ಗಂಟಿಚೋರ, ಕರ್ನಾಟಕದ ಒಂದು ಹಿಂದುಳಿದ ಸಮುದಾಯ. ಇವರನ್ನು ಉಚಿಲಿಯರು, ಭಂಟರು, ಪಾತ್ರುಟ ಮತ್ತು ತಕಾರಿ ಎಂದೂ ಸಹ ಕರೆಯುವರು. ಇವರು ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ವಲಸೆ ಬಂದು ಧಾರವಾಡ, ಬಿಜಾಪುರ, ಬೆಳಗಾವಿ ಹಾಗೂ ಮುಂತಾದ ಜಿಲ್ಲೆಗಳಲ್ಲಿ ಹೆಚ್ಚಾಗಿ ಕೇಂದ್ರೀಕರಣಗೊಂಡಿದ್ದಾರೆ. ಇವರ ಮಾತೃಭಾಷೆ ಕನ್ನಡ, ಅಂತರಸಮುದಾಯ ಸಂಪರ್ಕದಲ್ಲಿ  ತೆಲುಗು, ಮರಾಠಿ ಮತ್ತು ಹಿಂದಿ ಭಾಷೆಗಳನ್ನು ಉಪಯೋಗಿಸುತ್ತಾರೆ. ಬ್ರಿಟಿಷ್ ಆಡಳಿತದಲ್ಲಿ ಸಮುದಾಯವನ್ನು ಅಪರಾಧಿ ಬುಡಕಟ್ಟು ಎಂದು ಪರಿಗಣಿಸಿದ್ದರು.

ಗಂಟಿಚೋರರು ಕ್ಯಾಶ್ನೋರ ಮತ್ತು ಪ್ಯಾಪ್ನೋರ ಎಂಬ ಎರಡು ಕುಲಗಳನ್ನು ಹೊಂದಿದ್ದಾರೆ. ಒಂದೊಂದು ಕುಲಗಳನ್ನು ಮೂರು ಬೆಡಗುಗಳಾಗಿ ಗುರುತಿಸಲಾಗಿದೆ. ಅವುಗಳೆಂದರೆ ಭೂಮಿನಾರು, ತ್ರಿನಾಗ್ಲೇರು ಮತ್ತು ಕಲ್ಪತರು. ಸೋದರ ಸಂಬಂಧಿ ವಿವಾಹಗಳಿಗೆ ಅವಕಾಶವಿದೆ. ಇವರು ದಿನಗೂಲಿ, ಸಣ್ಣ ಕೈಗಾರಿಕೆ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ಕೆಲವರು ಕೃಷಿಯಲ್ಲಿ ತೊಡಗಿದ್ದಾರೆ. ಇವರ ಕುಲದೇವತೆ ‘ತುಳಜಾ ಭವಾನಿ’. ಹೊಲೆಯ ಮತ್ತು ಮಾದಿಗರನ್ನು ಹೊರತುಪಡಿಸಿ ಉಳಿದ ಎಲ್ಲಾ ಸಮುದಾಯಗಳೊಂದಿಗೆ ಗಂಟಿಚೋರರು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಪರ್ಕವನ್ನು ಹೊಂದಿದ್ದಾರೆ. ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಸಂಪರ್ಕ ಇವರಿಗೆ ಕಡಿಮೆ ಎಂದು ಹೇಳಬಹುದು. ಇವರ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿ ಅಗತ್ಯವಾಗಿ ಸುಧಾರಣೆಯಾಗಬೇಕಾಗಿದೆ.