ಗೊಡ್ಡರು, ಮುಗೇರರನ್ನು ಹೋಲುವ ಒಂದು ಉಪಪಂಗಡ ಎಂದು ಹೇಳಲಾಗುತ್ತದೆ. ಹಾಗೆಯೇ ಬಡಗು ದಿಕ್ಕಿನ ಗೊಡ್ಡ ಜಾತಿಯವರು ಮುಗೇರ ಮೂಲ ದೈವವಾದ ‘ಇರುವೆರ ಮುಗ್ಗೇರ’ ಎಂಬ ದೈವವನ್ನು ಆರಾಧಿಸುವರು. ಆದರೆ ಗೊಡ್ಡ ಪಂಗಡದಲ್ಲಿ ಕೆಲವರು ಮುಂಡಾಲ ಸಮುದಾಯದ ಕುಲದೈವವಾದ ‘ಕೋಟೆ ಬಬ್ಬು’ವಿನ ಆರಾಧಕರಾಗಿರುವರು. ಪೂರ್ವದಲ್ಲಿ ಇವರ ಸಮುದಾಯದಲ್ಲಿ ಒಬ್ಬ ಗದ್ದೆಯನ್ನು ಉಳಲು ಕೋಣ ಸತ್ತಿದ್ದ ಕಾರಣ ನೊಗಕ್ಕೆ ಒಂದು ಗೊಡ್ಡು ಎಮ್ಮೆಯನ್ನು ಕೋಣದೊಂದಿಗೆ ಕಟ್ಟಿ ಉಳುತ್ತಿದ್ದಾಗ, ಈ ದೃಶ್ಯ ಕಂಡ ಇತರೆ ಸವರ್ಣೀಯರು ಈತನ ಅವಿವೇಕಕ್ಕೆ ಬೈದು ಈತನನ್ನು ಗೊಡ್ಡ ಎಂದು ಕರೆದುದರಿಂದಾಗಿ ಈ ಪಂಗಡದ ಅದೆ ಹೆಸರು ಪ್ರಚಲಿತಯುತು ಎಂದು ಹೇಳಲಾಗುತ್ತದೆ. (ಕಮಲಾಕ್ಷ, ೧೯೯೪).

ಗೊಡ್ಡರು ಹೆಚ್ಚಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡು ಬರುತ್ತಾರೆ. ಕುಂದಾಪುರದ ಪ್ರದೇಶದಲ್ಲಿ ಇವರು ಆಡುವ ಭಾಷೆ ಕನ್ನಡ. ಆದರೆ ಉಡುಪಿ ಮತ್ತು ಮಂಗಳೂರು ಪ್ರದೇಶಗಳಲ್ಲಿ ತುಳು ಭಾಷೆಯನ್ನು ಮಾತನಾಡುತ್ತಾರೆ. ಮನೆಯಲ್ಲಿ ತುಳುವನ್ನು ಮಾತನಾಡಿ ಬೇರೆ ಸಮುದಾಯಗಳ ಸಂಪರ್ಕದಲ್ಲಿ ತುಳು ಹಾಗೂ ಕನ್ನಡ ಎರಡೂ ಭಾಷೆಗಳನ್ನು ಉಪಯೋಗಿಸುವರು. ಗೊಡ್ಡರಲ್ಲಿ ‘ಬಾರಿ’ ಎಂಬ ಮಾತೃಪ್ರಧಾನ ಹೊರಬಾಂಧವ್ಯ ವಿವಾಹದ ಕೆಲವು ಬೆಡಗುಗಳನ್ನು ಗುರುತಿಸಬಹುದು. ತಾಯಿಯ ಸಹೋದರನ ಮಗಳು ಮತ್ತು ತಂದೆಯ ಸಹೋದರಿಯ ಮಗಳೊಂದಿಗೆ ವಿವಾಹಕ್ಕೆ ಅವಕಾಶವಿದೆ. ಇವರಲ್ಲಿ ವಿಧವೆಯ ಪುನರ್‌ವಿವಾಹಕ್ಕೆ ಅವಕಾಶವಿದೆ. ಶವವನ್ನು ಹೂಳುವ ಮತ್ತು ಸುಡುವ ಎರಡೂ ಪದ್ಧತಿಗಳು ಆಚರಣೆಯಲ್ಲಿವೆ. ಶವವನ್ನು ಸುಟ್ಟದೆ ಉತ್ತರಾದಿ ಕ್ರಿಯೆಯನ್ನು ಹದಿಮೂರನೇ ದಿನ, ಹೂಳಿದರೆ ನಲವತ್ತನೇ ದಿನ ಉತ್ತರಾದಿ ಕ್ರಿಯೆ ಮಾಡುವ ಪದ್ಧತಿ ಇವರಲ್ಲಿದೆ.

ಗೊಡ್ಡರ ಪ್ರಮುಖ ಉದ್ಯೋಗವೆಂದರೆ ಕೃಷಿ. ಇವರ ಬೇರೆ ಉದ್ಯೋಗಗಳೆಂದರೆ, ಕಲ್ಲು  ಒಡೆಯುವುದು, ರಿಕ್ಷಾ ಓಡಿಸುವುದು, ಸರಕು ಗಾಡಿ ಎಳೆಯುವುದು ಹಾಗೂ ಬೀಡಿ ಕಟ್ಟುವುದು. ಇವರಲ್ಲಿ ಕೆಲವರು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಗೊಡ್ಡರ ಮುಖ್ಯವಾದ ದೇವತೆಗಳೆಂದರೆ ಭೂತಗಳಾದ ಚೌಡಿ, ಗುಳಿಗ, ಜಮಡಿ ಮುಂತಾದವು. ಆಧುನಿಕ ಶಿಕ್ಷಣದ ಬಗ್ಗೆ ಇವರ ಮನೋವೃತ್ತಿಯು ಅರೆಬರೆಯಾಗಿದೆ. ಗೊಡ್ಡರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಸುಧಾರಣೆಯಾಗಬೇಕಾದ ಅಗತ್ಯವಿದೆ.

ನೋಡಿ:

ಕಮಲಾಕ್ಷ, ೧೯೯೪. ದಕ್ಷಿಣಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇತಿಹಾಸ,  ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು