದುವೆಯಾದ ಹೆಂಗಸಿನ ಗುರುತುಗಳು. ಮದುವೆಯ ನಂತರ ಗಂಡಿನ  ಮನೆಯಲ್ಲಿ ಹೆಣ್ಣು ವಾಸಿಸುತ್ತಾಳೆ. ವಿಧುರರು ಮರುವಿವಾಹ ಆಗಬಹುದು. ಆದರೆ ವಿಧವೆಯರಿಗೆ ಈ ಅವಕಾಶವಿಲ್ಲ ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಜನನದ ಸೂತಕವು ಹತ್ತು ದಿನಗಳವರೆಗೆ ಇರುತ್ತದೆ. ನಾಮಕರಣವು ಹನ್ನೆರಡನೇ ದಿನ ನಡೆಯುತ್ತದೆ. ಸಾವಿನ ಸೂತಕವು ಹತ್ತು ದಿನಗಳವರೆಗೆ ಇರುತ್ತದೆ.

ಚರೋಡಿಗಳ ಸಾಂಪ್ರದಾಯಿಕ ವೃತ್ತಿಯೆಂದರೆ ಬಡಗಿ ಕೆಲಸ. ಇವರಲ್ಲಿ ಕೆಲವರು ಸರ್ಕಾರಿ ಹಾಗೂ ಖಾಸಗಿ ಸೇವೆಗಳಲ್ಲಿದ್ದಾರೆ. ಈಗ ವ್ಯವಸಾಯ ಹಾಗೂ ದಿನಗೂಲಿ ನೌಕರರ ಸಂಖ್ಯೆ ಕೂಡ ಹೆಚ್ಚಾಗಿದೆ. ‘ಚರೋಡಿ ಸೇವಾ ಸಮಾಜ’ಗಳೆಂಬ ಪ್ರಾಂತೀಯ ಸಮುದಾಯ ಸಂಘಟನೆಗಳಿವೆ. ಅವುಗಳನ್ನು ‘ಸಭಾಮಂಡಲಿ’ ಎಂದು ಕರೆಯುತ್ತಾರೆ. ಹೆಂಗಸರು ಜಾನಪದ ಗೀತೆಗಳನ್ನು ಹಾಡುತ್ತಾರೆ. ಗಂಡಸರು ಹಾಗೂ ಹೆಂಗಸರೂ ಸೇರಿ ಕೆಲವು ಸಮಾರಂಭಗಳಲ್ಲಿ ಜಾನಪದ ನೃತ್ಯ ಮಾಡುತ್ತಾರೆ. ಇವರಿಗೆ ಆಧುನಿಕ ಶಿಕ್ಷಣದ ಬಗ್ಗೆ ಆಸಕ್ತಿ ಇದೆ. ಆಧುನಿಕ ಸಾಮಾಜಿಕ ಸಂಸ್ಥೆಗಳ ಅಭಿವೃದ್ಧಿ ಕಾರ್ಯಕ್ರಮಗಳು ಇವರಿಗೆ ದೊರಕಬೇಕಾಗಿದೆ.

ನೋಡಿ :

Antony Raj., 1990. ‘Dalit Christians Have Come of Age’ (in and interview) Asia Focus,  15 September

Azariah, M.E., 1988. ‘The Church’ s Healing Ministry of Dalits’ In : Towards a Dalit Theology’, Prabhakar (ed).:

The Christian Institute For The Study of Religon and Society (CISRS), Bangalore

Caplan, Lionel., 1989. ‘Religon and Power’, in Essays on the Christan Community in Madras, The Christian Literature Society, Madras

Caplan, Lionel., 1980. ‘Caste and Castelessness among South Indian Christians’, Contribution to Indian Sociology  14, 2:21-38

Caplan, Lionel., 1977. ‘Social Mobility in Metropolitan Centres, Christians in Madras city’, Contribution to Indian Sociology  11, 1:193-217

Das, Sibiri Ranjan., 1988. ‘Nature and Extent of Stratification Among the Catholics in a Goa Village’, Journal of Indian Anthropological Society Vol.23, No.2

Fuller, C.J., 1976. ‘Kerala Christians and The Caste System’ Man  (N.S.) 11 : 53-70

Fonseca, Joseph A., 1988. Marriage in India in a Christian Perspective : A Historical, Social, Theological Investigation,  Redemptotist Publication, Bangalore

Godwin, C.J., 1972. Change and Continuity : A Study of Two Christian Village Communities in Suburban Bombay,  Tata McGraw hill Publishing Co., Bombay.

Gladstone, J.W., 1988. ‘Christian Missionaries and Caste in Kerala’ Towards a Dalit Theology,  Prabhakar (ed.): CISRS, Bangalore

Kananaikil, Jose, 1983. Christians of Scheduled Caste Origin, Indian Social Institute, Delhi

Mundadan, Mathias A., 1984. Indian Christians, Search for Indentity and Struggle for Autonomy,  Dharmaram Publications, Bangalore.

Shiri G.., 1978, Karnataka Christians and Polities, The Christian Institute For The Study of Religion and Society, Bangalore

Shiri G., ‘Karnataka Christians and Politics, The Christian Institute for the Study of Religion and Society, Bangalore