ಗಾಳದ ಕೊಂಕಣಿಗಳನ್ನು, ಕೊಂಕಣಸ್ಥರೆಂದು ಸಹ ಕರೆಯುವರು. ಇವರದು ವಲಸೆ ಬಂದ ಸಮುದಾಯ. ಒಂದು ವರದಿಯ ಪ್ರಕಾರ, ಉಲ್ಲಾಳದ ರಾಣಿ ಅಬ್ಬಕ್ಕ ಮತ್ತು ಪೋರ್ಚುಗೀಸರ ಮಧ್ಯೆ ನಡೆದ ಯುದ್ಧದಲ್ಲಿ ಹೋರಾಡಲು ದಕ್ಷಿಣ ಕನ್ನಡದ ಮಂಗಳೂರಿನ ಹತ್ತಿರಕ್ಕೆ ಗೋವಾದಿಂದ ಹೋಗಿದ್ದರು. ಯುದ್ಧದಲ್ಲಿ ಸೋತ ನಂತರ ಪೋರ್ಚುಗೀಸರು ಇವರನ್ನು ಸೆರೆ ಹಿಡಿದರು. ಅನಂತರ ಬಿಡುಗಡೆಯಾದಾಗ ಇವರು ವಾಪಸ್ಸಾಗದೆ ಸ್ಥಳೀಯ ಹೆಂಗಸರನ್ನು ಮದುವೆಯಾಗಿ ತುಳು ಮಾತನಾಡುವ ಸಮುದಾಯದ ಪದ್ಧತಿ ಮತ್ತು ಸಂಪ್ರದಾಯಗಳನ್ನು ಅಳವಡಿಸಿಕೊಂಡರು.

ಇವರು ಗೋವಾದಲ್ಲಿ ‘ಗಳವ’ ಸ್ಥಳಕ್ಕೆ ಸೇರಿದ್ದರಿಂದ ಮತ್ತು ಕೊಂಕಣಿಯನ್ನು ಮಾತನಾಡುತ್ತಿದ್ದರಿಂದ, ಅವರನ್ನು ‘ಗಳವ’ ಕೊಂಕಣಿಗಳೆಂದು ಕರೆಯುತ್ತಿದ್ದರು. ಅನಂತರ ಇವರು ಗಳದ ಕೊಂಕಣಿಗಳೆಂದು ಹೆಸರು ಪಡೆದಿರಬಹುದು. ಇವರು ‘ನಾಯಕ’ ಎಂಬ ವಿಶೇಷಣ ಹೊಂದಿರುವರು. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರಗಳಲ್ಲಿ ವಾಸಿಸುವರು. ದ್ರಾವಿಡ ಭಾಷೆಯಾದ ತುಳುವನ್ನು, ಇಂಡೋ-ಆರ್ಯನ್ ಭಾಷೆಯಾದ ಕೊಂಕಣಿಯನ್ನು, ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುವರು. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸಮುದಾಯದಲ್ಲಿ ವಿಧುರನ ಮದುವೆಗೆ ಅನುಮತಿಯಿದೆ. ಹಿರಿಯ ಮಗನು ತಂದೆಯ ನಂತರ ಕುಟುಂಬದ ಉತ್ತರಾಧಿಕಾರಿಯಾಗುವನು. ನಾಮಕರಣವು ಮಗು ಹುಟ್ಟಿದ ಹನ್ನೊಂದನೇ ದಿನದಲ್ಲಿ ನಡೆಯುವುದು. ವಿವಾಹದ ಧಾರ್ಮಿಕ ವಿಧಿಗಳಲ್ಲಿ ಪ್ರಮುಖವಾದವುಗಳೆಂದರೆ, ಧಾರೆ ಮತ್ತು ತಾಳಿ ಕಟ್ಟುವುದು. ಶವವನ್ನು ಸುಡುತ್ತಾರಲ್ಲದೆ ವರ್ಷಕ್ಕೊಂದು ಬಾರಿ ಪೂರ್ವಜರನ್ನು ಆರಾಧಿಸುತ್ತಾರೆ.

ಸಾಂಪ್ರದಾಯಿಕವಾಗಿ ಇವರು ಮೀನುಗಾರರು. ಇವರಲ್ಲಿ ಬಹು ಜನರು ಕೃಷಿ ಕೆಲಸಗಾರರಾರಿ, ಹಂಚು ಹಾಗೂ ಗೋಡಂಬಿ ಕಾರ್ಖಾನೆಗಳ ಕಾರ್ಮಿಕರಾಗಿದ್ದಾರೆ. ಇವರ ಮಹಿಳೆಯರು ಬೀಡಿ ಕಟ್ಟುವುದು ಸರ್ವೇ ಸಾಮಾನ್ಯ. ಈ ಸಮುದಾಯವು ‘ಗಳದ ಕೊಂಕಣಸ್ಥ ಜಾತಿ ಅಭ್ಯುದಯ ಸಂಘ, ಮಂಗಳೂರು’ ಎಂಬ ಸಂಘವನ್ನು ಹೊಂದಿದೆ. ಅದು ೧೯೫೫ರಲ್ಲಿ ಸ್ಥಾಪನೆಗೊಂಡಿದ್ದು, ಸಮುದಾಯದ ಜನರ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆಂದು ಕೆಲಸ ಮಾಡುತ್ತಿದೆ. ಮಂಗಳಾದೇವಿ ಹಾಗೂ ಕೃಷ್ಣ ಇವರ ಕುಲದೇವರುಗಳು. ಇವರು ಆಧುನಿಕ ಶಿಕ್ಷಣ, ಸಂಪರ್ಕ ಮಾಧ್ಯಮ ಮತ್ತು ಬ್ಯಾಂಕ್ ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಿರುವರು. ಇವರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಪರಿಸ್ಥಿತಿಗಳು ಸುಧಾರಣೆಯಾಗಬೇಕಾಗಿದೆ.