ಗೊಲ್ಲರನ್ನು ಯಾದವ, ಅಡವಿಗೊಲ್ಲ ಮತ್ತು ಗೋಪಾಲರೆಂದು ಕರೆಯುವರು. ಇವರ ಸಮುದಾಯದ ಹೆಸರನ್ನು ಸಂಸ್ಕೃತದ ‘ಗೋಪಾಲ’ ಎಂಬ ಶಬ್ದದಿಂದ, ಅಂದರೆ ‘ಹಸುವನ್ನು ಸಾಕುವವ’ ಎಂಬ ಅರ್ಥದಿಂದ ಬಂದಿದೆ ಎಂದು ಹೇಳಲಾಗುತ್ತದೆ. ಗುಲ್ಲ, ಗುಲ್ಲಾಯಿ, ಗೊಲ್ಲವರು, ಗವಾಲಿ ಮತ್ತು ಢಾಂಗರು ಗೊಲ್ಲರ ಪರ್ಯಾಯ ಪದವಾಗಿದೆ. ಮದ್ರಾಸ್ ಪ್ರದೇಶದ ಗೊಲ್ಲರು ಒಂದು ಜಾತಿಯಾಗಿದ್ದು, ಇವರು ಕುರಿಗಳು, ಆಡು, ಹಸು, ಸಾಕುವರು ಮತ್ತು ಹಾಲನ್ನು ಮಾರುವರು ಎಂದು ಥರ್ಸ್ಟನ್ (೧೯೦೯) ವಿವರಿಸಿದ್ದಾನೆ. ಇವರಲ್ಲಿ ಪಾಕನಾತಿ, ಗೌಡ, ಕಾಡು, ಕೊನಾರ, ಎರ್ರಾ‍, ಪೆದ್ದಂಟಿ, ಆಸ್ತಾಂದ್ರ, ಮಸ್ತಿ, ಪೂಜಾ, ಪುನಿ, ಕರ್ಣ, ರಾಚ, ಊರು, ಮುಂತಾದ ಸುಮಾರು ಹದಿಮೂರು ಉಪಜಾತಿಗಳಿವೆ. ಅವುಲ (ಹಸು), ಚಿಂತಲ (ಹುಣಸೆ), ಗುರಮ್ (ಕುದುರೆ), ನಕ್ಕ(ನರಿ), ಕಠಾರಿ (ಕತ್ತಿ), ಮೂಗಿ(ಮೂಕ), ಮೇಕೆಲೆ (ಮೇಕೆಗಳು), ಚೆತ್ತುಲ (ಮರಗಳು), ಚೆವ್ವುಲ (ಕಿವಿಗಳು), ಗೊರೆಲ(ಆಡುಗಳು), ಗೊರ್ಲಂತ ಪುಲಿ (ಹುಲಿ), ರಾಗಿಂಡಾಲ (ಪೀಪಲ), ಸದ್ದಿಕುಡು (ತಣ್ಣನೆ ಅನ್ನ ಅಥವಾ ಆಹಾರ), ಮುಷ್ಟಗಿ ಮುಂತಾದ ಸುಮಾರು ಹದಿನಾರು ಹೊರಬಾಂಧವ್ಯದ ಬೆಡಗುಗಳನ್ನು ಗುರುತಿಸಲಾಗಿದೆ.

ಕರ್ನಾಟಕದಲ್ಲಿ ಗೊಲ್ಲರು, ಚಿತ್ರದುರ್ಗ, ಬೆಂಗಳೂರು, ಹಾಸನ, ಬಳ್ಳಾರಿ, ರಾಯಚೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುವರು. ಇವರು ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿ ಉಪಯೋಗಿಸುವರು. ಇವರಲ್ಲಿ ಎರಡು ಪ್ರಮುಖ ಉಪಪಂಗಡಗಳಿವೆ. ಅವೆಂದರೆ ಕಾಡುಗೊಲ್ಲ ಅಥವಾ ಅಡವಿಗೊಲ್ಲ ಅಂದರೆ, ಕಾಡಿನಲ್ಲಿ ವಾಸಿಸುವರು ಮತ್ತು ಊರುಗೊಲ್ಲ ಅಂದರೆ, ಹಳ್ಳಿಗಳಲ್ಲಿ ವಾಸಿಸುವರು. ತಂದೆಯ ಸಹೋದರಿಯ ಮಗಳು, ತಾಯಿಯ ಸಹೋದರನ ಮಗಳ ವಿವಾಹಕ್ಕೆ ಅನುಮತಿಯಿದೆ. ಇವರಲ್ಲಿ ವಧುದಕ್ಷಿಣೆಯು ರೂಢಿಯಲ್ಲಿದೆ. ಹಿರಿಯ  ಮಗನಿಗೆ ತಂದೆಯ ನಂತರ ಮನೆಯ ಉತ್ತರಾಧಿಕಾರವು ದೊರೆಯುತ್ತದೆ. ವಿಧವೆ ಮತ್ತು ವಿಧುರರ ಮದುವೆಯು ಆಚರಣೆಯಲ್ಲಿದೆ. ಹೆಂಗಸರು ಕೃಷಿಕಾರ್ಯ ಮತ್ತು ಪ್ರಾಣಿಸಾಕಾಣಿಕೆಯಲ್ಲಿ ಭಾಗವಹಿಸುವರು. ಗರ್ಭಿಣಿಯರಿಗೆ ಏಳನೇ ತಿಂಗಳ ‘ಸೀಮಂತ’, ಮಗು ಹುಟ್ಟಿದ ನಲವತ್ತು ದಿನದೊಳಗೆ ನಾಮಕರಣ ಮಾಡುತ್ತಾರೆ. ಇವರು ಹನ್ನೊಂದು ದಿನಗಳವರೆಗೆ ಶವಸಂಸ್ಕಾರದ ಸೂತಕವನ್ನು ಆಚರಿಸುವರು. ಸಾಂಪ್ರದಾಯಿಕ ಮತ್ತು ಪ್ರಸ್ತುತ ಉದ್ಯೋಗಗಳೆಂದರೆ ಆಡು ಮತ್ತು ಮೇಕೆ ಸಾಕುವುದು. ಇವರಲ್ಲಿ ಹೆಚ್ಚಿನವರು ಭೂರಹಿತರು. ಕೃಷಿ ಕಾರ್ಮಿಕರಾಗಿ ಕೆಲಸ ಮಾಡುವರು. ಇವರಲ್ಲಿ ಕೆಲವರು ಸರ್ಕಾರಿ ಸೇವೆಯಲ್ಲಿರುವರು. ಗೊಲ್ಲರು ಜಾತಿ ಪಂಚಾಯತಿಯನ್ನು ಹೊಂದಿರುವರು. ‘ಗೌಡ’ನು ಇವರ ಮುಖ್ಯಸ್ಥನಾಗಿದ್ದು ಜಗಳಗಳನ್ನು ಬಗೆಹರಿಸಿ ಅವಶ್ಯವಿದ್ದಲ್ಲಿ ಸಾಮಾಜಿಕ ಬಹಿಷ್ಕಾರ ವಿಧಿಸಿ, ಅಪರಾಧಿಗಳಿಗೆ ದಂಡ ಹಾಕುವನು. ಪ್ರಾದೇಶಿಕ ಮಟ್ಟದಲ್ಲಿ ‘ಯಾದವ ಸಂಘ’ ವೆಂಬ ಸಂಘಟನೆಯನ್ನು ಹೊಂದಿದ್ದು, ಅದು ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುವುದು. ಇವರ ಪ್ರಮುಖ ದೇವತೆಗಳೆಂದರೆ ಚಿತ್ರಲಿಂಗೇಶ್ವರ, ಪಟ್ಟಲಿಂಗೇಶ್ವರ, ಕುಮಟಲಿಂಗೇಶ್ವರ, ಗೊಲ್ಲಮ್ಮ, ಮಾರಮ್ಮ, ಇತ್ಯಾದಿ. ಆಧುನಿಕ ಶಿಕ್ಷಣದ ಬಗ್ಗೆ ಇವರಿಗೆ ಆಕಸ್ತಿ ಇದೆ. ಇವರಲ್ಲಿ ಕೆಲವರು ಸಣ್ಣ ವ್ಯವಹಾರಗಳ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗಿಗಳಾಗಿರುವರು. ಆಧುನಿಕ ವ್ಯವಸ್ಥೆಗಳ ಅವಕಾಶ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದಾರೆ.

ನೋಡಿ:

ಶಂಕರನಾರಾಯಣ, ತೀ.ನಂ., ೧೯೮೨. ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

Fawcett, Fred., 1889-1892. ‘Note on a Custom of the Mysore Gollaru or Shepherd Caste People’, Journal of the Anthropological Society of Bombay , 2 pp 26-82.