ಗೊಂದಲಿಗರನ್ನು ಗೊಂಡಲ, ಘೂಂಡಲಿ, ಗೊಂಧಳಿ ಎಂದು ಕರೆಯುತ್ತಾರೆ. ಇವರು ಮಹಾರಾಷ್ಟ್ರ ಮೂಲದವರು. ಗೊಂದಲವೆಂದರೆ ಅದೊಂದು ದೊಂದಿಯ ನೃತ್ಯ. ಗೊಂದಲ ಎಂಬುದು ಒಂದು ಪೂಜಾ ವಿಧಾನ. ತಮ್ಮ ಆರಾಧ್ಯ ದೈವವಾದ ಅಂಬಾಭವಾನಿಯ ಮುಂದೆ ಇಡೀ ರಾತ್ರಿ ಪೌರಾಣಿಕ ಕಥೆಯನ್ನು ಹಾಡುತ್ತ ಕುಣಿಯುತ್ತಾರೆ. ‘ಗೊಂದಲ ಹಾಕುವುದು’ ಎಂದು  ಇದನ್ನು ಕರೆಯಲಾಗುತ್ತದೆ. ಹೀಗೆ ಗೊಂದಲ ಹಾಕುವವರೇ ಗೊಂದಲಿಗರು. ಗೊಂದಲಿಗರು ಜಮದಗ್ನಿ ಮಹರ್ಷಿಯೂ ಆತನ ಪತ್ನಿ ರೇಣುಕೆಯೂ ತಮ್ಮ ಜಾತಿಯ ಸ್ಥಾಪಕರೆಂದು ಹೇಳಿಕೊಳ್ಳಿತ್ತಾರೆ.

ಗೊಂದಲಿಗರು ಬಿಜಾಪುರ, ಉತ್ತರಕನ್ನಡ, ಧಾರವಾಡ, ಬೆಳಗಾವಿ ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬಂದರೂ, ಕರ್ನಾಟಕದ ಇತರೆ ಜಿಲ್ಲೆಗಳಲ್ಲಿಯೂ ಇದ್ದಾರೆ. ಮರಾಠಿ ಇವರ ಮಾತೃಭಾಷೆ. ಇವರು ಕನ್ನಡ ಭಾಷೆಯಲ್ಲೂ ಮಾತನಾಡಿ, ಕನ್ನಡ ಲಿಪಿಯನ್ನೂ ಬಳಸಬಲ್ಲರು. ಹೆಂಗಸರು ಹಚ್ಚೆಯಿಂದ ಸಿಂಗರಿಸಿಕೊಳ್ಳುತ್ತಾರೆ. ಗಂಡಸರು ಸಾಮಾನ್ಯವಾಗಿ ಪೇಟಾವನ್ನು ಬಳಸುತ್ತಾರೆ. ನಂಜುಂಡಯ್ಯ ಹಾಗೂ ಐಯ್ಯರ್ ಅವರು (೧೯೩೦) ಇವರಲ್ಲಿ ಸುಮಾರು ಎಂಟು ಒಳಬಾಂಧವ್ಯ ವಿವಾಹದ ಬೆಡಗುಗಳನ್ನು ಗುರುತಿಸಿದ್ದಾರೆ – ಧನಗಾರ, ಮರಾಠಾ, ಮಹರಟ್ಟಿ, ಕುಂಬಾರ, ಕದಮರಾಯ್, ರೇಣುಕಾರಾಯ್, ಮಾಲಿ ಹಾಗೂ ಅಕರಮಾ. ಇವುಗಳಲ್ಲಿ ಪರಸ್ಪರ ಕೊಡು ಕೊಳ್ಳುವಿಕೆ ಇಲ್ಲ. ಗೊಂದಲಿಗರ ಉಪನಾಮಗಳು ಈ ರೀತಿಯಲ್ಲಿ ಕಂಡು ಬರುತ್ತವೆ. ಬಡ್ಗ, ಧೆಂಬೆ, ಗಂಗಾವನ, ಗರುಡ, ಜುಗಲ, ಜಾಧವ, ಪಂಚಾಂಗಿ, ಗರೊಡ, ಗುರ್ನೆ, ವುಗ್ಟೆ, ಗುರಾ, ಗಾಯಕ್ ವಾಡ್, ದುಂಗು, ಧಮಾಲ, ಶಿಂಧೆ, ಠೆಂಕೆ, ತಾರ್ಚೆ, ಮರಾಠೆ, ಪಲಸ್ಕರ, ಸುಪಲಕರ, ಇತ್ಯಾದಿ.

ಗೊಂದಲಿಗರಲ್ಲಿ ಒಂದೇ ಬೆಡಗುಗಳಲ್ಲಿ ಮದುವೆ ಸಾಧ್ಯವಿಲ್ಲ. ತಂದೆಯ ಸಹೋದರಿಯ ಮಗಳ ಜೊತೆ ಅಥವಾ ತಾಯಿಯ ಸೋದರನ ಮಗಳ ಜೊತೆ ಮದುವೆಯಾಗಲು ಅವಕಾಶವಿದೆ. ಬೆಡಗುಗಳ ಮಟ್ಟದಲ್ಲಿ ಹೊರ ಬಾಂಧವ್ಯ ವಿವಾಹ ಪದ್ಧತಿ, ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ ಪದ್ಧತಿ ರೂಢಿಯಲ್ಲಿದೆ. ವಿವಾಹ ವಿಚ್ಛೇದನೆ ಅವಕಾಶ ಕೇವಲ ಗಂಡಸರಿಗೆ ಮಾತ್ರ ಇದೆ. ವಿಧವೆ, ವಿಧುರ, ವಿಚ್ಛೇದಿತರ ವಿವಾಹಕ್ಕೆ ಅವಕಾಶವಿದೆ. ಸ್ತ್ರೀಯು ಮನೆಯ ಆದಾಯದಲ್ಲಿ ಸಹಾಯಮಾಡಿ, ದಿನಗೂಲಿಗಳಾಗಿ ಗಂಡಸರ ಜೊತೆ ಕೆಲಸ ಮಾಡುತ್ತಾಳೆ. ತಂದೆಯ ನಂತರ ಹಿರಿಯ ಗಂಡುಮಗ ಮನೆಯ ಉತ್ತರಾಧಿಕಾರಿಯಾಗುವನು. ಮದುವೆಯ ಆಚರಣೆಗಳಲ್ಲಿ, ನಿಶ್ಚಿತಾರ್ಥ, ಕುಲದೇವತೆಯ ಪೂಜೆ, ಹಾರ ಬದಲಾಯಿಸಿಕೊಳ್ಳುವುದು, ಅಕ್ಷತೆ ಹಾಕುವುದು, ತಾಳಿ ಕಟ್ಟುವುದು ಇತ್ಯಾದಿ ಮುಖ್ಯವಾಗಿದೆ. ಇವರು ಶವವನ್ನು ಹೂಳುತ್ತಾರೆ ಅಥವಾ ಸುಡುತ್ತಾರೆ.

ಇವರ ಸಾಂಪ್ರದಾಯಿಕ ಕಾಯಕವೆಂದರೆ ಗೊಂದಲಿ ನೃತ್ಯ ಮಾಡಿ ದೇವರ ಹೆಸರಲ್ಲಿ ಭಿಕ್ಷೆ ಎತ್ತುವುದು. ಈಗ ಅವರಲ್ಲಿ ಬಹಳಷ್ಟು ಜನ ಕೃಷಿ ಮಾಡುತ್ತಿದ್ದಾರೆ. ಹಳೆಯ ಬಟ್ಟೆಗಳಿಂದ ಕೌದಿಯನ್ನು ಹೊಲೆಯುವ ಕೆಲಸಗಳನ್ನು ಮಾಡುತ್ತಾರೆ. ಇವರಿಗೆ ಹಳ್ಳಿಗಳಲ್ಲಿ ಸಾಂಪ್ರದಾಯಿಕ ಕೋಮಿನ ಸಂಘಟನೆಯಿದೆ. ಅದಕ್ಕೊಬ್ಬ ಹಿರಿಯನಿರುತ್ತಾನೆ. ರಾಜ್ಯಾದ್ಯಂತ ಒಂದು ಸಂಘಟನೆಯೂ ಇವರಲ್ಲಿದೆ. ಅದನ್ನು “ಕರ್ನಾಟಕ ಗೊಂದಲಿ ಸಮಾಜ ಸೇವಾ ಸಂಘ” ಎನ್ನುತ್ತಾರೆ. ಅದು ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತದೆ. ಇವರ ಸಾಮಾಜಿಕ, ಆರ್ಥಿಕ ಸ್ಥಿತಿ ಸುಧಾರಣೆಯಾಗಬೇಕಾಗಿದೆ.

ನೋಡಿ:

ರಾಮಣ್ಣ ಕ್ಯಾತನಹಳ್ಳಿ., ೧೯೮೨. ಗೊಂದಲಿಗರು ಒಂದು ಅಧ್ಯಯನ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು