ಚಾಪ್ತೆದಾರ ಎನ್ನುವ ಪದ ‘ಚಾಪ್ತಾ’ ಅನ್ನುವ ಪದದಿಂದ ಬಂದಿದೆ. ‘ಚಾಪ್ತಾ’ ಎಂದರೆ ‘ಮರದ ತೊಗಟೆ’ ಎಂದರ್ಥ. ಸಾಂಪ್ರದಾಯಿಕವಾಗಿ ಚಾಪ್ತೆದಾರರು ಕಟ್ಟಿಗೆ ಕೆಲಸದವರು. ಮೊದಲು ಚಾಪ್ತೆದಾರರು ಕುಸರಿ ಕೆತ್ತನೆ ಬಡಗಿಯ ಕೆಲಸಗಳಲ್ಲಿ ಹಾಗೂ ವಿಶೇಷವಾಗಿ ಮರದ ಹಡಗು, ನಾವೆಗಳನ್ನು ತಯಾರಿಸುವವರಾಗಿದ್ದರು. ಇವರು ‘ನಾಯಕ’ ಎಂದು ತಮ್ಮ ಹೆಸರಿಗೆ ಸೇರಿಸಿಕೊಳ್ಳುತ್ತಾರೆ. ದಕ್ಷಿಣ ಕನ್ನಡ, ಉತ್ತರ ಕ ನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಥರ್ಸ್ಟನ್, (೧೯೦೯)  ಹೇಳುವಂತೆ ಚಾಪ್ತೆದಾರರು ಕೊಂಕಣಿ ಮಾತನಾಡುವ ಬಡಗಿಗಳು. ಇವರು ಕೊಂಕಣ ಪ್ರದೇಶದಿಂದ ವಲಸೆ ಬಂದಿರಬಹುದು. ಮಾತೃಭಾಷೆ ಕೊಂಕಣಿ ಜೊತೆಗೆ ಕನ್ನಡದಲ್ಲಿಯೂ ವ್ಯವಹರಿಸಬಲ್ಲರು. ಇವರಲ್ಲಿ ಆರು ಗೋತ್ರಗಳನ್ನು ಗುರುತಿಸಲಾಗಿದೆ- ಅತ್ರಿ, ಗೌತಮ, ಜಮದಗ್ನಿ ಕಶ್ಯಪ, ವಸಿಷ್ಠ ಹಾಗೂ ವಿಶ್ವಾಮಿತ್ರ. ಸೋದರ ಸಂಬಂಧಿ ವಿವಾಹಗಳಿಗೆ ಇವರಲ್ಲಿ ಹೆಚ್ಚಾಗಿ ಅವಕಾಶವಿದೆ. ಮಗು ಜನಿಸಿದ ಹನ್ನೊಂದನೇ ದಿನಕ್ಕೆ ನಾಮಕರಣಶಾಸ್ತ್ರವಿರುತ್ತದೆ. ಗಂಡು ಮಗು ಹತ್ತುವರ್ಷದವನಾಗಿದ್ದಾಗ ಜನಿವಾರ ಧರಿಸುವ ಕ್ರಿಯಾ ವಿಧಿ ಮಾಡುತ್ತಾರೆ. ಮದುವೆಯ ವಿಧಿಗಳಲ್ಲಿ ಹಾರ ಬದಲಾಯಿಸುವುದು, ಅಕ್ಷತೆ ಹಾಕುವುದು, ಧಾರೆ ಹಾಗೂ ಮಂಗಳಸೂತ್ರ ಕಟ್ಟುವುದು ಸೇರಿವೆ.

ಚಾಪ್ತೆದಾರರಲ್ಲಿ ಕೆಲವರು ಸಾಂಪ್ರದಾಯಿಕ ವೃತ್ತಿಯನ್ನು  ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕೆಲವರು ಸರ್ಕಾರಿ ಸೇವೆ, ವ್ಯಾಪಾರ, ಕೂಲಿ, ಬೀಡಿಕಟ್ಟುವುದು, ಸಣ್ಣಪುಟ್ಟ ವ್ಯಾಪಾರ ಇತ್ಯಾದಿ ವೃತ್ತಿಗಳಲ್ಲಿದ್ದಾರೆ. ಆಧುನಿಕ ವಿದ್ಯಾಭ್ಯಾಸದ ಬಗ್ಗೆ ಒಲವಿದೆ. ಆಧುನಿಕ ಸಾಮಾಜಿಕ ಸಂಸ್ಥೆಗಳ ಉಪಯೋಗವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.