ಟ್ಟಿ, ಒಂದು ಕೃಷಿ ಸಮುದಾಯ. ಇವರನ್ನು ‘ಪೊಲದವ’ ಅಥವಾ ‘ಹೊಲದವ’ ಅಂದರೆ ಬೇಸಾಯಗಾರರು ಎಂದೂ ಸಹ ಹೇಳುವರು. ಇವರು ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸಿಸುವರು. ಹಳೆಯ ದಕ್ಷಿಣ ಕನ್ನಡದ ಕಾಸರಗೋಡು ತಾಲ್ಲೂಕಿನ ಸೋಮೇಶ್ವರ ದ ಹತ್ತಿರ ಹೆಚ್ಚಾಗಿ ಕಂಡು ಬರುತ್ತಾರೆಂದು ಥರ್ಸ್ಟನ್ ಪ್ರಸ್ತಾಪಿಸಿದ್ದಾರೆ. ಇವರು ಮೊದಲು ಜೈನರಾಗಿದ್ದರೆಂದು, ಇವರಲ್ಲಿ ಒಬ್ಬ ಹೆಂಗಸು ಮೀನನ್ನು ತಿಂದಾಗ, ಅವಳ ಕುಟುಂಬವನ್ನು ಸಮುದಾಯದಿಂದ ಬಹಿಷ್ಕರಿಸಿದರಂತೆ. ನಂತರ ಇವರು ಬೇರೆ ಪಂಗಡದವರಾದರೆಂದು ಹೇಳುತ್ತಾರೆ. ತುಳು ಇವರ ಮಾತೃಭಾಷೆ. ಅಂತರಸಮುದಾಯ ಸಂಪರ್ಕದಲ್ಲಿ ತುಳು ಮತ್ತು ಕನ್ನಡ ಎರಡನ್ನು ಮಾತನಾಡಿ, ಕನ್ನಡ ಲಿಪಿಯನ್ನು ಉಪಯೋಗಿಸಬಹುದು.

ಗಟ್ಟಿಗಳಲ್ಲಿ ಕಂಡು ಬರುವ ಕೆಲವು ಬೆಡಗುಗಳು – ಕೊಜ್ಜೆರಯ, ಕೈರಣ್ಣಯ, ಸೌಂದರಣ್ಣ, ಕಾರೆಂಗಣ್ಣಯ, ಗುಜ್ಜರಣ್ಣಯ, ಬಂಗೇರಣ್ಣಯ, ಸಾಲಿಯಣ್ಣಯ್ಯ, ಇತ್ಯಾದಿ ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ ಹಾಗೂ ಬೆಡಗುಗಳ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿಯನ್ನು ಅನುಸರಿಸುತ್ತಾರೆ. ಸೋದರ ಸಂಬಂಧಿ ವಿವಾಹಗಳಿಗೆ ಅನುಮತಿಯಿದೆ. ವಿಧವೆ ಮತ್ತು ವಿಧುರರ ವಿವಾಹಕ್ಕೆ ಅವಕಾಶವಿದೆ. ಇವರು ಮಾತೃಪ್ರಧಾನ ಅಳಿಯ ಸಂತಾನ ಪದ್ಧತಿಯನ್ನು ಅನುಸರಿಸುವರು. ಇದಕ್ಕೆ ಅನುಗುಣವಾಗಿ ಇವರ ಹೆಣ್ಣು ಮಕ್ಕಳಲ್ಲಿ ಆಸ್ತಿಯನ್ನು ಸಮನಾಗಿ ಹಂಚಲಾಗುತ್ತದೆ. ಹಿರಿಯ ಅಳಿಯನಿಗೆ ಮನೆಯ ವಾರಸುದಾರನಿಗೆ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಆಸ್ತಿಯ ಒಂದು ಭಾಗವನ್ನು ಗಂಡು ಮಕ್ಕಳಿಗೆ ಕೊಡುವುದು ರೂಢಿಯಲ್ಲಿದೆ. ಹದಿನೈದು ದಿನದ ಜನನ ಸೂತಕ ಪೂರ್ಣವಾದ ಮೇಲೆ ಹದಿನಾರನೇ ದಿವಸ ನಾಮಕರಣ ಮಾಡುತ್ತಾರೆ. ಮದುಮಗಳ ಮನೆಯಲ್ಲಿ ವಿವಾಹ ಶಾಸ್ತ್ರಗಳು ನಡೆಯುತ್ತದೆ. ಮುಖ್ಯವಾದ ವಿವಾಹ ಶಾಸ್ತ್ರವಿಧಿಗಳೆಂದರೆ ಹಾರವನ್ನು ಬದಲಾಯಿಸುವುದು. ಶವವನ್ನು ಸುಟ್ಟು ಹನ್ನೊಂದನೆಯ ದಿನ ‘ಬೊಜ್ಜ’ ಎಂಬ ಧಾರ್ಮಿಕ ಕಾರ್ಯವನ್ನು ಆಚರಿಸಲಾಗುತ್ತದೆ.

‘ನಾಯ್ಡು’ ಮತ್ತು ‘ಮೆಲ್ಡರು’ ಇವರ ಸಮುದಾಯದ ಮುಖ್ಯಸ್ಥರು. ಸಾಂಪ್ರದಾಯಿಕವಾಗಿ ಮದುವೆಗೆ ಮುಖ್ಯಸ್ಥರ ಸಮ್ಮತಿಯ ಅವಶ್ಯಕತೆಯಿದೆ. ಗಟ್ಟಿಗಳ ಮುಖ್ಯ ದೇವತೆ ಸಾಮಂಥೇಶ್ವರನು. ಇವರು ಭೂತಗಳಾದ ಪಂಜುರ್ಲಿ, ಕಲ್ಲೂರ್ತಿ, ಗುಳಿಗ, ಬೊಬ್ಬರಿಯ ಮತ್ತು ಬ್ರಹ್ಮೇರುಗಳನ್ನು ಆರಾಧಿಸುವರು. ನಾಯ್ಡು ಮತ್ತು ಮೇಲ್ಡರು ಇವರ ಧಾರ್ಮಿಕ ವಿಶೇಷಜ್ಞರು. ಇವರಲ್ಲಿ ಕೃಷಿಗೆ ಸಂಬಂಧಿಸಿದ ದಂತಕಥೆಗಳು ಹಾಗೂ ಜಾನಪದ ಗೀತೆಗಳಿವೆ. ಕೆಲವರು ಸರ್ಕಾರಿ ಹಾಗೂ  ಖಾಸಗಿ ಸಂಸ್ಥೆಗಳಲ್ಲಿ ಕೆಲಸಗಳನ್ನು ಹೊಂದಿದ್ದಾರೆ. ಇವರ ಒಟ್ಟು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಪರಿಸ್ಥಿತಿ ಸುಧಾರಿಸಬೇಕಾಗಿದೆ.