ಗೂರ್ಖರು ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರಾದರೂ, ಕರ್ನಾಟಕದ ಎಲ್ಲಾ ಪಟ್ಟಣ ಹಾಗೂ ನಗರಗಳಲ್ಲಿ ವಾಸಿಸುತ್ತಾರೆ. ಇಂಡೋ-ಆರ್ಯನ್ ಭಾಷೆಯಾದ ನೇಪಾಳಿ ಇವರ ಮಾತೃಭಾಷೆ ಇತರರೊಂದಿಗೆ ಹಿಂದಿ ಹಾಗೂ ಕನ್ನಡದಲ್ಲಿ ವ್ಯವಹರಿಸುತ್ತಾರೆ. ಇವರು ಬೇರೆ ಬೇರೆ ಜಾತಿಗಳಿಗೆ ಸೇರಿದವರಾಗಿದ್ದರಿಂದ ಸಮಾಲೋಚನೆಯ ಮೂಲಕ ವಯಸ್ಕರ ಮದುವೆಗಳು ನಡೆಯುತ್ತವೆ. ಸಾಂಪ್ರದಾಯಿಕವಾಗಿ ಇವರ ಹೆಂಗಸರು ಮೂಗುಬಟ್ಟು ಹಾಗೂ ಬಣ್ಣ ಬಣ್ಣದ ಮಣಿಸರಗಳನ್ನು ಮದುವೆಯ ನಂತರ ಹಾಕಿಕೊಳ್ಳುತ್ತಿದ್ದರು. ಏಕಪತಿತ್ವ/ಪತ್ನಿತ್ವ ವಿವಾಹ ಪದ್ಧತಿ ಪಾಲಿಸುತ್ತಾರೆ. ಆಸ್ತಿಯು ಗಂಡು ಮಕ್ಕಳಲ್ಲಿ ಸಮನಾಗಿ ಹಂಚಲ್ಪಡುತ್ತದೆ. ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಮದುವೆ ಆಚರಣೆಯಲ್ಲಿ ಮೆರವಣಿಗೆ, ಕನ್ಯಾದಾನ, ಅಗ್ನಿಕುಂಡದ ಸುತ್ತ ಪ್ರದಕ್ಷಿಣೆ ಹಾಕುವುದು. ಶವ ಸುಟ್ಟು ಬೂದಿಯನ್ನು ಗಂಗಾ ನದಿಯಲ್ಲಿ ಬಿಡುತ್ತಾರೆ. ಸೂತಕವು ಹನ್ನೆರಡು ದಿನಗಳವರೆಗೆ ಇರುತ್ತದೆ.

ಗೂರ್ಖರನ್ನು ಮುಖ್ಯವಾಗಿ ಕಾಲವುಗಾರರಾಗಿ, ಮನೆಕಾಯುವವರಾಗಿ ಖಾಸಗಿ ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಬಳಸುತ್ತಾರೆ. “ನೇಪಾಳಿ ಸಹಕಾರಿ ಸಮೀತಿ” ಎನ್ನುವ ಕರ್ನಾಟಕದ ಸಂಘಟನೆಯು ಈ ಸಮುದಾಯದ ಅಭಿವೃದ್ಧಿಗೆ ೧೯೮೭ರಿಂದ ಕಾರ್ಯ ನಿರ್ವಹಿಸುತ್ತಿದೆ. ರಾಮ, ಕೃಷ್ಣ, ಭೈರವ ಹಾಗೂ ಭಗವತಿ ಇವರ ಆರಾಧ್ಯ ದೈವಗಳಾದರೂ, ಬುದ್ಧನನ್ನೂ ಕೂಡ ಪೂಜಿಸುತ್ತಾರೆ. ಇವರು ಹೋಳಿ, ದೀಪಾವಳಿ ಇತ್ಯಾದಿ ಹಬ್ಬಗಳನ್ನು ಆಚರಿಸುತ್ತಾರೆ. ಇವರಲ್ಲಿ ಜಾನಪದ ಸಾಂಪ್ರದಾಯಿಕ ಹಾಡುಗಳನ್ನು ಹಬ್ಬಹರಿದಿನಗಳಲ್ಲಿ ಹೆಂಗಸರು ಹಾಡುತ್ತಾರೆ. ಕೋಮಿನ ಸಮಾರಂಭಗಳಲ್ಲಿ ಗಂಡಸರು ಲೋಕಗೀತೆಗಳನ್ನು ಹಾಡುತ್ತಾರೆ. ಆಧುನಿಕ ವಿದ್ಯಾಭ್ಯಾಸದಲ್ಲಿ ಇವರಿಗೆ ಒಳ್ಳೆಯ ಮನೋಭಾವನೆಯಿದೆ. ಆಧುನಿಕ ಸಾಮಾಜಿಕ ವ್ಯವಸ್ಥೆಗಳನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸುತ್ತಿದ್ದಾರೆ.