ಜಿಂಗಾರರು, ಚಿತ್ರಗಾರ ಹಾಗೂ ಆರ್ಯ ಸೋಮವಂಶ ಕ್ಷತ್ರಿಯರೆಂದು ಕರೆದುಕೊಳ್ಳುತ್ತಾರೆ. ಮಹಾರಾಷ್ಟ್ರದಿಂದ ವಲಸೆ ಬಂದಿರುವ ಸಮುದಾಯ. ಕರ್ನಾಟಕದಲ್ಲಿ ಬೆಂಗಳೂರು, ತುಮಕೂರು, ಚಿತ್ರದುರ್ಗ, ಬೆಳಗಾವಿ, ಬಳ್ಳಾರಿ, ಬಿಜಾಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ರಾಯಚೂರು, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರು ಮರಾಠಿ ಹಾಗೂ ಕನ್ನಡದಲ್ಲಿ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಸೋದರ ಸಂಬಂಧಗಳಲ್ಲಿ ಮದುವೆಗಳು ನಡೆಯುತ್ತವೆ. ಇವರಲ್ಲಿ ಏಕಪತ್ನಿತ್ವ/ಏಕಪತಿತ್ವ ಮದುವೆ ಪದ್ಧತಿಗಳು ಇವೆ. ವರದಕ್ಷಿಣೆಯನ್ನು ಹಣದ ಹಾಗೂ ಮತ್ತಿತರ ರೂಪಗಳಲ್ಲಿ ಕೊಡುತ್ತಾರೆ. ವಿವಾರ ವಿಚ್ಛೇದನೆಗೆ ಅವಕಾಶವಿಲ್ಲ, ವಿಧುರರ ವಿವಾಹ ಸಾಧ್ಯವಿದೆ. ಪುರುಷನಿಗೆ ಹೆಚ್ಚಿನ ಪ್ರಾಧಾನ್ಯತೆಯಿದೆ. ಹಿರಿಯ ಗಂಡು ಮಗ ತಂದೆಯ ನಂತರ ಕುಟುಂಬದ ವಾರಸುದಾರನಾಗುತ್ತಾನೆ. ಹೆರಿಗೆಯ ಮುನ್ನಿನ ಕ್ರಿಯಾವಿಧಿಗಳನ್ನು ಮಾಡುತ್ತಾರೆ. ಜನನದ ನಂತರ ಸೂತಕವನ್ನು ಹತ್ತು ದಿನಗಳವರೆಗೆ ಆಚರಿಸಿ, ನಾಮಕರಣವನ್ನು ಜನನದ ಹದಿಮೂರು ಅಥವಾ ಹದಿನಾರನೇ ದಿನ ಮಾಡುತ್ತಾರೆ. ಗಂಡು ಮಕ್ಕಳಿಗೆ ‘ಜವಳ’ ಎಂಬ ಮುಂಡನ ಕಾರ್ಯ ಮಾಡಿಸುತ್ತಾರೆ.

ಇವರ ಸಾಂಪ್ರದಾಯಿಕ ವೃತ್ತಿಯೆಂದರೆ ಮೂರ್ತಿಗಳ ತಯಾರಿಕೆ. ಅವುಗಳಿಕ್ಕೆ ಬಣ್ಣ ಬಳಿದು, ಇತ್ತೀಚೆಗೆ ಮಾರಾಟ ಮಾಡುತ್ತಾರೆ. ಕಮ್ಮಾರಿಕೆ ಮರಗೆಲಸ ಮಾಡಿ ಕೆಲವರು ಜೀವನ ನಡೆಸುತ್ತಿದ್ದಾರೆ. ಸ್ವಯಂ-ಉದ್ಯೋಗ ದಡಿಯಲ್ಲಿ ದರ್ಜಿಗಳಾಗಿ ದುಡಿಯುತ್ತಿದ್ದಾರೆ. “ಅರ್ಯ ಸೋಮವಂಶ ಕ್ಷತ್ರಿಯ ಸಂಘ” ಎಂಬ ಸಂಘಟನೆಯು ಇವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಇವರ ದೈವಗಳೆಂದರೆ ಮುಕ್ತಾದೇವಿ, ನಿಮಿಷಾಂಬದೇವಿ, ಮುಂತಾದವು. ಇವರಲ್ಲಿ ಕೆಲವರು ಆಧುನಿಕ ವ್ಯವಸ್ಥೆಗಳ ಸೌಲಭ್ಯಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಲು ಪ್ರಯತ್ನಿಸಿದ್ದಾರೆ.