ಗೌಳಿಗರು ಪಶುಪಾಲನೆ ಮಾಡುವ ಸಮುದಾಯ. ಇವರನ್ನು ಗೌಳಿ, ಧಾಂಗಾಗೌಳಿಮತ್ತು ಕಚ್ಚೆಗೌಳಿಗಳೆಂದೂ ಕರೆಯುವರು. ಮಹಾರಾಷ್ಟ್ರ ಪ್ರಾಂತ್ಯದಿಂದ ಬಂದ ವಲಸೆಗಾರರು. ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನೆಲಸಿರುವರು ಕುಟುಂಬದಲ್ಲಿ ಮರಾಠಿಯನ್ನು ಮಾತನಾಡುವ ಇವರು ಹೊರಗಿನವರೊಂದಿಗೆ ಮರಾಠಿ ಮತ್ತು ಕನ್ನಡ ಮಾತನಾಡಿ, ದೇವನಾಗರಿ ಮತ್ತು ಕನ್ನಡ ಲಿಪಿಯನ್ನು ಉಪಯೋಗಿಸುತ್ತಾರೆ.

ಗೌಳಿಗರ ಕುಣಿತ

ಗೌಳಿಗರ ಕುಣಿತ

ಕರ್ನಾಟಕದಲ್ಲಿ ಎರಡು ರೀತಿಯ ಗೌಳಿಗಳಿದ್ದಾರೆ.  ಮೊದಲನೆಯವರು ಕರ್ನಾಟಕ ಮೂಲದ ಕನ್ನಡ ಮತ್ತು ಮರಾಠಿ ಮಾತನಾಡುವ ಗೌಳಿಗರು. ಇವರು ಪ್ರತ್ಯೇಕ ವಾಡೆಗಳಲ್ಲಿ ವಾಸಮಾಡದೆ, ಗ್ರಾಮ ಹಾಗೂ ನಗರಗಳ ಮಧ್ಯದಲ್ಲಿ ವಾಸಿಸುತ್ತಾ, ಹಾಲು, ಬೆಣ್ಣೆ, ಮೊಸರು ಮಾರುತ್ತಾ, ಎಮ್ಮೆಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಾರೆ. ಎರಡನೆಯವರು ಕರ್ನಾಟಕದ ಕೆಲವು ದಟ್ಟಡವಿಗಳಲ್ಲಿ ವಾಸಿಸುವ ಮರಾಠಿ ಮೂಲದ ಕಚ್ಚೆಗೌಳಿಗರು. ಕಚ್ಚೆಗೌಳಿಗರ ಭಾಷೆ ಮರಾಠಿ ಎಂದು ಕರೆಸಿಕೊಂಡರೂ ಗೋವಾ ಹಾಗೂ ಕರ್ನಾಟಕದಲ್ಲಿ ಕೊಂಕಣಿ ಮಿಶ್ರಿತ ಮರಾಠಿ ಪ್ರಭೇದದ ಭಾಷೆಯನ್ನು ಮಾತನಾಡುತ್ತಾರೆ. ವಾಸ್ತವವಾಗಿ ಮೂಲ ಮರಾಠಿಗಿಂತ ಭಿನ್ನವಾಗಿರುವ ಇವರ ಭಾಷೆ ವ್ಯಾವಹಾರಿಕವಾಗಿ ತಮ್ಮ ಸಮುದಾಯದ ಮಧ್ಯೆ ಸಂಪರ್ಕ ಮಾಧ್ಯಮವಾಗಿದೆ. ಗೌಳಿಗರು ಕರ್ನಾಟಕದಲ್ಲಿ ಮರಾಠಿ ಮಿಶ್ರಿತ ಕನ್ನಡವನ್ನು ಮಾತನಾಡುತ್ತಾರೆ. ಗೌಳಿಗರದು ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಾದ್ದರಿಂದ ತಂದೆಯ ಕಡೆಯಿಂದ ಕುಲ ಸಂಬಂಧಿ ಅಂಶಗಳು ನಿರ್ಧರಿಸಲ್ಪಡುತ್ತವೆ. ಹೊರರಾಜ್ಯದಿಂದ ವಲಸೆ ಬಂದ ಗೌಳಿಗರಲ್ಲಿ ಕುಲಸಂಬಂಧಿಯಾದ ಆಚರಣೆಗಳು ಇಂದಿಗೂ ಉಳಿದುಕೊಂಡು ಬಂದಿವೆ. ಇವರ ಸಂಪ್ರದಾಯಗಳು ಮಹಾರಾಷ್ಟ್ರದ ಧನಗರ ಪಂಗಡದ ಜನರ ಆಡಚರಣೆಗಳನ್ನು ಹೋಲುತ್ತವೆ. ಇವರು ಅದೇ ಮೂಲದಿಂದ ಬಂದವರೆಂದು ಹೇಳಲು ಸಾಕಷ್ಟು ಪುರಾವೆಗಳಿವೆ.

ಗೌಳಿಗರು ಕುಲ ಗೋತ್ರಗಳನ್ನು ‘ಕುಳಿ’ ಎಂದು ಕರೆಯುತ್ತಾರೆ – ಜ್ವೋರೆ, ಯಡಿಗ್ಯ, ಲಾಂಬೂರ, ಬಾಜಾರಿ, ತೋರುವತ, ಕಾತ್ರೋಟ, ಕೋಕರೆ, ಕೂಳಾಪ್ಮಿ, ಜಾನ್ನೂರ, ಶೆಳ್ಕೈ, ಗಂಗೆವರ್ಕಿ, ಪಾಂಡರಮಿಷೆ, ಇಟ್ಟೂಖರಾತ್, ಡೂಯೆಪಡೆ, ಸಾಕ್ತೂ, ಹುಂಬಿ, ಬೋಡ್ಕಾರ್, ಪಟ್ಕರಿ, ಮಲಗುಂಡ, ಕರಾತ್, ಜಂಗ್ಲಿ, ದೊಂಡು, ವರುಕ್, ಧೂಳ್, ಒರಾಗೋಡಿ, ಕೊಳೆಕಾರ, ಧೊಳೂ, ಗಂಗಾರಾಮ್, ಉಂಟ್, ಪಿಂಗಳ್ಯ, ಯಮ್ಕರ, ಶಿಂಧೆ, ಟಾಕೆಕರ್, ಮುಂತಾದ ಕುಳಿಗಳು ಗೌಳಿಗರಲ್ಲಿ ಹೆಚ್ಚು ಪ್ರಚಲಿತವಾಗಿವೆ. ಕುಳಿಗಳೇ ವ್ಯಕ್ತಿಗಳ ಅಡ್ಡ ಹೆಸರಿನಲ್ಲಿ ಸೇರ್ಪಡೆಯಾಗಿರುವುದು ವಿಶೇಷ. ಕುಳಿಗಳು ವಿವಾಹ ಸಂಬಂಧವನ್ನು ನಿರ್ದೇಶಿಸುತ್ತವೆ. ಸೋದರ/ಸೋದರಿ ಸಂಬಂಧಿ ವಿವಾಹಕ್ಕೆ ಅನುಮತಿಯಿದೆ.

ಗೌಳಿ ಹೆಂಗಸರ ನೃತ್ಯ

ಗೌಳಿ ಹೆಂಗಸರ ನೃತ್ಯ

ಗೌಳಿಗರಲ್ಲಿ ವಯಸ್ಕರ ವಿವಾಹಗಳು ರೂಢಿಯಲ್ಲಿವೆ. ಬಹುಪತ್ನಿತ್ವಕ್ಕೆ ಒಪ್ಪಿಗೆಯಿದೆ. ಹದಿನೈದರಿಂದ ಐದುನೂರುಐದು ರೂಪಾಯಿಗಳವರೆಗೆ ವಧುದಕ್ಷಿಣೆ ಕೊಡಲಾಗುತ್ತದೆ. ಹೊಂದಾಣಿಕೆ ಸರಿಯಿಲ್ಲದಿದ್ದರೆ ವಿಚ್ಛೇದನೆಗೆ ಅನುಮತಿಯಿದೆ. ವಿಧವೆ, ವಿಧುರ ಮತ್ತು ವಿಚ್ಛೇದಿತರಿಗೆ ಮದುವೆಗೆ ಒಪ್ಪಿಗೆಯಿದೆ. ವಿಭಕ್ತ ಕುಟುಂಬಗಳು ಇವರಲ್ಲಿ ಕಂಡುಬರುತ್ತದೆ. ಆಸ್ತಿಯನ್ನು ಗಂಡು ಮಕ್ಕಳಿಗೆ ಸಮಾನವಾಗಿ ಹಂಚಲಾಗುತ್ತದೆ. ಮಹಿಳೆಯರ ಕೃಷಿ,  ಪ್ರಾಣಿ ಸಾಕಾಣಿಕೆ, ಕಟ್ಟಿಗೆ ಸಂಗ್ರಹಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಗೌಳಿ ಹೆಂಗಸರು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ, ಕುಟುಂಬದ ಆದಾಯಕ್ಕೆ ನೆರವಾಗಿ, ಸಮಾನ ಸ್ಥಾನವನ್ನು ಹೊಂದಿದ್ದಾರೆ. ಗರ್ಭಿಣಿಯ ಶಾಸ್ತ್ರವಿಧಿಗಳನ್ನು ಆಚರಿಸಲಾಗುತ್ತದೆ. ಜನನ ಸೂತಕವನ್ನು ಹನ್ನೊಂದು ದಿವಸಗಳವರೆಗೆ ಆಚರಿಸಲಾಗುತ್ತದೆ. ಇವರು ಆಚರಿಸುವ ವಿವಾಹ ಶಾಸ್ತ್ರವಿಧಿಗಳೆಂದರೆ ಅರಿಶಿನಸ್ನಾನ, ಅಕ್ಷತೆ ಹಾಕುವುದು, ತಾಳಿಕಟ್ಟುವುದು ಮತ್ತು ಧಾರೆ ಎರೆದುಕೊಡುವುದು. ಶವವನ್ನು ಹೂಳಲಾಗುವುದು ಅಥವಾ ಸುಟ್ಟು, ಪ್ರತಿವರ್ಷವೂ ಹಿರಿಯರ ಪೂಜೆಯನ್ನು ಮಾಡಲಾಗುವುದು.

ಇವರಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗೌಳಿಗರು ಸಾಂಪ್ರದಾಯಿಕ ಜಾತಿಸಂಘವನ್ನು ಹೊಂದಿದ್ದಾರೆ. ಗೌಳಿಗರಿಗೆ ತಮ್ಮದೆ ಸಮುದಾಯದ ಧಾರ್ಮಿಕ ವಿಶೇಷಜ್ಞರು ಇದ್ದಾರೆ. ಕೆಲವು ಸಮಯಗಳಲ್ಲಿ ಇವರು ಬ್ರಾಹ್ಮಣ ಅಥವಾ ಲಿಂಗಾಯತ ಪುರೋಹಿತರನ್ನು ಆಮಂತ್ರಿಸುವರು. ಇವರಲ್ಲಿ ಕೆಲವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈಗಲೂ ಕೂಡಾ ತಮ್ಮದೆ ಆದ ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಗೌಳಿಗರು ತಮ್ಮನ್ನು ರಜಪೂತರೆಂದು ಹೇಳಿಕೊಳ್ಳುವರು. ಇವರಲ್ಲಿ ವಿಶೇಷವಾದ ಜಾನಪದ ಪರಂಪರೆಯ ಇದೆ. ಹೊಳಿಹಬ್ಬವನ್ನು ಗೌಳಿಗಳು ವಿಶೇಷವಾಗಿ ಆಚರಿಸುತ್ತಾರೆ. ಹೆಂಗಸರು ‘ಪುಗುಡಿ’ ನೃತ್ಯ ಹಾಗೂ ಕೋಲಾಟ ಆಡುತ್ತಾರೆ. ಆಧುನಿಕ ಶಿಕ್ಷಣದಲ್ಲಿ ಆಸಕ್ತಿ ಹೊಂದಿದ್ದಾರೆ. ಇವರು ದೇಶಿ ವೈದ್ಯಕೀಯವನ್ನು ಇಷ್ಟ ಪಡುವರು. ಇವರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.

ನೋಡಿ :

ಅಂಬಳಿಕೆ ಹಿರಿಯಣ್ಣ., ೧೯೭೫. ಕಚ್ಚೇಗೌಳಿಗರು,  ಐ.ಬಿ.ಎಚ್.ಪ್ರಕಾಶನ, ಬೆಂಗಳೂರು.

ಅಂಬಳಿಕೆ ಹಿರಿಯಣ್ಣ., ೧೯೯೩. ಕಚ್ಚೇಗೌಳಿಗರ ಸಂಸ್ಕೃತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ; ಬೆಂಗಳೂರು.