ಗೋಸಂಗಿಗಳು

ಗೋಸಂಗಿಗಳು

ಗೋಸಂಗಿಯರನ್ನು ಕರ್ನಾಟಕದಲ್ಲಿ ಗೊಸಾಯಿಗಳೆಂದು ಹಾಗೂ ಅತತಿಗಳೆಂದು ಕರೆಯುತ್ತಾರೆ. ‘ಗೋಸಂಗಿ’ ಹಾಗೂ ‘ಗೋಸಾವಿ’ ಅಂತಲ್ಲೂ ಇವರನ್ನು ಕರೆಯುವರು. ಗೋಸಂಗಿ ಮತ್ತು ಗೋಸಾವಿಗಳು ಭಿನ್ನರಾಗಿರದೆ ಅವರು ಒಂದೇ ಸಮುದಾಯದವರೆಂದು ಹೇಳಿಕೊಳ್ಳುತ್ತಾರೆ. ಮೂಲತಃ ಗೋಸಂಗಿಗಳು ಪಶುಪಾಲಕರು, ಗೋವುಗಳ ರಕ್ಷಕರಿವರು. ಹಾಗೆಂತಲೇ ಇವರಿಗೆ ಗೋಸಾವಿ, ಗೋಸಾಯಿ ಎಂಬ ಹೆಸರು ಬಂದಿರಬಹುದು. ಗೋ+ಸಂಗಿ = ಗೋಸಂಗಿ. ‘ಗೋ’ ಎಂದರೆ ‘ಆಕಳು’ ಅಥವಾ ದನ ‘ಸಂಗಿ’ ಎಂದರೆ ಅವುಗಳ ‘ಪಾಲಕ’ ಎಂಬ ಅರ್ಥಗಳೂ ಕೂಡ ಕಿಟೆಲ್ ಅರ್ಥಕೋಶದಿಂದ ವ್ಯಕ್ತವಾಗುತ್ತದೆ. ಗೋಸಂಗಿಗಳಲ್ಲಿ ಹಲವಾರು ಬಳಿಗಳಿವೆ. ಅವು ಖಾಗಳ್, ಪಡಿಯಾರ್, ಮಾಗ್ಣ್ಯಯಾ, ಜ್ಹಿಂವಾ, ಮುಣ್ಯಾಣಿ, ಘಟಾಡ್, ಚೌವ್ಹಾಣ್, ಮಕ್ಷಾಣಿ, ಉಮ್ಮಟ್, ಬಾಮ್ಣ್ಯಣ್ಯ, ತೇವಾರಿಯಾ, ಬೇಡಿಕ್ಯಾ, ವಾಮನ್, ಮುಳೇಕರ್, ಸಾಳಂಕಿ, ಘೋಡ ಮುಂತಾದ ಬೆಡಗುಗಳಿವೆ.

 

ಇವರು ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ, ಬೆಂಗಳೂರು, ಹಾಸನ, ಮಂಡ್ಯ, ದಾವಣಗೆರೆ, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಇವರು ಉತ್ತರ ಭಾರತದ ಕಡೆಯಿಂದ ವಲಸೆ ಬಂದವರು ಎಂದು ಕೆಲವರು ಅಭಿಪ್ರಾಯಿಸುತ್ತಾರೆ. ಅಲೆಮಾರಿ ಸಮುದಾಯದ ಇವರ ಭಾಷೆ ಗೋಸಂಗಿ. ಇದಕ್ಕೆ ಲಿಪಿ ಇಲ್ಲ. ಇವರು ಆಡುವ ಭಾಷೆಯಲ್ಲಿ ಮರಾಠಿ, ಗುಜರಾತಿ, ಲಂಬಾಣಿ, ಉರ್ದು, ತೆಲಗು, ಕನ್ನಡ ಭಾಷೆಗಳೆಲ್ಲವುಗಳ ಸಂಬಂಧವನ್ನು ಕಾಣುತ್ತೇವೆ. ಇವರು ವ್ಯಾಪಾರ ಮಾಡುತ್ತಾ ತಮಿಳುನಾಡು, ಆಂಧ್ರಪ್ರದೇಶಗಳನ್ನು ಸುತ್ತಿ ಸುಮಾರು ಐವತ್ತು ವರ್ಷಗಳಿಗಿಂತ ಹಿಂದೆ ಕರ್ನಾಟಕ ರಾಜ್ಯಕ್ಕೆ ಬಂದು ಈ ಪ್ರದೇಶದಲ್ಲಿ ಅಲೆದಾಡುತ್ತಾ ಅಲ್ಲಲ್ಲಿ ಚದುರಿ ಹೋಗಿರುವುದು ಕಂಡುಬರುತ್ತದೆ. ರಕ್ತಸಂಬಂಧ ಹಾಗೂ ತಾಯಿಯ ಸಹೋದರನ ಮಕ್ಕಳ ಜೊತೆ ಮದುವೆ ಸಾಧ್ಯವಿದ್ದು, ವಿವಾಹ ವಿಚ್ಛೇದನ ಮತ್ತು ಮರು ವಿವಾಹಗಳಿಗೆ ಅವಕಾಶವಿದೆ. ಹಿರಿಯ ಮಗನಿಗೆ ತಂದೆಯ  ನಂತರ ಮನೆಯ ಉತ್ತರಾಧಿಕಾರಿಯಾಗುವ ಹಕ್ಕಿರುತ್ತದೆ. ಮಗು ಹುಟ್ಟಿದ ಹನ್ನೆರಡನೇ ದಿನ ನಾಮಕರಣವನ್ನು ಮಾಡುತ್ತಾರೆ. ಮದುವೆಯ ಮುಖ್ಯ ಆಚರಣೆಗಳೆಂದರೆ ಸ್ನಾನದ ಶಾಸ್ತ್ರ, ಧಾರೆಮುಹೂರ್ತ ಹಾಗೂ ತಾಳಿಕಟ್ಟುವುದು. ಶವವನ್ನು ಹೂಳುತ್ತಾರೆ ಹಾಗೂ ಹದಿಮೂರನೇ ದಿನ ಧಾರ್ಮಿಕ ಕಾರ್ಯವನ್ನು ಮಾಡುತ್ತಾರೆ.

ಇವರು ಸಾಂಪ್ರದಾಯಿಕವಾಗಿ ಧಾರ್ಮಿಕ ಭಿಕ್ಷೆ ಎತ್ತುವವರಾದರೂ ಈಗ ಬಹಳಷ್ಟು ಜನ ಕೃಷಿ ಕೂಲಿಗಳಾಗಿ, ಸಣ್ಣ ಪ್ರಮಾಣದ ವ್ಯಾಪಾರ ಇತ್ಯಾದಿ ವೃತ್ತಿಗಳಲ್ಲಿ ತೋಡಗಿದ್ದಾರೆ. ಇವರ ಸಮುದಾಯದ ಮುಖ್ಯಸ್ಥರನ್ನು ‘ಯಜಮಾನ’ನೆಂದು ಕರೆಯುತ್ತಾರೆ. ಇವನು ಸಮುದಾಯದ ಜನರ ಪರಿಹರಿಸುತ್ತಾನೆ. ಇವರಲ್ಲಿ ‘ಅಖಿಲ ಕರ್ನಾಟಕ ಅಲೆಮಾರಿ ಗೋಸಂಗಿ ಸಂಘ’ ಎನ್ನುವ ಒಂದು ಸಂಘಟನೆಯಿದೆ. ಶಿವನ ಆರಾಧಕರಾಗಿರುವ ಇವರು ಅಂಬಾಭವಾಗನಿ ಹಾಗೂ ಇತರೆ ದೇವತೆಗಳನ್ನು ಪೂಜಿಸುತ್ತಾರೆ. ಇವರು ಹಳ್ಳಿಯ ಮಾರಿಜಾತ್ರೆ, ದುರ್ಗಾದೇವಿ ಉತ್ಸವಗಳಲ್ಲಿ ಕೂಡ ಭಾಗವಹಿಸುತ್ತಾರೆ. ಇವರು ಮರಾಠರಿಗೆ ಪೂಜಾರಿಗಳಾಗಿಯೂ ಇದ್ದಾರೆ. ಇವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ.