ರವಿಯರನ್ನು ಕೊಂಕಣ ಖರ್ವಿಯವರೆಂದು ಕರೆಯಲಾಗುತ್ತದೆ. ಇವರು ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಇಂಡೋ ಆರ್ಯನ್ ಭಾಷೆಯಿಂದ ಕೊಂಕಣಿಯನ್ನು ಮಾತನಾಡುತ್ತಾರೆ. ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿ ಬಳಸುತ್ತಾರೆ. ಇವರಲ್ಲಿ ಬಹಳಷ್ಟು ಪಿತೃಪ್ರಧಾನ ಬಳ್ಳಿಗಳಿವೆ – ಬಾಣೇಶ್ವರ, ದಾಮೋದರ, ಕುಡತಾರಿ, ಮಹಾಮಾಯಿ, ರಾವಳನಾಥ, ಶಾಂತೇರಿ, ಕಾಮಾಕ್ಷಿ, ಕಾತ್ಯಾಯಿನಿ, ಇತ್ಯಾದಿ. ಈ ಬಳ್ಳಿಗಳನ್ನು ಕುಲದೇವತೆಗಳ ಹೆಸರಿನೊಂದಿಗೆ ಗುರುತಿಸಲಾಗಿದೆ.

ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ, ಬಳ್ಳಿಯ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿ ಇವರಲ್ಲಿ ಕಂಡುಬರುತ್ತದೆ. ಗಂಡು ಮಕ್ಕಳಿಗೆ ಆಸ್ತಿಯ ಮೇಲೆ ಸಂಪೂರ್ಣ ಹಕ್ಕಿದೆ. ಹಿರಿಯ ಮಗನು ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಜನನದ ಸೂತಕವು ಹನ್ನೊಂದು ದಿನಗಳವರೆಗೆ ಇರುತ್ತದೆ. ಗಂಡು ಮಕ್ಕಳಿಗೆ ಜನಿವಾರ ತೊಡಿಸುವ ಕಾರ್ಯವನ್ನು ಮದುವೆಗೆ ಮುಂಚೆ ಮಾಡಿಸುತ್ತಾರೆ. ಮದುವೆಯ ಆಚರಣೆಗಳಲ್ಲಿ ನಿಶ್ಚಿತಾರ್ಥ, ಧಾರೆ, ಹಾರಬದಲಾವಣೆ, ಮುಖ್ಯವಾದವು. ಸಾವಿನ ಸೂತಕವು ಹನ್ನೊಂದು ದಿನಗಳವರೆಗೆ ಇರುತ್ತದೆ.

ಖರವಿಗಳ ಸಾಂಪ್ರದಾಯಿಕ ವೃತ್ತಿ ಮೀನುಗಾರಿಕೆ ಹಾಗೂ ಉಪ್ಪು ತಯಾರಿಸುವುದಾಗಿತ್ತು. ಇವರ ಈಗಿನ ವೃತ್ತಿಗಳೆಂದರೆ ಮೀನುಗಾರಿಕೆ, ಕೂಲಿ ಕೆಲಸ, ಮರಗೆಲಸ ಹಾಗೂ ವ್ಯಾಪಾರ. ಶಕ್ತಿ, ಮಹಾಕಾಳಿ, ಕಾತ್ಯಾಯಿನಿ ಹಾಗೂ ಭುವನೇಶ್ವರಿ ದೇವತೆಗಳನ್ನು ಪೂಜಿಸುತ್ತಾರೆ. ಧಾರ್ಮಿಕ ವಿಧಿಗಳನ್ನು ನಡೆಸಲು ಬ್ರಾಹ್ಮಣ ಅರ್ಚಕರನ್ನು ಆಹ್ವಾನಿಸುತ್ತಾರೆ. ಹಚ್ಚೆ ಹಾಕಿಸಿಕೊಳ್ಳುವುದು ಇವರಲ್ಲಿ ಸಾಮಾನ್ಯ. ಜಾನಪದ ಹಾಡುಗಳನ್ನು ಗಂಡಸರು ಹಾಗೂ ಹೆಂಗಸರಿಬ್ಬರೂ ಹಾಡುತ್ತಾರೆ. ಹೆಂಗಸರು ‘ಮಾರಲಿ’ ಎನ್ನುವ ಜನಪದ ನೃತ್ಯದಲ್ಲಿ ಭಾಗವಹಿಸುತ್ತಾರೆ. ಆಧುನಿಕ ಶಿಕ್ಷದ ಬಗ್ಗೆ ಇವರಿಗೆ ಆಸಕ್ತಿ ಇದೆ. ಈ ಕೋಮಿನವರು ದೇಶೀಯ ಔಷಧಿಗಳನ್ನು ಬಳಸುತ್ತಾರೆ. ಕೆಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾತ್ರ ಇವರು ಬಳಸಿಕೊಳ್ಳುತ್ತಿದ್ದಾರೆ. ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಪ್ರಯೋಜನಗಳನ್ನು ಬಳಸಿಕೊಳ್ಳುವುದರಲ್ಲಿ ಹಿಂದುಳಿದಿದ್ದಾರೆ.