ಗುಜರಾತಿಗಳನ್ನು ಕರ್ನಾಟಕದಲ್ಲಿ ಕುಚ್ಚಿ ಮತ್ತು ಗುಜ್ಜರೆಂದು ಕರೆಯುತ್ತಾರೆ. ಇವರು ಕರ್ನಾಟಕದ ಪ್ರಮುಖ ನಗರಗಳಲ್ಲಿ ಕಂಡುಬರುತ್ತಾರೆ. ಇವರು ತಮ್ಮ ಹೆಸರಿಗೆ ಜೊತೆಗೆ ‘ಷಾ’ ಎಂದು ಸೇರಿಸಿಕೊಳ್ಳುತ್ತಾರೆ. ವಿಷಾ, ದಷಾ ಹಾಗೂ ಪಾಂಜಾ ಇವರ ಉಪಜಾತಿಗಳು. ಜೈನಧರ್ಮವನ್ನು ಪಾಲಿಸುತ್ತಾರೆ. ಗುಜರಾತಿ ಇವರ ಮಾತೃಭಾಷೆ, ಕನ್ನಡ ಮತ್ತು ಹಿಂದಿಯನ್ನು ಮನೆಯ ಹೊರಗೆ ಮಾತನಾಡಲು ಬಳಸುತ್ತಾರೆ. ಗುಜರಾತಿ ಲಿಪಿಯನ್ನು ಮನೆಯವರ ಜೊತೆಗೆ, ಕನ್ನಡ ಲಿಪಿಯನ್ನು ಬೇರೆಯವರ ಜೊತೆ ವ್ಯವಹರಿಸುವಾಗ ಬಳಸುತ್ತಾರೆ. ತಮ್ಮ ಕೋಮಿನ ಹಂತದಲ್ಲಿ ಒಳಬಾಂಧವ್ಯ ವಿವಾಹವನ್ನು ಉಪಜಾತಿಗಳಲ್ಲಿ ಹೊರಬಾಂಧವ್ಯ ವಿವಾಹವನ್ನು ರೂಢಿಯಲ್ಲಿಟ್ಟುಕೊಂಡಿದ್ದಾರೆ. ವಿವಾಹ ವಿಚ್ಛೇದನ ಹಾಗೂ ಮರು ವಿವಾಹಗಳಿಗೆ ಅವಕಾಶವಿಲ್ಲ. ಹೆರಿಗೆಯ ವಿಧಿಯಾದ ‘ಅಗೈನಿ’ಯನ್ನು ಗರ್ಭಿಣಿಯಾದ ಏಳನೇ ತಿಂಗಳಲ್ಲಿ ಆಚರಿಸುತ್ತಾರೆ. ನಾಮಕರಣದ ಶಾಸ್ತ್ರವನ್ನು ಮಗು ಹುಟ್ಟಿದ ಆರನೇ ದಿನಕ್ಕೂ ಮಾಡುತ್ತಾರೆ. ಮದುವೆಯ ಕಾರ್ಯಗಳು ಮದುಮಗಳ ಮನೆಯಲ್ಲಿ ನಡೆಯುತ್ತದೆ. ಶವವನ್ನು ಸುಟ್ಟು ಮೂಳೆಗಳನ್ನು ನೀರಿನಲ್ಲಿ ಬಿಡುತ್ತಾರೆ. ಸಾವಿನ ಸೂತಕವು ಹನ್ನೆರಡು ದಿನಗಳವರೆಗೂ ಇದ್ದು, ಹದಿಮೂರನೇ ದಿನ ತಿಥಿಯನ್ನು ಮಾಡುತ್ತಾರೆ.

ಗುಜರಾತಿಗಳು ಸಾಂಪ್ರದಾಯಿಕವಾಗಿ ಹತ್ತಿಯ ವ್ಯಾಪಾರಿಗಳು. ಇತ್ತೀಚೆಗೆ ಇವರಲ್ಲಿ ಕೆಲವರು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನೌಕರರಾಗಿದ್ದಾರೆ. ‘ದಷಾ ಓಸ್ಟಾಲ್’ ಎನ್ನುವ ಸಮುದಾಯದ ಸಂಘಟನೆಯು ಇವರ ಒಳಿತಿಗಾಗಿ ಕೆಲಸಮಾಡುತ್ತಿದೆ. ಇವರು ಜೈನರ ಶ್ವೇತಾಂಬರ ಪಂಗಡಕ್ಕೆ ಸೇರಿದ್ದು ‘ಪದ್ಮಾವತಿ’ಯನ್ನು ಪೂಜಿಸುತ್ತಾರೆ. ಜೊತೆಗೆ ಜವಾಲ, ಕಾಳಿದೇವಿ, ಇಂದ್ರ, ಮಹಾವೀರ ಹಾಗೂ ಇತರೆ ತೀರ್ಥಂಕರರನ್ನೂ ಪೂಜಿಸುತ್ತಾರೆ. ಜೈನರ ಎಲ್ಲಾ ಹಬ್ಬಗಳನ್ನು ಇವರು ಆಚರಿಸುತ್ತಾರೆ. ಇವರ ಹೆಂಗಸರಿಗೆ ಬಟ್ಟೆಗಳ ಮೇಲೆ ಹೆಣಿಗೆ ಹಾಕುವುದು, ಚಿತ್ತಾರ, ಕುಸೂತಿ ಬಿಡಿಸುವುದರಲ್ಲಿ ನೈಪುಣ್ಯತೆ ಇದೆ. ಮದುವೆಯ ಸಂದರ್ಭದಲ್ಲಿ ಜಾನಪದ ಹಾಗೂ ಸಂಪ್ರದಾಯಿಕ ಹಾಡುಗಳನ್ನು ಇವರು ಹಾಡುತ್ತಾರೆ. ಈ ಕೋಮಿನಲ್ಲಿ ಸಾಕಷ್ಟು ಜನ ಉದ್ದೀಮೆದಾರರು ಹಾಗೂ ವೃತ್ತಿಪರರಿದ್ದಾರೆ. ಆಧುನೀಕರಣದ ಎಲ್ಲಾ ರೀತಿಯ ಉಪಯೋಗಗಳನ್ನು ಇವರು ಪಡೆದುಕೊಂಡಿದ್ದಾರೆ.

ನೋಡಿ:

Pocock, David F., 1957.’Inclusion and Excluion : A Process in the Caste System of Gujarat’, Southwestren Journal of Anthropology  13, no.1 : 19-31