ಗೌಡಾಲು ಎನ್ನುವ ಪದವು ಕನ್ನಡದ ಗೌಡ ಎಂಬ ಪದದಿಂದ ಬಂದಿರಬಹುದು. ಅದರ ಅರ್ಥ ಹಿರಿಯ, ಊರಿನ ಮುಖ್ಯಸ್ಥರನ್ನು ಊರಗೌಡ ಹತ್ತಾರು ಹಳ್ಳಿಗಳಿಂದ ಕೂಡಿರುವುದಕ್ಕೆ ‘ಕೂಡಿಗೆ’ ಎಂದು ಕರೆಯುತ್ತಿದ್ದರು. ಅದಕ್ಕೆ ಇವರನ್ನು ಕೂಡಿಗೆಗೌಡ, ನಾಡಗೌಡ ಎಂದೂ ಕರೆಯುತ್ತಿದ್ದರು. ಪ್ರಾಯಶಃ ಊರಿನ ಮುಖ್ಯಸ್ಥರನ್ನು ಗೌಡಾಲ ಎಂದು ಕರೆಯುತ್ತಲೆ ಗೌಡ ಎಂದು ಆಗಿರಬಹುದೇ? ಎಂದು ಯೋಚಿಸುವುದಕ್ಕೆ ಸಾಧ್ಯತೆಗಳಿವೆ. ಈ ಸಮುದಾಯದವರು ಗುಡ್ಡಬೆಟ್ಟಗಲ ತಪ್ಪಲಲ್ಲಿ ವಾಸಿಸುತ್ತಿರುವುದು ಈಗಲೂ ಕಂಡುಬರುತ್ತದೆ. ಗೌಡಾಲು ಸಮುದಾಯದ ಜನರು ಹೆಚ್ಚಾಗಿ ಚಿಕ್ಕ ಮಗಳೂರು, ಶಿವಮೊಗ್ಗ, ಸ್ವಲ್ಪಮಟ್ಟಿಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಚಿಕ್ಕಮಗಳೂರಿನ ಗೆಜೆಟೇರಿಯನ್‌ನಲ್ಲಿ ಕೊಡಗಿ ಗೌಡಾಲು ಎಂದು ಉಲ್ಲೇಖ ಮಾಡಲಾಗಿದೆ. ಹರೀಶ್ ಅವರ “ಎರವರ ಸಂಸ್ಕೃತಿ” ಪುಸ್ತಕದಲ್ಲಿ ಗೌಡಾಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಬುಡಕಟ್ಟು ಎಂದು ಸೂಚಿಸಿದ್ದಾರೆ. ಇವರಲ್ಲಿ ಐದು ಉಪಗುಂಪುಗಳು ಕಂಡುಬರುತ್ತದೆ. ಕಬ್ಬಿನಗೌಡಾಲು, ಕುಂಬಂರೀಗೌಡಾಲು, ಹಾಲುಗೌಡಾಲು, ನಾಮಧಾರಿ ಗೌಡಾಲು, ಕೊಡಗಿನ ಗೌಡಾಲು. ಕಬ್ಬಿನ ಗೌಡಾಲು,ಮೂಲತಃ ಕುಡಿಯ ಸಮುದಾಯಕ್ಕೆ ಸೇರಿದವರು. ಇವರು ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ, ಕಳಸ, ಹೊರನಾಡು, ಬಸಿರಿಕಟ್ಟೆಯ ಕಡೆ ನೆಲೆಸಿದ್ದಾರೆ.

ಇವರು ಬರಗಾಲದ ಸಂದರ್ಭದಲ್ಲಿ ಕಾಫಿ ತೋಟದ ಕಡೆಗೆ ಕೂಲಿಗೋಸ್ಕರ ಬಂದವರು ಎಂದು ತಿಳಿಯುತ್ತದೆ. ಈ ಹಿಂದೆ ಇವರನ್ನು ಕೊಡಿಗೆಯವರು ಅಥವಾ ಊರಬಿಲ್ಲವರು ಎಂದೂ ಕರೆಯುತ್ತಿದ್ದರು. ತುಳುಗೌಡಾಲು ಮನೆಯಲ್ಲಿ ಮಾತನಾಡುವ ಭಾಷೆ ತುಳು. ಇತರೆ ಸಮುದಾಯದವರೊಂದಿಗೆ ಕನ್ನಡ ಮಾತನಾಡಿ ಕನ್ನಡ ಲಿಪಿ ಬಳಸುತ್ತಾರೆ. ಗೌಡಾಲು ಸಮುದಾಯದಲ್ಲಿ ಬಳ್ಳಿಗಳು ಕಂಡುಬರುತ್ತವೆ. “ದಿ ಕೂರ್ಗ್ ಟ್ರೈಬ್ಸ್ ಅಂಡ್ ಕ್ಯಾಸ್ಟ್” ಎಂಬ ಪುಸ್ತಕದಲ್ಲಿ ಅಯ್ಯರ್ (೧೯೪೮)ರವರು ಆರು ಬಳ್ಳಿಗಳನ್ನು ಸೂಚಿಸಿದ್ದಾರೆ. ಅವುಗಳೆಂದರೆ ಗುಂಗುರಬಳ್ಳಿ, ತೋಳಾರಬಳ್ಳಿ, ಕಂದ್ಲಾಬಳ್ಳಿ, ಬಾಳೇಬಳ್ಳಿ, ಶೆಟುಲ್ಲಿಬಳ್ಳಿ, ಅಮೃತಬಳ್ಳಿ, ಒಂದೇ ಬಳ್ಳಿಯಲ್ಲಿ ವಿವಾಹಗಳು ನಡೆಯುವುದಿಲ್ಲ. ಇದರಿಂದ ಇವರು ಹೊರಬಾಂಧವ್ಯ ವಿವಾಹ ಪದ್ಧತಿಯನ್ನು ಅನುಸರಿಸುತ್ತಾರೆ ಎಂದು ಹೇಳಬಹುದು.

ಗೌಡಾಲು ಸಮುದಾಯ ಇತ್ತೀಚೆಗೆ ಒಕ್ಕಲಿಗ ಗೌಡರಿಗೆ ಸಮಾನರೆಂದು ಹೇಳಿಕೊಳ್ಳುತ್ತಾ ಇರುವುದು ಕಂಡುಬರುತ್ತದೆ. ಒಕ್ಕಲಿಗ ಜಾತಿಗೆ ಸೇರಿದವರೆಂದರೆ ಉನ್ನತ ಸ್ಥಾನಮಾನ ಲಭಿಸಬಹುದೆಂಬ ಆಲೋಚನೆ ಇದ್ದಂತೆ ಕಂಡುಬರುತ್ತದೆ. ಈ ಸಮುದಾಯವು ತನ್ನ ಅನನ್ಯತೆಯನ್ನು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗದೆ ಒಕ್ಕಲಿಗ ಸಮುದಾಯಕ್ಕೆ ಸೇರಿಕೊಳ್ಳುವ ಸೂಚನೆಗಳು ಕಂಡುಬರುತ್ತಿದೆ. ರಕ್ತಸಂಬಂಧಿಗಳ ಜೊತೆ ಮದುವೆಗೆ ಅವಕಾಶವಿದೆ. ಗೌಡಾಲು  ಹೆಂಗಸರು ಕುಟುಂಬದ ಆರ್ಥಿಕ, ರಾಜಕೀಯ, ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುತ್ತಾರಲ್ಲದೆ, ಮನೆಯ ಆದಾಯಕ್ಕೂ ಸಹಾಯ ಮಾಡುತ್ತಾರೆ. ದಿನಗೂಲಿ ಹಾಗೂ ಪಶುಸಂಗೋಪನೆ ಇವರ ಆದಾಯ ಮೂಲ ಅವರಿಗೆ ತಮ್ಮದೆ ಕೋಮಿನ ಸಂಘಟನೆಯೂ ಇದೆ. ಅದು ಇವರ ಉನ್ನತಿಗೆ ಶ್ರಮಿಸುತ್ತದೆ. ಇವರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಅಗತ್ಯ ಇದೆ.

ನೋಡಿ:

ಹರೀಶ್.ಪಿ.ಎನ್., ೧೯೯೩. ಎರವರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು

ಲೋಕೇಶ್ ಎಂ.ಎಂ., ೧೯೯೮. ‘ಗೌಡಾಲು’, (ಸಂ) ಎಚ್. ಜೆ.ಲಕ್ಕಪ್ಪಗೌಡ, ಕರ್ನಾಟಕದ ಬುಡಕಟ್ಟುಗಳು., ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು