ಜೆಟ್ಟಿಯರನ್ನು ಮಲ್ಲಕ್ಷತ್ರಿಯ ಅಥವಾ ಮಲ್ಲಮುಷ್ಟಿಗರೆಂದು ಕರೆಯುತ್ತಾರೆ. ಇವರು ಆಂಧ್ರಪ್ರದೇಶದಿಂದ ವಲಸೆ ಬಂದವರೆಂದು ಇತಿಹಾಸದಿಂದ ಮಾಹಿತಿಗಳು ದೊರೆಯುತ್ತದೆ. ಟಿಪ್ಪೂ ಸುಲ್ತಾನನು ತನ್ನ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇವರನ್ನು ಪೋಷಿಸಿದ. ಒಳ್ಳೆಯ ಮಲ್ಲರನ್ನು ಶಾಲು ಅಥವಾ ಪೇಟದಿಂದ ಸನ್ಮಾನಿಸುತ್ತಿದ್ದ. ಜೆಟ್ಟಿಯರಲ್ಲಿ ಎರಡು ಉಪಪಂಗಡಗಳಿವೆ, ಅವೆಂದರೆ ‘ಮಲ್ಲ’ ಹಾಗೂ ‘ದೇವಮಲ್ಲು’. ಇವರನ್ನು ತುಮಕೂರು, ಮೈಸೂರು, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಬಹುದು. ಇವರು ಸ್ಥಳೀಯ ಕನ್ನಡ ಹಾಗೂ ತೆಲುಗು ಭಾಷೆಯನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ.

ಇವರ ಸಾಂಪ್ರದಾಯಿಕ ವೃತ್ತಿ ಕುಸ್ತಿ ಆಡುವುದು. ಇತ್ತೀಚೆಗೆ ಕೃಷಿ ಕೂಲಿಗಳಾಗಿ, ದರ್ಜಿಗಳಾಗಿ, ಚಿಲ್ಲರೆ ವ್ಯಾಪಾರಿಗಳು ಹಾಗೂ ದಿನಗೂಲಿಗಳಾಗಿ ದುಡಿಯುತ್ತಾರೆ. ಇವರ ದೈವ ಮಾರುತಿ, ಗರಡಿ ಪೂಜೆಯನ್ನು ವರ್ಷಕ್ಕೊಮ್ಮೆ ಮಾಡುತ್ತಾರೆ. ಸಾಂಪ್ರದಾಯಿಕ ‘ವೀರಮಸ್ತಿ’ ಎಂಬ ಕುಸ್ತಿ (ಕುಸ್ತಿಯ ಒಂದು ವಿಧಾನ) ಇವರಲ್ಲಿ ವೇಗವಾಗಿ ಕಣ್ಮರೆಯಾಗುತ್ತಿದೆ. ಅದಕ್ಕೆ ಕಾರಣ ಪೋಷಕರಿಲ್ಲದೆ ಇರುವುದು. ತಮಿಳುನಾಡಿನಲ್ಲಿ ಈ ಪಂಗಡದವರನ್ನು ಜೆಟ್ಟಿ ಅಥವಾ ಜಾನುರಮಲ್ಲ, ಮಲ್ಲಕ್ಷತ್ರಿಯ ಹಾಗೂ ಮುಷ್ಠಿಗರೆಂದು ಕರೆಯು‌ತ್ತಾರೆ. ಇವರ ಸಾಮಾನ್ಯ ಮನೆತನದ ಹೆಸರುಗಳೆಂದರೆ ಜೆಟ್ಟಿ, ಜೆಟ್ಟಿಯರ್, ಜೆಟ್ಟನ್ ರಾಜು, ವರ್ಮಮಲ್ಲ ಹಾಗೂ ಉಸ್ತಾದ್. ಇವುಗಳಲ್ಲಿ ಕೆಲವು ಇವರು ಗಳಿಸಿದ ಬಿರುದುಗಳು. ಇವರಲ್ಲಿ ಕೆಲವರು ನಾವು “ದೇವಮಲ್ಲು” ವಿನ ವಂಶದವರು ಎಂದು ಹೇಳಿಕೊಳ್ಳುತ್ತಾರೆ. ಇವರು ಮುಖ್ಯವಾಗಿ ಭೂಮಿ ಇಲ್ಲದ ಸಮುದಾಯ. ಕೇವಲ ಕೆಲವು ಕುಟುಂಬಗಳು ಮಾತ್ರ ಉಳುವ ಭೂಮಿಯನ್ನು ಹೊಂದಿವೆ. ವ್ಯಾಪಾರ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ನೌಕರಿಯಲ್ಲಿ ಇತ್ತೀಚೆಗೆ ತೋಡಗಿದ್ದಾರೆ. ಆಧುನಿಕ ಶಿಕ್ಷಣ, ಇತ್ಯಾದಿ ಆಧುನಿಕ ಸಾಮಾಜಿಕ ಸಂಸ್ಥೆಗಳ ಸೌಲಭ್ಯಗಳನ್ನು ಪಡೆದುಕೊಳ್ಳು ಪ್ರಯತ್ನಿಸುತ್ತಿದ್ದಾರೆ.