ಗೊರವ, ಪದದ ಅರ್ಥ ಗೌರವಕ್ಕೆ ಅರ್ಹನಾದವನು ಎಂದು. ಆದರೆ ಹಿಂದಿನಿಂದಲೂ ಮೇಲ್ಜಾತಿಯ ಜನರು ಇವರ ಬಗ್ಗೆ ತಿರುಕ, ಭಿಕ್ಷುಕ ಮುಂತಾದ ಹೀನಾರ್ಥಗಳನ್ನೇ ಬಳಸಿದ್ದಾರೆ. ಗುರು ಎಂಬ ಶಬ್ದದವೆ ಪ್ರಥಮ ಕಾಲಾಂತರದಲ್ಲಿ ಗುರವ, ಗೊರವ ಎಂದಾಗಿರಬಹುದೆಂದು ವಿದ್ವಾಂಸರು ಗುರುತಿಸಿದ್ದಾರೆ. ಗೊರವ ಎಂದರೆ ದೇವಸ್ಥಾನದ ಗುರು ಅಥವಾ ಭಗವಂತನ ಪಾದದ ಸಮೀಪದಲ್ಲಿರುವವನು ಎಂದರ್ಥ. ಉತ್ತರ ಕರ್ನಾಟಕದಲ್ಲಿ ಗುರುವ ಎಂಬ ಪ್ರತ್ಯೇಕ ಪಂಗಡವೊಂದಿದೆ. ಹನುಮಂತ ದೇವರ ಸೇವೆ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಒಂದು ಸಮುದಾಯ. ಮೈಲಾರಲಿಂಗದ ಗುಡ್ಡದ ಗೊರವರಿಗೂ ಇತರೆ ಗೊವರಿಗೂ ವ್ಯತ್ಯಾಸಗಳಿರುತ್ತವಾದರೂ, ಗೊರವರು ಮೈಲಾರಲಿಂಗನ ಕ್ಷೇತ್ರದ ಅರ್ಚಕರಾಗಿದ್ದಾರೆಂಬುದು ಗಮನಾರ್ಹ. ಕಿಟೆಲ್ ನಿಘಂಟಿನಲ್ಲಿ ಗೊರವ ಎಂದರೆ ‘ಶೈವ ತಿರುಕರ ಒಂದು ವರ್ಗ’ ಎಂದಿದೆ. ಗೊಗ್ಗ ಎನ್ನುವ  ಪದಕ್ಕೆ ಮೈಲಾರಲಿಂಗನ ಅನುಯಾಯಿಗಳು ಎಂದು ಕಿಟೆಲ್ ಅರ್ಥೈಸುತ್ತಾರೆ. ಗೊರವರು ಕ್ರಿ.ಶ.೮ನೇ ಶತಮಾನಕ್ಕಿಂತ ಹಿಂದಿನಿಂದಲೂ ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ವಾಸಿಸುತ್ತಾರೆಂದು ಕೆಲವು ದಾಖಲೆಗಳಿಂದ ವ್ಯಕ್ತವಾಗುತ್ತದೆ.

ಭಿಕ್ಷೆ ಇವರ ಸಾಂಪ್ರದಾಯಿಕ ವೃತ್ತಿಯಾದರೂ ಅದರ ಹಿಂದೆ ಉನ್ನತವಾದ ಧಾರ್ಮಿಕ ಧ್ಯೇಯ ಒಂದಿತ್ತು ಎಂಬುದು ತಿಳಿದುಬರುತ್ತದೆ. ಗೊರವರು ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿದ್ದು, ಆಂಧ್ರಪ್ರದೇಶದಲ್ಲಿ ವಿರಳವಾಗಿದ್ದಾರೆ. ಕರ್ನಾಟಕದಲ್ಲಿ ಚಿಕ್ಕಮಗಳೂರು, ಬಳ್ಳಾರಿ, ಕೊಪ್ಪಳ, ಗದಗ, ಹಾವೇರಿ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಗುಲ್ಬರ್ಗ, ಮುಂತಾದ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಗೊರವರನ್ನು ಕರ್ನಾಟಕದ ಉತ್ತರ ಭಾಗಗಳಲ್ಲಿ ವಗ್ಗಪ್ಪ, ವಗ್ಗಯ್ಯ ಎಂದೂ ಕರೆಯಲಾಗುತ್ತದೆ. ಮಹಾರಾಷ್ಟ್ರದಲ್ಲಿ ವಾಘ್ಯಾಗಳೆಂದು ಕರೆಯುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಗೊಗ್ಗಯ್ಯ, ಗಗ್ಗಯ್ಯ, ಕಡಬಡಯ್ಯ, ಗೊಡಬಡ್ಡಯ್ಯ ಇತ್ಯಾದಿ ಹೆಸರುಗಳಿಂದ ಕರೆಯುವುದು ರೂಢಿಯಲ್ಲಿದೆ. ಗೊರವರನ್ನು ಅನೇಕ ಬಗೆಯಲ್ಲಿ ಗುರುತಿಸಬಹುದು-ಕರಡಿಗೊರವರು, ನಾಯಿಗೊರವರು, ಕಿನ್ನರಿ ಗೊರವರು, ಕಾರಣಿಕದ ಗೊರವರು, ಇತ್ಯಾದಿ. ಗೊರವರಲ್ಲಿ ಕಂಡುಬರುವ ಪ್ರಮುಖ ಬೆಡಗುಗಳೆಂದರೆ-ಆಲದ ಮರ, ಕುದರೆ, ನಾಯಿ, ಕರಡಿ, ಸರ್ಪ, ಹುತ್ತ, ಇತ್ಯಾದಿ.

ಗೊರವರ ಆರಾಧ್ಯ ದೈವಗಳು ಮೈಲಾರಲಿಂಗ, ಬೆಟ್ಟದ ದೇವರು. ನಾಯಿ ಮೈಲಾರಲಿಂಗನ ಲಾಂಛನವಾಗಿದೆ. ಕುದರೆ ವಾಹನವಾಗಿದೆ. ಇದರಿಂದಾಗಿ ಗೊರವರು ತಾವು ದೇವರ ವಾಹನ ಎನ್ನುವ ಭಾವದಿಂದ ಕುದುರೆಕಾರರ ಸೇವೆ, ದೇವರ ಎದುರಿನಲ್ಲಿ ನಾಯಿಗಳಂತೆ ಬೊಗಳಾಟ ಮುಂತಾದ ಕ್ರಿಯಾವಿಧಿ ನಡೆಸುತ್ತಾರೆ. ಇವರು ಮೈಲಾರಲಿಂಗನನ್ನು ಮಾರ್ತಾಂಡ ಭೈರವ ಎಂದೂ ಕರೆಯುತ್ತಾರೆ.

ಇವರಲ್ಲಿ ಬೆಡಗಿನ ಹಂತದಲ್ಲಿ ಹೊರಬಾಂಧವ್ಯ ವಿವಾಹಗಳು ಆಚರಣೆಯಲ್ಲಿವೆ. ರಕ್ತ ಸಂಬಂಧಿಗಳ ಮದುವೆ, ಸೋದರಮಾವನ ಮಗಳ ಜೊತೆಗಿನ ಮದುವೆಗಳಿಗೆ ಅವಕಾಶವಿದೆ. ಗಂಡುಮಕ್ಕಳು ತಂದೆಯ ಆಸ್ತಿಯಲ್ಲಿ ಸಮಪಾಲುದಾರರಾಗುತ್ತಾರೆ. ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ‘ರಿಡ್ಡಿ’ ಎನ್ನುವ ಜನನ ಸೂತಕ ಕಳೆಯುವ ವಿಧಿಯನ್ನು ಪೂರೈಸಿದ ನಂತರ ನಾಮಕರಣವನ್ನು ಹದಿಮೂರನೇ ದಿನ ಮಾಡುತ್ತಾರೆ. ಮದುವೆಯ ಮುಖ್ಯ ಆಚರಣೆಗಳಲ್ಲಿ ನಿಶ್ಚಿತಾರ್ಥ, ವರನ ಕಡೆಯವರನ್ನು ಬರಮಾಡಿಕೊಳ್ಳುವುದು, ಹಾರಗಳನ್ನು ಬದಲಾಯಿಸಿಕೊಳ್ಳುವುದು, ಅಕ್ಷತೆಯನ್ನು ಹಾಕುವುದು, ಮಂಗಳಸೂತ್ರವನ್ನು ಕಟ್ಟುವುದು ಮುಂತಾದವು ಸೇರಿವೆ. ಇವರ ಈಗಿನ ವೃತ್ತಿಗಳೆಂದರೆ ಪೂಜಾರಿಕೆ, ಹಾರಗಳನ್ನು ತಯಾರಿಸುವುದು, ಎಲೆಗಳಿಂದ ಊಟದ ತಟ್ಟೆ ತಯಾರಿಸುವುದು, ಮುಂತಾದವು. ಇತ್ತೀಚೆಗೆ ಇವರಲ್ಲಿ ಸ್ವಲ್ಪ ಜನ ಸರ್ಕಾರಿ ಸೇವೆಯಲ್ಲಿ ಇದ್ದಾರೆ. ಇವರು ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ.

ನೋಡಿ :

ಪರಮಶಿವಯ್ಯ. ಜೀ.ಶಂ., ೧೯೮೧. ಮೈಲಾರ ಲಿಂಗ ಮತ್ತು ಗೊರವರು, ಐ.ಬಿ.ಎಚ್.ಬೆಂಗಳೂರು.

ನೇಗಿನಹಾಳ ಎಂ.ಬಿ., ಮೈಲಾರಲಿಂಗ-ಖಂಡೋಬಾ,  ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಶಿವಶಂಕರ್ ಚಕ್ಕರೆ., ೧೯೯೩. ಗೊರವರ ಸಂಸ್ಕೃತಿ; ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಗೊರವರು

ಗೊರವರು

ಹಾಡುತ್ತಿರುವ ಗೊರವರು

ಹಾಡುತ್ತಿರುವ ಗೊರವರು