‘ಗೊಂಡ‘, ಎಂಬ ಶಬ್ದ ತೆಲುಗು ಭಾಷೆಯ ‘ಕೊಂಡ’ ಎಂಬ ಶಬ್ದದಿಂದ ಬಂದದ್ದೆಂದು ಭಾಷಾವಿಜ್ಞಾನಿಗಳು ಅಭಿಪ್ರಾಯ. ‘ಕೊಂಡ’ ಎಂದರೆ ತೆಲುಗಿನಲ್ಲಿ ಗುಡ್ಡ ಅಥವಾ ಬೆಟ್ಟ ಎಂದು ಅರ್ಥ. ಕಾಲಾನಂತರ ‘ಕ’ ಕಾರ ‘ಗ’ಕಾರವಾಗಿ ಪರಿವರ್ತನೆಯಾಗಿ ‘ಗೊಂಡ’ ಎಂದು ರೂಪಾಂತರ ಹೊಂದಿರಬೇಕು. ವಿಂಧ್ಯ ಪರ್ವತದಲ್ಲಿ ಇವರು ಒಂದು ಬುಡಕಟ್ಟು ಸಮುದಾಯ ಮತ್ತು ಆ ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂದು ಕನ್ನಡ ನಿಘಂಟಿನಲ್ಲಿ ತಿಳಿಸಲಾಗಿದೆ. ಗೊಂಡ ಮತ್ತು ಗೌಡ ಎರಡೂ ಪದಗಳು ಒಂದೇ ಮೂಲದಿಂದ ಬಂದವು. ಬಯಲುಸೀಮೆಯ ಕಡೆ ಗೌಡ ಪದಕ್ಕೆ ಬದಲಾಗಿ ‘ಗೊಂಡ’ ಎಂದು ಬಳಸುವುದು ಕಂಡುಬರುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗೊಂಡರನ್ನು ಗೌಡರೆಂದೇ ಕರೆಯುತ್ತಾರೆ. ಗೊಂಡರು ತಮ್ಮನ್ನು ‘ಕೋಯಿತುರ’ ಅಥವಾ ‘ಕೋಯಿ’ ಎಂದು ಕರೆದುಕೊಳ್ಳುತ್ತಾರೆ. ಗೌಡರೇ ಗೊಂಡಗಾರಿವುದಾಗಿ ಜನರಲ್ ಕನ್ನಿಂಗ್ ಹ್ಯಾಮ್ ಹಲವಾರು ಸಾಕ್ಷಿಗಳೊಂದಿಗೆ ಹೇಳುತ್ತಾರೆ. ಗೊಂಡ ಶಬ್ದವನ್ನು ಹಲವಾರು ಅರ್ಥಗಳಲ್ಲಿ ವಿದ್ವಾಂಸರು ಚರ್ಚಿಸಿದ್ದಾರೆ. ಗೊಂಡರು ‘ಗೋಂಡಿ’ ಎಂಬ ಭಾಷೆಯನ್ನು ಮಾತನಾಡುತ್ತಾರೆ. ‘ಗೋಂಡಿ’ ಎಂಬುದು ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಒಂದು ಭಾಷೆ. ಆದರೆ ‘ಗೊಂಡರು’ ಎಂದು ಕರೆಯಲ್ಪಡುವ ವಿವಿಧ ಬುಡಕಟ್ಟಿನ ಜನರೂ ‘ಗೋಂಡಿ’ ಭಾಷೆಯನ್ನು ಮಾತ್ರ ಮಾತನಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಬೇರೆ ಬೇರೆ ಪ್ರದೇಶಗಳಲ್ಲಿ ಚದುರಿರುವ ಗೊಂಡರು ತಾವು ವಾಸಿಸುವ ಪ್ರದೇಶದ ಭಾಷೆಯನ್ನು ಮಾತನಾಡುತ್ತಾರೆ. ಹೀಗಾಗಿ ಗೊಂಡರಲ್ಲಿ ಗೊಂಡಿ ಭಾಷೆಯೇ ಗೊತ್ತಿಲ್ಲದೆ ಇತರ ಭಾಷೆಗಳನ್ನೂ ಮಾತನಾಡುವ ಜನರೂ ಇದ್ದಾರೆ.

ಕರ್ನಾಟಕದಲ್ಲಿ ಇವರು ಉತ್ತರ ಕನ್ನಡ, ಗುಲ್ಬರ್ಗಾ, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಬೀದರ್ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬಂದರೂ, ಇತರ ಜಿಲ್ಲೆಗಳಲ್ಲಿ ಇವರ ನೆಲೆಗಳನ್ನು ಗುರುತಿಸಬಹುದು. ಇವರ ಪೂರ್ವಜರು ಆಂಧ್ರಪ್ರದೇಶದಿಂದ ವಲಸೆ ಬಂದವರೆಂದು ಇವರು ನಂಬಿಕೊಂಡಿದ್ದಾರೆ. ಗೊಂಡರು ಆಂಧ್ರ ಪ್ರದೇಶದಿಂದ ಬಂದವರೆಂದು ಸಮರ್ಥಿಸಲು ಇವರ ಕುಲದೇವತೆ ತಿರುಪತಿ ತಿಪ್ಪಮ್ಮನಾಗಿರುವುದು ಒಂದು ಆಧಾರ. ಗೊಂಡರಲ್ಲಿ ಹಲವಾರು ಬಳ್ಳಿಗಳಿವೆ. ಅವುಗಳೆಂದರೆ ಅಜ್ಜರಬಳ್ಳಿ, ಆನೆಬಳ್ಳಿ, ಸೆಟ್ಟಿಬಳ್ಳಿ, ಸಿರಿನಬಳ್ಳಿ, ಹೊನ್ನಬಳ್ಳಿ, ಹಾಲಬಳ್ಳಿ, ರಾಯಬಳ್ಳಿ, ದಾವತರಬಳ್ಳಿ, ನಾಗಬಳ್ಳಿ, ಮಲ್ಲಿಗೆಬಳ್ಳಿ ಇತ್ಯಾದಿ. ಗೊಂಡರಲ್ಲಿ ಕಾಣುವ ಕೆಲವು ಬಳ್ಳಿಗಳು ಉತ್ತರ ಹಾಗೂ ದಕ್ಷಿಣ ಕನ್ನಡದ ಕೆಲವು ಬುಡಕಟ್ಟು ಹಾಗೂ ಜಾತಿಗಳಲ್ಲಿಯೂ ಕಂಡು ಬರುತ್ತವೆ.

ಗೊಂಡರ ಯುವಕ

ಗೊಂಡರ ಯುವಕ

ಗೊಂಡರ ಕುಟುಂಬಗಳಲ್ಲಿ ಪಿತೃಪ್ರಧಾನ ವ್ಯವಸ್ಥೆ ಕಂಡುಬರುತ್ತದೆ. ಹಿಂದೆ ಇವರಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆ ಹೆಚ್ಚಾಗಿರುವುದು ತಿಳಿದುಬರುತ್ತದೆ. ಇತ್ತೀಚೆಗೆ ವಿಭಕ್ತ ಕುಟುಂಬ ಪದ್ಧತಿ ಇವರಲ್ಲಿ ಕಂಡುಬರುತ್ತದೆ. ಗೊಂಡರಲ್ಲಿ ಬಾಲ್ಯ ವಿವಾಹದಿಂದ ಹಿಡಿದು ವಿಧವೆ, ವಿಧುರ, ವಿಚ್ಛೇದಿತರ ವಿವಾಹಕ್ಕೂ ಅವಕಾಶವಿದೆ. ಇವರಲ್ಲಿ ವಧು-ವರರ ವಯಸ್ಸಿಗೆ ಮಹತ್ವ ಇಲ್ಲದಿದ್ದರೂ ಬಳ್ಳಿಯ ವಿಷಯದಲ್ಲಿ ಹೆಚ್ಚು ಮಹತ್ವ ಕೊಡುತ್ತಾರೆ. ಒಂದೇ ಬಳ್ಳಿಯ ಹೆಣ್ಣು ಗಂಡುಗಳ ವಿವಾಹ ನಿಷಿದ್ಧವಾಗಿದೆ. ಆದ್ದರಿಂದ ವಿವಾಹದಲ್ಲಿ ಬಳ್ಳಿ ನೋಡಿ ಹೆಣ್ಣು ತರುವುದು ಪದ್ಧತಿ. ಹೆಂಗಸರು ವ್ಯವಸಾಯ, ಉರುವಲು ಸಂಗ್ರಹಣೆ, ಸಾಮಾಜಿಕ ಆಚರಣೆ, ಧಾರ್ಮಿಕ ಕಾರ್ಯಕ್ರಮ ಎಲ್ಲದರಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಾರೆ.

ಗೊಂಡರು ಮೂಲತಃ ಪಶುಸಂಗೋಪನೆ ಮಾಡುವವರು. ಚಿಲ್ಲರೆ ವ್ಯಾಪಾರ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಯಲ್ಲಿ ನೌಕರಿ ಇತ್ತೀಚೆಗೆ ಮಾಡುತ್ತಿದ್ದಾರೆ. ಚಾಪೆಗಳನ್ನು ಹೆಣೆಯುವುದು ಇವರು ವಿರಾಮ ಕಾಲದ ಹವ್ಯಾಸ. ಇವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಗಮನಿಸಿದರೆ, ಈ ಸಮುದಾಯದ ಜನರು ಹಿಂದುಳಿದ ಒಂದು ಸಮುದಾಯವೆಂದು ತಿಳಿದುಬರುತ್ತದೆ.

ಗೊಂಡರ ಹೋಳಿ ಕಲಾವಿದರು

ಗೊಂಡರ ಹೋಳಿ ಕಲಾವಿದರು

ನೋಡಿ:

ಮೈತ್ರಿ.ಕೆ.ಎಂ., ೧೯೯೪, ಬೀದರ ಜಿಲ್ಲೆಯ ಗೊಂಡ ಆದಿವಾಸಿ ಸಮುದಾಯ ಒಂದು ಸಮಾಜಶಾಸ್ತ್ರೀಯ ಅಧ್ಯಯನ, ಪಿ.ಎಚ್.ಡಿ. ಪದವಿಗಾಗಿ ಮೈಸೂರು  ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿದ ಮಹಾಪ್ರಬಂಧ, (ಅಪ್ರಕಟಿತ) ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ಹೆಗಡೆ ಎಲ್.ಆರ್., ೧೯೮೧. ಉತ್ತರ ಕನ್ನಡದ ಗೊಂಡರು; ಐ.ಬಿ.ಎಚ್. ಪ್ರಕಾಶನ, ಬೆಂಗಳೂರು ಪು ೩೧ರಿಂದ೩೩

ಸೈಯದ ಜಮೀರುಲ್ಲಾ  ಷರೀಫ್., ೧೯೯೩. ಗೊಂಡರ ಸಂಸ್ಕೃತಿ; ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು

ಶರೀಫ್.ಎಸ್.ಜೆ., ೧೯೮೭. ಗೊಂಡರು ಒಂದು ಸಾಂಸ್ಕೃತಿಕ ಅಧ್ಯಯನ, (ಅಪ್ರಕಟಿತ) ಪಿಹೆಚ್‌.ಡಿ.ಪ್ರಬಂಧ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಯಾಜಿ ನಾರಾಯಣ., ೧೯೮೬. ಗೊಂಡರು,  ವೈಜಯಂತಿ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ, ಮೈಸೂರು