ಗಿಡ್ಡಿಡ್ಕಿ ಕಣಿ ಹೇಳುವವರ ಸಮುದಾಯ. ಇವರನ್ನು ಕರ್ನಾಟಕದಲ್ಲಿ ಪಿಂಗ್ಲೆಗಳೆಂದು ಕರೆಯುವರು. ಮರಾಠಿಯಲ್ಲಿ ಪಿಂಗ್ಲೆ ಎಂದರೆ ‘ಕಣಿಗಾರರು’ ಎಂದರ್ಥ. ಇವರು ಮುಖ್ಯವಾಗಿ ಉತ್ತರ ಕನ್ನಡದ ಕರಾವಳಿ ಪ್ರದೇಶಗಳಲ್ಲಿ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ತಮ್ಮನ್ನು ತಾವು ‘ಗೊಂಡ್ಲಿ’ ಗಳೆಂದು ಕರೆದುಕೊಳ್ಳುವರು. ಇವರು ಮನೆಯಲ್ಲಿ ಮರಾಠಿಯನ್ನು ಮಾತನಾಡುತ್ತಾರೆ. ಕನ್ನಡದಲ್ಲಿಯೂ ಮಾತನಾಡಬಲ್ಲರು. ಇವರು ಮನೆಯಲ್ಲಿ ದೇವನಾಗರಿ ಲಿಪಿಯನ್ನು ಬಳಸಿ, ಹೊರಗಿನವರೊಂದಿಗೆ ಕನ್ನಡ ಲಿಪಿಯನ್ನು ಉಪಯೋಗಿಸುವರು.

ಒಕ್ಕಡ, ಮುಕ್ಕಿ, ಭಾಗವತ ಮತ್ತು ವಸ್ತೇರ ಇವು ಇವರ ಬೆಡಗುಗಳು. ಇವರು ಬೆಡಗುಗಳ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿ, ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ ಪದ್ಧತಿ ಅನುಸರಿಸುವರು. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ವಿಧವೆ ಮತ್ತು ವಿಧುರರ ವಿವಾಹವು ರೂಢಿಯಲ್ಲಿದೆ. ಸಾಮಾನ್ಯವಾಗಿ ಪಿತ್ರಾರ್ಜಿತ ಆಸ್ತಿಯನ್ನು ಎಲ್ಲಾ ಗಂಡು ಮಕ್ಕಳಿಗೆ ಸಮನಾಗಿ ಹಂಚಲಾಗುತ್ತದೆ. ಹಿರಿಯ ಮಗನು ತಂದೆಯ ನಂತರ ಮನೆಯ ಮುಖ್ಯಸ್ಥನಾಗುವನು. ವಿವಾಹ ಪ್ರಮುಖ ಶಾಸ್ತ್ರವಿಧಿಗಳು ಎಂದರೆ ಕುಂಕುಮದ ನೀರು ಎರೆಚುವುದು, ಸುರಗಿನೀರು, ಧಾರೆಮುಹೂರ್ತ ಮತ್ತು ದೇವರುಗಳನ್ನು ಆರಾಧಿಸುವುದನ್ನು ಒಳಗೊಂಡಿದೆ. ಶವವನ್ನು ಸುಡುವರು, ತಿಥಿ ಎಂಬ ಧಾರ್ಮಿಕ ಶಾಸ್ತ್ರ ವಿಧಿಗಳನ್ನು ಹನ್ನೆರಡನೆಯ ದಿವಸ ಆಚರಿಸುವರು.

ಗಿಡ್ಡಿಡ್ಕಿ ಸಾಂಪ್ರದಾಯಿಕವಾಗಿ ಕಣಿಗಾರರು ಮತ್ತು ಭಿಕ್ಷೆ ಬೇಡುವವರಾಗಿದ್ದರು. ಆದರೆ ಈಗ ಅಲ್ಯುಮಿನಿಯಂ ಪಾತ್ರೆಗಳನ್ನು ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಮಾರುವುದು ಇವರ ಪ್ರಮುಖ ಉದ್ಯೋಗವಾಗಿದೆ. ಕೆಲವರು ಭೂಮಿಯನ್ನು ಹೊಂದಿದ್ದು ಅದನ್ನು ಉಳುವರು. ಇವರು ತರಕಾರಿ ಮಾರುವ, ಸೈಕಲ್ ರಿಪೇರಿ ಮಾಡುವ, ಹಳೇ ಬಾಟಲಿ ಸಂಗ್ರಹಿಸುವ ವ್ಯಾಪಾರಗಳಲ್ಲಿ ತೊಡಗಿದ್ದಾರೆ. ಇವರು ಮುಖ್ಯವಾಗಿ ದುರ್ಗಮ್ಮ, ಲಕ್ಷಿ, ಈಶ್ವರ ಮತ್ತು ಸಿದ್ದೇಶ್ವರರನ್ನು ಆರಾಧಿಸುವರು. ಲಿಂಗಾಯತ ಜಂಗಮರು ಇವರ ಎಲ್ಲಾ ಧಾರ್ಮಿಕ ಶಾಸ್ತ್ರ ವಿಧಿಗಳನ್ನು ನಡೆಸುವರು. ಇವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ್ದಿದ್ದಾರೆ.