ಗುಡಿಕಾರರನ್ನು ರಥಕಾರ ಹಾಗೂ ಗೌಡಚಿತ್ರಕಲ ಎಂದು ಕರೆಯುತ್ತಾರೆ. ಗುಡಿಕಾರ ಎನ್ನುವ ಹೆಸರನ್ನು ಗುಡಿ ಎಂಬ ಪದದಿಂದ ಬಳಸಲಾಗಿದೆ. ‘ಗುಡಿ’ ಎಂದರೆ ‘ದೇವಸ್ಥಾನ’ ಎಂದು ಅರ್ಥ. ಇವರು ಮೊದಲು ದೇವಸ್ಥಾನದಲ್ಲಿ ಕೆತ್ತನೆ ಕೆಲಸಮಾಡುತ್ತಿದ್ದವರು, ಬಣ್ಣ ಬಳಿದು ದೇವಸ್ಥಾನವನ್ನು ಸುಂದರಗೊಳಿಸುವ ವೃತ್ತಿಗೆ ಸಂಬಂಧಿಸಿದವರು ಎಂದು ಥರ್ಸ್ಟನ್ (೧೯೦೯) ಹೇಳುತ್ತಾರೆ. ಗುಡಿಕಾರ ಅಥವಾ ಶ್ರೀಗಂಧ ಮರ ಕೆತ್ತನೆಕಾರರು, ದೇವಸ್ಥಾನ ಕಟ್ಟುವವರು, ಚಿತ್ರಕಾರರು ಹಾಗೂ ಬಣ್ಣ ಬಳಿಯುವವರು, ಮೂಲತಃ ಗೋವಾದವರು. ಇವರು ಕರ್ನಾಟಕ್ಕೆ ವಲಸೆ ಬಂದವರು. ಮೊದಲು ಪೋರ್ಚುಗೀಸ್ ಆಕ್ರಮಣಕಾರರು ಇವರನ್ನು ಕ್ರೈಸ್ತಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸಿದ್ದರೆಂದು ತಿಳಿದುಬರುತ್ತದೆ. ಇವರು ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಮನೆಯಲ್ಲಿ ಹಾಗೂ ಸಂಬಂಧಿಗಳೊಡನೆ ಕೊಂಕಣಿ ಮಾತನಾಡುವ ಇವರು ಇತರರೊಂದಿಗೆ ಕನ್ನಡದಲ್ಲಿ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ.

ಗುಡಿಕಾರರಲ್ಲಿ ಏಳು ಹೊರಬಾಂಧವ್ಯ ಗೋತ್ರಗಳನ್ನು ಗುರುತಿಸಬಹುದು. ಅವುಗಳನ್ನು ಆರಾಧ್ಯ ದೈವಗಳ ಜೊತೆಗೆ ಕೊಡಲಾಗಿದೆ. ವಶಿಷ್ಟ (ರೇವಲನಾಥ), ವಿಶ್ವಾಮಿತ್ರ (ಮೈಲಾರ, ಮಲಸನಾರಾಯಣ) ಭಾರಧ್ವಾಜ (ಚೇಲು ಮಹಾಮಾಯ), ಗೌತಮ (ವೆಂಕಟರಮಣ), ಕಶ್ಯಪ (ವೆಂಕಟರಮಣ), ಕಂಶ್ಯ (ಸುಬ್ರಹ್ಮಣ್ಯ) ಹಾಗೂ ಕೌಂಡಿನ್ಯ (ಶಾಂತಿದುರ್ಗ). ಇವರಿಗೆ ಚಿತ್ರಕಾರ, ಗುಡಿಕಾರ, ಸೇಥ್, ಸೇಥಿ, ಚೆಲ್ಕರ್, ಒಂದೊದಕ್ಕಾರ, ಪೀಣೆಕಾರ ಇತ್ಯಾದಿ ಮನೆತನದ ಹೆಸರುಗಳಿವೆ. ರಕ್ತ ಸಂಬಂಧಿ ಹಾಗೂ ಸೋದರ ಸಂಬಂಧಗಳಲ್ಲಿ ಮದುವೆಗೆ ಅವಕಾಶವಿದೆ. ವಿವಾಹ ವಿಚ್ಛೇದನಕ್ಕೆ ಆಸ್ಪದವಿಲ್ಲವಾದರು, ವಿಧುರರ ವಿವಾಹಕ್ಕೆ ಅವಕಾಶವಿದೆ. ಹಿರಿಯ ಗಂಡುಮಗ ತಂದೆ ನಂತರ ಮನೆಯ ಉತ್ತರಾಧಿಕಾರಿಯಾಗುತ್ತಾನೆ. ನಾಮಕರಣವನ್ನು ಮಗು ಹುಟ್ಟಿದ ಹನ್ನೊಂದನೇ ದಿನಕ್ಕೆ ಆಚರಿಸುತ್ತಾರೆ. ಗಂಡು ಮಕ್ಕಳಿಗೆ ಉಪನಯವನ್ನು, ಹೆಣ್ಣು ಮಕ್ಕಳಿಗೆ ಋತುಮತಿಯ ಕಾರ್ಯವನ್ನು ಮಾಡುತ್ತಾರೆ. ಮದುವೆಯ ಮುಖ್ಯ ಆಚರಣೆಗಳೆಂದರೆ ಅರಿಶಿಣ ಹಚ್ಚುವುದು, ತಾಳಿಕಟ್ಟುವುದು, ಇತ್ಯಾದಿ. ಇವರು ಶವವನ್ನು ಸುಡುತ್ತಾರೆ ಹಾಗೂ ಸೂತಕವು ಹತ್ತು ದಿನಗಳ ಕಾಲ ಇರುತ್ತದೆ. ಇವರ ಧಾರ್ಮಿಕ ಆಚರಣೆಗಳನ್ನು ಬ್ರಾಹ್ಮಣ ಪೂಜಾರಿಗಳು ಆಚರಣೆಗಳನ್ನು ನಡೆಸಿಕೊಡುತ್ತಾರೆ.

ಗುಡಿಕಾರರ ತಮ್ಮ ಸಾಂಪ್ರದಾಯಿಕ ವೃತ್ತಿ ಶ್ರೀಗಂಧದ ಮರದ ಕೆತ್ತನೆಗಳನ್ನು ಮಾಡಿ, ಚಿತ್ರಗಳನ್ನು ಕೆತ್ತಿ, ಬಣ್ಣ ಬಳಿಯುವುದು. ಜೊತೆಗೆ ಮರದ ಪೆಟ್ಟಿಗೆ, ಮೂರ್ತಿ, ಟೇಬಲ್‌ದೀಪ, ಕೀಚೈನು, ಬೀಸಣಿಕೆ ಮುಂತಾದ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ಹೆಂಗಸರು ಗಂಧದ ಕಟ್ಟಿಗೆಯಿಂದ ಹಾರಗಳನ್ನು, ಹೂವುಗಳನ್ನು ತಯಾರಿಸಿ ಕುಟುಂಬದ ಆದಾಯಕ್ಕೆ ಸಹಾಯ ಮಾಡುತ್ತಾರೆ. ಕಲ್ಲು ಹಾಗೂ ಮಣ್ಣಿನ ಮೂರ್ತಿಗಳನ್ನು ತಯಾರಿಸಿ ಬಣ್ಣ ಬಳಿಯುವ ಕೆಲಸವನ್ನು ಹೆಂಗಸರೂ ಮಾಡುತ್ತಾರೆ. ಇವರ ಸಮುದಾಯದ ಅಭಿವೃದ್ಧಿಗೆ ಕೆಲಸಮಾಡಲು ಸಂಘಟನೆಯನ್ನು ಮಾಡಿಕೊಂಡಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳನ್ನೂ ಇವರು ಕಲಾತ್ಮಕ ಕೆತ್ತನೆಗಳಿಗೆ ಪಡೆದಿದ್ದಾರೆ. ಇವರಿಗೆ ಕರ್ನಾಟಕದ ರಾಜ್ಯ ಕರ ಕುಶಲ ಮಾರಾಟ ಮಳಿಗೆಗಳ ಮೂಲಕ ಸ್ವಯಂ ಉದ್ಯೋಗ ಅವಕಾಶ ಕಲ್ಪಿಸುತ್ತಿದೆ.

ನೋಡಿ :

ರಾಯಕರ ಡಿ.ಜಿ., ೧೯೮೬. ಗುಡಿಕಾರ, ವೈಜಯಂತಿ, ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ, ಮೈಸೂರು.