ಗಾಮೊಕ್ಕಲು ತಮ್ಮನ್ನು ತಾವು ಗೌಡರೆಂದು ಕರೆದುಕೊಳ್ಳುವ ವಿಚಾರವನ್ನು ಎಂಥೋವನ್ ಪ್ರಸ್ತಾಪ ಮಾಡುತ್ತಾರೆ. ಇವರನ್ನು ಒಕ್ಕಲಿಗ ಪಟಗಾರ, ಗ್ರಾಮ ಗೌಡ ಎಂದು ಕರೆಯುತ್ತಾರೆ. ಇವರು ಗೌಡ ಎನ್ನುವ ಹೆಸರುಗಳನ್ನು ಬಳಸುತ್ತಾರೆ. ಎಂಥೋವನ್ (೧೯೨೨:೩೫೨) ಇವರು ಒಕ್ಕಲು ಅಥವಾ ಉಳುಮೆ ಮಾಡುವ ಸಮುದಾಯಕ್ಕೆ ಸೇರಿದವರು. ಕುಮಟಾ ತಾಲೂಕಿನ ಗಾಮೊಕ್ಕಲು ತಮ್ಮನ್ನು ಪಟಗಾರರೆಂದು ಕರೆದುಕೊಳ್ಳುವುದುಂಟು.

ಗಾಮೊಕ್ಕಲು, ಎಂದು ಕರೆಯಲಾಗುವ ಬುಡಕಟ್ಟಿನವರು  ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಹೊನ್ನಾವರ ತಾಲೂಕಿನ ಗಂಗಾವಳಿ, ಅಘನಾಶಿನಿ ಹಾಗೂ ಶರಾವತಿ ನದಿ ತೀರದ ಕೊಳ್ಳ ಪ್ರದೇಶಗಳಲ್ಲಿ ನೆಲೆಸಿದ ಒಕ್ಕಲು ಬುಡಕಟ್ಟಿನ ಒಂದು ಪಂಗಡ. ತಮ್ಮನ್ನು ಇವರು ಗಾಮೊಕ್ಕಲು ಎಂದು ಕರೆದುಕೊಳ್ಳುತ್ತಾರೆ. ಶಿರಸಿ, ಸಿದ್ಧಾಪುರ ತಾಲೂಕುಗಳಲ್ಲಿ ನೆಲೆಸಿರುವ ಗಾಮೊಕ್ಕಲು ಗ್ರಾಮಗೌಡ, ಪಟಗಾರ, ಗೊಂಡ, ಕೊಟ್ಟೆ ಒಕ್ಕಲು ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುವ ಇವರು ಒಂದೇ ಸಮುದಾಯಕ್ಕೆ ಸೇರಿದ್ದಾರೆ. ಈ ಎಲ್ಲ ಪಂಗಡಗಳ ಜಾತಿ ವಾಚಕ ಹೆಸರು ‘ಗಾಮೊಕ್ಕಲು’ ಎನ್ನುವುದನ್ನು ಕಂಡುಕೊಳ್ಳಬಹುದು. ಗೊಂಡ, ಗೌಡ, ಪಟಗಾರ  ಮುಂತಾದ ಹೆಸರುಗಳ ಗಾಮೊಕ್ಕಲು ಬಡುಕಟ್ಟಿನ ಅಡ್ಡ ಹೆಸರುಗಳು. ಕೊಟ್ಟೆ ಒಕ್ಕಲು ಎನ್ನುವುದು ಅಡಿಕೆ ಗೊನೆಗೆ ಕೊಟ್ಟೆ ಕಟ್ಟುವ ವೃತ್ತಿಯಿಂದ ಬಂದ ಹೆಸರಾಗಿದೆ. ಗಾಮೊಕ್ಕಲು ಉಳಿದ ಒಕ್ಕಲು ಪಂಗಡಗಳಿಗಿಂತ ಮೊದಲು ಕಾಡುಜೀವನವನ್ನು ತೊರೆದು ಗ್ರಾಮವನ್ನು ಕಟ್ಟಿಕೊಂಡು, ಗ್ರಾಮವಾಸಿಗಳಾಗಿ ಒಕ್ಕಲುತನವನ್ನು ಆಶ್ರಯಿಸಿ ತಮ್ಮನ್ನು ಗಾಮೊಕ್ಕಲೆಂದು ಕರೆದುಕೊಂಡಂತಿದೆ.

ಮೂಲತಃ ಒಂದೇ ಬುಡಕಟ್ಟಿಗೆ ಸೇರಿದ, ಕರೆವೊಕ್ಕಲು, ಗೊಂಡರು, ಗಾಮೊಕ್ಕಲು, ಹಾಲಕ್ಕಿವೊಕ್ಕಲು ಮುಂತಾದ ಒಕ್ಕಲು ಬುಡಕಟ್ಟುಗಳ ಮೂಲ ಕಸುಬು ಬೇಟೆ ಮತ್ತು ಕುಂಬ್ರಿ ಬೇಸಾಯ. ಕಾಲಾಂತರ ಕುಂಬ್ರಿ ಬೇಸಾಯಕ್ಕೆ ನಿಷೇದ ಹೇರಿದ್ದರಿಂದ ಈ ಬುಡಕಟ್ಟಿನ ಜನರು ಕ್ರಮೇಣ ಗುಡ್ಡಗಾಡನ್ನು ಬಿಟ್ಟು ಕರಾವಳಿಯ ಬೈಲು ಪ್ರದೇಶದೆಡೆಗೆ ವ್ಯಾಪಿಸಿದಂತಿದೆ. ಒಕ್ಕಲು ಗುಂಪುಗಳಲ್ಲಿ ಒಂದು ಗುಂಪು ಕಾಡು ಹಾಗೂ ಕರಾವಳಿಯ ಬಯಲು ಪ್ರದೇಶಗಳಲ್ಲಿ ನೆಲೆ ನಿಂತು ಭತ್ತದ ಬೇಸಾಯ ಹಾಗೂ ಅದಕ್ಕೆ ಪೂರಕವಾಗುವಂತೆ ಹಾಲು-ಹೈನು ವೃತ್ತಿ ಎರಡನ್ನು ರೂಢಿಸಿಕೊಂಡು ಹಾಲಕ್ಕಿ ಒಕ್ಕಲಾದರು. ಇನ್ನೊಂದು ಪಂಗಡ ಕಾಡು ತ್ಯಜಿಸಿ, ಕರಾವಳಿಯ ನದೀ ತೀರದ ಬಯಲು ಗ್ರಾಮಗಳಲ್ಲಿ ನೆಲೆಸಿ ಒಕ್ಕಲುತನವನ್ನು ಆರಂಭಿಸಿ ಗಾಮೊಕ್ಕಲು ಎನಿಸಿಕೊಂಡರು.

ಗಾಮೊಕ್ಕರಲ್ಲಿ ಕುಲದೇವರ ಸಾಂಸ್ಕೃತಿಕ ಬಳ್ಳಿಗಳು ಸಸ್ಯ, ಪಶು, ಪ್ರಾಣಿಗಳ ಹೆಸರುಗಳಿಂದ ಹುಟ್ಟಿದವುಗಳು. ಎಂಥೋವನ್ ಅವರು ತಮ್ಮ ಗ್ರಂಥದಲ್ಲಿ ಗಾಮೊಕ್ಕಲಲ್ಲಿ ಇರುವ ಅಜ್ಜಿನಬಳ್ಳಿ, ಅರಶಿನಬಳ್ಳಿ, ಆನೆಬಳ್ಳಿ, ಹೊನ್ನೆಬಳ್ಳಿ, ಕಾಡಿನಬಳ್ಳಿ, ಜಿಂಡಿಬಳ್ಳಿ, ನೇರಲಬಳ್ಳಿ, ಹೀರೆಬಳ್ಳಿ, ಶೆಟ್ಟಿಬಳ್ಳಿ, ಶಿರನಬಳ್ಳಿ, ಸಿಂಗೆಬಳ್ಳಿ, ದೇವತೇರಬಳ್ಳಿ, ರೇಶ್ಮಿಬಳ್ಳಿ, ಮುಂತಾದ ಬಳ್ಳಿಗಳು ಗಾಮೊಕ್ಕಲುಗಳಲ್ಲಿ ಇದ್ದುದಾಗಿ ಪ್ರಸ್ತಾಪ ಮಾಡುತ್ತಾರೆ. ಕೆಲವು ಪ್ರದೇಶಗಳಲ್ಲಿ ಬಳ್ಳಿಗಳ ಬದಲಾಗಿ ‘ಬುಡ’ ಎಂದು ಹೇಳುತ್ತಾರೆ. ಅವುಗಳು ಎಂದರೆ ಮೊಟೇಬುಡ, ಬೋಳಜ್ಜಿ ಬುಡ, ಕೆಂಡಮಾಸ್ತಿಬುಡ, ಹೊನ್ನಮಾಸ್ತಿ ಬುಡ, ತುದಳ್ಳಿ ಮಾಸ್ತಿಬುಡ, ಮಲ್ಲಮಾಸ್ತಿಬುಡ, ಮಾಳಗೇರಿಬುಡ, ನೇತ್ರಾಣೆ ಜಟಕನಬುಡ, ಗರಡಿಬುಡ, ಓರಿಮನೆಬುಡ, ಕನ್ನಜ್ಜಿಮನೆಬುಡ, ಹೀಗೆ ಇನ್ನೂ ಮುಂತಾದ ಬುಡಗಳ ಹೆಸರುಗಳು ಇವರಲ್ಲಿ ಕಂಡುಬರುತ್ತವೆ.

ಒಂದೇ ಬಳ್ಳಿ ಇಲ್ಲವೆ ಬುಡಕ್ಕೆ ಸೇರಿದ ಹೆಣ್ಣು ಗಂಡುಗಳ ಪರಸ್ಪರ ವಿವಾಹಕೂಡದೆಂಬ ನಿಷೇಧವಿದೆ. ವಿಭಿನ್ನ ಬಳ್ಳಿಗೆ ಸೇರಿದ ಗಂಡ ಹೆಂಡಿರ ಮಕ್ಕಳಲ್ಲಿ ಗಂಡು ಮಕ್ಕಳು ತಂದೆಯ, ಹೆಣ್ಣು ಮಕ್ಕಳು ತಾಯಿಯ ಬಳ್ಳಿಗೆ ಸೇರುತ್ತಾರೆ. ಈ ಮೇಲಿನ ಅಂಶಗಳಿಂದ ನಮಗೆ ಇವರಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿ, ಮಾತೃಪ್ರಧಾನ ಹಾಗೂ ಪಿತೃಪ್ರಧಾನ ಕುಟುಂಬ ಪದ್ಧತಿಗಳೂ ಇರುವುದು ತಿಳಿದುಬರುತ್ತದೆ. ವಿವಾಹ ವಿಚ್ಛೇದನೆ ಹಾಗೂ ಮರು ವಿವಾಹಕ್ಕೆ ಅವಕಾಶವಿದೆ. ಹೆಂಗಸರೂ ಕೂಲಿಗಳಾಗಿ ದುಡಿಯುವ ಮೂಲಕ ಮನೆಯ ಆದಾಯಕ್ಕೆ ಸಹಾಯ ಮಾಡುತ್ತಾರೆ. ಮನೆಗೆ ಹಿರಿಯ ಗಂಡು ಮಗನೇ ತಂದೆಯ ನಂತರ ಉತ್ತರಾಧಿಕಾರಿಯಾಗುತ್ತಾನೆ. ಜೀವನದ ಧಾರ್ಮಿಕ ಕ್ರಿಯಾಚರಣೆಗಳಲ್ಲಿ ನಾಮಕರಣ, ಮುಂಡನ, ಕಿವಿ ಚುಚ್ಚುವುದು, ಇವುಗಳನ್ನು ಎಲ್ಲ ಕುಟುಂಬದವರೂ ಮಾಡಿಸುತ್ತಾರೆ. ಮದುವೆಯ ವಿಧಿಗಳಲ್ಲಿ, ವರನ ಕಡೆಯವರನ್ನು ಸ್ವಾಗತಿಸುವುದು, ಧಾರೆ, ಹಿರಿಯರಿಂದ ಆಶೀರ್ವಾದ, ಅಕ್ಷತೆ ಹಾಕುವುದು ಹಾಗೂ ತಾಳಿ ಕಟ್ಟುವುದು ಸೇರಿವೆ. ಶವವನ್ನು ಸುಡುತ್ತಾರೆ ಹಾಗೂ ಸುಟ್ಟ ಮೂಳೆಗಳನ್ನು ಸಮುದ್ರದಲ್ಲಿ ಮೂರನೇ ದಿನ ಚೆಲ್ಲಿ ಹನ್ನೆರಡನೇ ದಿನ ತಿಥಿ ಮಾಡುತ್ತಾರೆ, ಅದಕ್ಕೆ ‘ಶಾಂತಿಹೋಮ’ ಮಾಡಿಸುವುದು ಎನ್ನುತ್ತಾರೆ.

ತೋಟಗಾರಿಕೆ, ಉಳುಮೆ, ಪಶುಸಂಗೋಪನೆ ಇವರ ಸಾಂಪ್ರದಾಯಿಕ ವೃತ್ತಿಗಳಾಗಿವೆ. ವ್ಯಾಪಾರ, ಸರ್ಕಾರಿ-ಖಾಸಗಿ ಸಂಸ್ಥೆಗಳಲ್ಲಿ ನೌಕರಿ ಹಾಗೂ ಸ್ವ-ಉದ್ಯೋಗಗಳನ್ನು ಈಚೆಗೆ ಪ್ರಾರಂಭಿಸಿದ್ದಾರೆ. ಇವರ ಸಾಂಪ್ರದಾಯಿಕ ಕೋಮಿನ ಸಂಘಟನೆ ತಮ್ಮ ಕೋಮಿನಲ್ಲಿ ಜಗಳಗಳನ್ನು ಬಗೆಹರಿಸುತ್ತದೆ. ಇವರಲ್ಲಿ ಯಜಮಾನ ಹಾಗೂ ಬುದ್ಧಿವಂತ ಮುಖ್ಯರು. ಇವರು ಮುಖ್ಯವಾಗಿ ತಿರುಪತಿಯ ವೆಂಕಟೇಶ್ವರ ದೇವರನ್ನು ಪೂಜಿಸುತ್ತಾರೆ. ಇವರ ಕೋಮಿನ ದೇವರೆಂದರೆ ಹಿರೇಬೈಲದೇವರು. ಇವರ ಧಾರ್ಮಿಕ ಯಾತ್ರಾ  ಸ್ಥಳಗಳೆಂದರೆ – ಗೋಕರ್ಣ, ಧರ್ಮಸ್ಥಳ ಹಾಗೂ ತಿರುಪತಿ.

ಹಾಲಕ್ಕಿ ವೊಕ್ಕಲು, ಕರೆ ಒಕ್ಕಲು, ಗೊಂಡರು ಮುಂತಾದ ಒಕ್ಕಲು ಬುಡಕಟ್ಟುಗಳಿಗೆ ಹೋಲಿಸಿದರೆ ಗಾಮೊಕ್ಕಲು ಬುಡಕಟ್ಟಿನ ಮೇಲೆ ಆದ ಆಧುನಿಕತೆಯ ಪ್ರಭಾವ ಮತ್ತು ಪರಿಣಾಮ ಸ್ವಲ್ಪಮಟ್ಟಿಗೆ ತೀವ್ರವಾಗಿದೆ ಎಂದು ಹೇಳಬಹುದು. ಇದಕ್ಕೆ ಕಾರಣ ಒಕ್ಕಲು ಬುಡಕಟ್ಟು ಪಂಗಡಗಳಿಗಿಂತ ಗಾಮೊಕ್ಕಲು ಆಧುನಿಕತೆಗೆ ಬೇಗನೆ ಸ್ಪಂದಿಸಿ ಬದಲಾವಣೆಗೆ ಒಳಗಾಗಿದ್ದಾರೆ. ಆಧುನಿಕತೆಯ ಕಾರಣದಿಂದಾಗಿ ಕೆಲವೇ ಕೆಲವು ಗಾಮೊಕ್ಕಲು ಸುಧಾರಣೆ ಹಾಗೂ ಪ್ರಗತಿಯನ್ನು ಕಂಡರೆ, ಬಹುಸಂಖ್ಯಾತ ಗಾಮೊಕ್ಕಲು ಬಡತನದಲ್ಲಿ ಜೀವಿಸುತ್ತಿದ್ದಾರೆ. ಇವರ ಅಭಿವೃದ್ಧಿ ಹಾಗೂ  ಪ್ರಗತಿಗೆ ಸರಕಾರ ಪ್ರತ್ಯೇಕ ಯೋಜನೆಗಳನ್ನು ರೂಪಿಸಿ ಇವರ ಬದುಕಿಗೊಂದು ನೆಲೆ ತೋರಿಸುವುದು ಅವಶ್ಯಕವಾಗಿದೆ.

ನೋಡಿ:

Sames M. Fampberr, 1984. Gazetter of Bombay Presidency, Canara District

ನಾಯರ್, ಎನ್.ಆರ್., ೧೯೯೮. ‘ಗಾಮಾಕ್ಕಲು’, ಎಚ್.ಜೆ.ಲಕ್ಕಪ್ಪಗೌಡ (ಸಂ),ಕರ್ನಾಟಕದ ಬುಡಕಟ್ಟುಗಳು, ಕರ್ನಾಟಕ ಜಾನಪದ  ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು