ಗಾಣಿಗ ಇದು ಕರ್ನಾಟಕದಲ್ಲಿ ಎಣ್ಣೆ ತೆಗೆಯುವ ಸಮುದಾಯ. ಕೇರಳದಲ್ಲಿ ಗಾಣಿಗರನ್ನು ಗಾನಿಕರೆಂದು ಕರೆಯುವರು. ಥರ್ಸ್ಟನ್ (೧೯೦೯), ಪ್ರಕಾರ ಇವರ ಹೆಸರಿನ ತೆಲುಗಿನ ‘ಗಾನುಗ’ ಎಂಬ ಶಬ್ದದಿಂದ ಹುಟ್ಟಿದೆ. ಇವರ ಮೂಲದಲ್ಲಿ, ಈಶ್ವರನು ಜಗತ್ತಿನ ಕತ್ತಲನ್ನು ತೆಗೆದುಹಾಕುವ ಅವಶ್ಯಕತೆ ಕಂಡನು. ನಿರಂತರವಾದ ಬೆಳಕನ್ನು ಕಾಪಾಡಲು, ತನ್ನ ಬೆವರಿನಿಂದ ಒಬ್ಬ ಮನುಷ್ಯರನ್ನು ಸೃಷ್ಟಿಸಿ, ಅವನಿಗೆ ಎಣ್ಣೆ ತೆಗೆಯುವ ಉದ್ಯೋಗಕ್ಕೆ ನಿಮಿಮಿಸಿದನು ಎಂದು ನಂಜುಂಡಯ್ಯ ಮತ್ತು ಐಯ್ಯರ್ (೧೯೩೦) ಒಂದು ದಂತಕಥೆಯನ್ನು ದಾಖಲಿಸಿದ್ದಾರೆ. ಆ ಮನುಷ್ಯನನ್ನು ಈ ಸಮುದಾಯದ ಮೂಲ ಜನಕ ಎಂದು ಹೇಳುತ್ತಾರೆ. ಇವರ ಉಲ್ಲೇಖದಿಂದ ಇವರನ್ನು ‘ಜ್ಯೋತಿಘನ’ ಎನ್ನುತ್ತಾರೆ. ಅದು ದೀಪಕ್ಕೆ ಎಣ್ಣೆ ಒದಗಿಸುವ ಉದ್ಯೋಗದ ಉಲ್ಲೇಖವನ್ನು ಹೊಂದಿದೆ.

ಕರ್ನಾಟಕದಲ್ಲಿ ಗಾಣಿಗರನ್ನು ಭಾಷೆಯ ಆಧಾರದ ಮೇಲೆ ಕನ್ನಡ, ತೆಲುಗು, ತುಳು, ಕೊಂಕಣಿ ಅಥವಾ ಮರಾಠಿ ಭಾಷೆಗಳ ಐದು ಬೇರೆ ಬೇರೆ ಭಾಷಾ ಗುಂಪುಗಳನ್ನಾಗಿ ವಿಂಗಡಿಸಬಹುದು. ಆದರೆ ಎಲ್ಲರಿಗೂ ಕನ್ನಡ ಭಾಷೆಯ ಪರಿಚಯವಿದ್ದು, ಕನ್ನಡ ಲಿಪಿಯನ್ನು ಉಪಯೋಗಿಸುವರು. ಇವರಲ್ಲಿ ಮುಖ್ಯವಾದ ಉಪಪಂಗಡಗಳೆಂದರೆ ಕಿರುಗಾಣಿಗ, ಹೆಗ್ಗಾಣಿಗ, ಜ್ಯೋತಿಘನ, ಪಂಚಮಸಾಲಿ ಗಾಣಿಗ, ಸಜ್ಜನ, ತೆಲೀ, ವನಿಯನ್, ಗಾಂಡ್ಲಾ, ಕರಿಗಾಣಿಗ, ಬಿಳಿಗಾಣಿಗ ಮತ್ತು ತುಳು ಗಾಣಿಗರು. ಎಣ್ಣೆಯನ್ನು ತೆಗೆಯುವ ರೀತಿ, ಎತ್ತಿನ ಜೋಡುಗಳ ಸಂಖ್ಯೆ, ಎಣ್ಣೆ ತೆಗೆಯಲು ಉಪಯೋಗಿಸುವ ಚೌಕಟ್ಟು ಮತ್ತು ಭಾಷೆಗಳ ಆಧಾರದ ಮೇಲೆ ಇವರಲ್ಲಿ ಉಪಪಂಡಗಳನ್ನು ಮಾಡಲಾಗುತ್ತದೆ. ಜ್ಯೋತಿಘನರಲ್ಲಿ ಸುಮಾರು ಹನ್ನೆರಡು ಹೊರಬಾಂಧವ್ಯದ ಬೆಡಗುಗಳಿವೆ, ಅವುಗಳಲ್ಲಿ ಐದು ಬೆಡಗುಗಳನ್ನು ಗುರುತಿಸಬಹುದು – ಬ್ರಹ್ಮೇಂದ್ರ, ದೇವೇಂದ್ರ, ಜ್ಯೊತಿಘನ, ಮಚೇಂದ್ರ ಮತ್ತು ನಾಗೇಂದ್ರ. ತಾಯಿಯ ಸಹೋದರನ ಮಗಳೊಡನೆ ಅಥವಾ ತಂದೆಯ ಸಹೋದರಿಯ ಮಗಳೊಡನೆ ವಿವಾಹಕ್ಕೆ ಅನುಮತಿಯಿದೆ. ಹಿರಿಯ ಮಗನು ತಂದೆಯ ನಂತರ ಮನೆಯ ಉತ್ತರಾಧಿಕಾರಿಯಾಗುವನು. ಇವರ ವಿವಾಹ ಶಾಸ್ತ್ರವಿಧಿಗಳೆಂದರೆ ನಿಶ್ಚಿತಾರ್ಥ, ಧಾರೆ ಇತ್ಯಾದಿ. ಶವವನ್ನು ಹೂಳಿ, ಸೂತಕವು ಹತ್ತು ದಿನಗಳವರೆಗೆ ಇರುತ್ತದೆ.

ಗಾಣಿಗರಲ್ಲಿ ಅನೇಕರು ಸಾಂಪ್ರದಾಯಿಕ ಉದ್ಯೋಗವಾದ ಎಣ್ಣೆ ತೆಗೆಯುವುದನ್ನು ಮಾಡುವರು. ಇವರಲ್ಲಿ ಕೆಲವರು ಭೂಮಾಲೀಕರು ಮತ್ತು ಕೃಷಿಕರು ಇದ್ದಾರೆ. ಇವರಲ್ಲಿ ಬಹಳಷ್ಟು ಜನರು ಭೂಮಿಯಿಲ್ಲದೆ ಕೃಷಿ ಕೂಲಿಗಳಾಗಿ ಕೆಲಸ ಮಾಡುವವರು ಇದ್ದಾರೆ. ಇವರು ಅನುಸರಿಸುವ ಬೇರೆ ಉದ್ಯೋಗಳೆಂದರೆ ಸಣ್ಣ ವ್ಯಾಪಾರ, ಸ್ವಯಂ ಉದ್ಯೋಗ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿ. ಇವರ ದೇವರುಗಳೆಂದರೆ ನರಸಿಂಹ, ಶಿವ, ಚೆಲುವರಾಯಸ್ವಾಮಿ, ಆಂಜನೇಯ, ಮಾರಿಯಮ್ಮ, ಬಸವಣ್ಣ ಮುಂತಾದವು. ಇವರು ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಗಾಣಿಗರು ಲಿಂಗಾಯತ ಉಪಜಾತಿಯಲ್ಲಿ ಗುರುತಿಸಿಕೊಳ್ಳುತ್ತಾರೆ.

ನೋಡಿ:

Hadimani, R.N., 1983. ‘Poverty Backwardness Among the Ganigas in Karnataka’. Economic Review.

Setty, Sripada., 1986. Ganigaru  (in Kannada). Vyjayanthi : Uttara Kannada, Jilla Sanskritika Sangha, Mysore