ಡೊಂಬರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಹಂಚಿಹೋಗಿದ್ದಾರೆ. ಇವರನ್ನು ದೋಮ, ದೊಂಬರ, ಪಾಯಿದೆ, ಪಾನೋ ಎಂದೂ ಕರೆಯುತ್ತಾರೆ. ಇವರು, ಆಂಧ್ರಪ್ರದೇಶದಿಂದ ವಲಸೆ ಬಂದಿರಬಹುದೆಂದು ಕೆಲವರ ಅಭಿಪ್ರಾಯ. ಡೊಂಬರು ತೆಲುಗು ಮಾತನಾಡುವ ಪ್ರದೇಶದಲ್ಲಿ ಹೆ‌ಚ್ಚಾಗಿ ಕಾಣಸಿಗುತ್ತಾರೆ ಎಂದು ನಂಜುಂಡಯ್ಯ ಮತ್ತು ಐಯ್ಯರ್ (೧೯೩೨) ಗುರುತಿಸಿದ್ದಾರೆ. ಡೊಂಬರನ್ನು ಕುರಿತು ಅನೇಕ ಜನಪದ ದಂತಕಥೆ ಪೌರಾಣಿಕ ಸನ್ನಿವೇಶಗಳಿಂದ ಮೊದಲುಗೊಂಡು ಚಾರಿತ್ರಿಕ ಮತ್ತು ಸಾಹಿತ್ಯ ಕೃತಿಗಳವರೆಗೆ ವಿವಿಧ ಉಲ್ಲೇಖಗಳು ದೊರೆಯುತ್ತವೆ.

ಡೊಂಬರ ಆಟ

ಡೊಂಬರ ಆಟ

ಒಂದು ಜನಪದ ಐತಿಹ್ಯದ ಪ್ರಕಾರ : ಒಬ್ಬ ರೆಡ್ಡಿಗೆ ಇಬ್ಬರು ಹೆಂಡಿರು, ಕಿರಿಯ ಹೆಂಡತಿಗೆ ಹುಟ್ಟಿದ ಮಗ ಹುಟ್ಟಿನಿಂದಲೇ ಅಂಗಹೀನ. ‘ಇದು ಅನಿಷ್ಟಕಾರಕ’ ಎಂದು ಜೋಯಿಸರು ಹೇಳಿದ್ದಕ್ಕೆ ರೆಡ್ಡಿ, ಈ ಮಗುವನ್ನು ತೊರೆದುಬಿಡುವಂತೆ ತನ್ನ ಕಿರಿ ಹೆಂಡತಿಗೆ ಆಜ್ಞಾಪಿಸಿದ. ಮಗುವಿಗಾಗಿ ಕರುಳುಮಿಡಿದ ಆ ತಾಯಿ ಮಗುವನ್ನು ದನದ ಕೊಟ್ಟಿಗೆಯಲ್ಲಿ ಬಚ್ಚಿಟ್ಟಳು. ಅದರಿಂದಾಗಿ ಹೆಚ್ಚಿನ ದನಕರುಗಳು ಸಾವಿಗೀಡಾದುವು. ಬೇಸತ್ತ ತಾಯಿ ಆ ಮಗುವನ್ನು ಗುಪ್ತವಾಗಿ ಒಬ್ಬ ಭಿಕ್ಷುಕನಿಗೆ ಒಪ್ಪಿಸಿದಳು. ಆ ಭಿಕ್ಷುಕ ಮಗುವನ್ನು ಒಂದು ಭಾವಿಗೆ ಎಸೆದ. ಮಗು ಸಾಯಲಿಲ್ಲ ಬದಲು ಜೋರಾಗಿ ಅಳತೊಡಗಿದಳು. ಆ ರೋದನ ಕೇಳಿ ಪಾರ್ವತಿ ಪರಮೇಶ್ವರರು ಬಂದು ಮಗುವಿಗೆ ಅಂಗಾಂಗ ಬರುವಂತೆ ಕರುಣಿಸಿದರು. ಬಾವಿಯ ತಳದಿಂದಲೇ ಮಿಂಚಿನಂತೆ ನೆಗೆದು ಅವರ ಪಾದಕ್ಕೆರಗಿದ. ಪಾರ್ವತಿ ಪರಮೇಶ್ವರರು ಮಾಯವಾದರು. ಆ ಬಳಿಕ ಹುಡುಗ ಬೀದಿಯಲ್ಲಿ ಹೋಗುತ್ತಿದ್ದ ಕಸರತ್ತುಗಾರರ ಗುಂಪು ಸೇರಿಕೊಂಡು, ಅಲೆದಾಟದ ಕಾಲದಲ್ಲಿ ಒಬ್ಬಳನ್ನು ಕೂಡಿಕೊಂಡ. ಅವನ ಸಂತಾನವೇ ಡೊಂಬರು.

ಕರ್ನಾಟಕದಲ್ಲಿ ಇರುವ ಡೊಂಬರ ಮಾತೃಭಾಷೆ ತೆಲುಗು; ಕೆಲವರು ಕನ್ನಡವನ್ನೂ ಬಳಸುತ್ತಾರೆ. ಇವರಲ್ಲಿ ‘ಅರೆ ಮರಾಠಿ’ ಭಾಷೆ ಮಾತನಾಡುವ ಡೊಂಬರೂ ಇದ್ದಾರೆ. ಅವರ ಸಂಖ್ಯೆ ಅತ್ಯಲ್ಪ ಮತ್ತು ವಿರಳ. ಈ ಗುಂಪಿನ ಕುಸ್ತಿಪಟು ಮತ್ತು ಕಸರತ್ತು ಗಾರರಲ್ಲಿ ಕೆಲವು ಮುಸಲ್ಮಾನರೂ ಇರುತ್ತಾರೆ.

ಡೊಂಬರಲ್ಲಿ ಪ್ರಾದೇಶಿಕ ವೈಶಿಷ್ಟ್ಯತೆ ಇದೆ. ಡೊಂಬರಲ್ಲಿ ಇಪ್ಪತ್ತರೆಡು ಬೆಡಗುಗಳಿವೆ – ಐಸರಪೋಳ್ಳು, ಭೂಪತಿವಾಳ್ಳು, ಗಂಧಪುರಜುವಾಳ್ಳು, ಗೋಪುಡಸು ವಾಳ್ಳು, ಜಟ್ಟಿವಾಳ್ಳು, ಕಗ್ಗಡಿವಾಳ್ಳು, ಕಲಂಬಡಿವಾಳ್ಳು, ಕನಕರೆಡ್ಡಿವಾಳ್ಳು, ಕಸೇರೂಪುವಾಳ್ಳು, ಕಸ್ತೂರಿವಾಳ್ಳು, ಕೂಟರವಾಳ್ಳು, ಮಲ್ಲೇಪೂ ವಾಳ್ಳು, ಮಣ್ಣೀಪುಲವಾಳ್ಳು, ಮತ್ಲಿವಾಳ್ಳು, ಮುರಾರಿ ವಾಳ್ಳು, ನಾಡು ಮೂಲೇನಿವಾಳ್ಳು, ನಾಟಕರಾಯನಿವಾಳ್ಳು, ಪಲ್ಲೆಕೊಂಡಾಲವಾಳ್ಳು, ಸೋಮಲರಾಜುವಾಳ್ಳು, ಸೊಂಡೂರುವಾಳ್ಳು, ತೋಲಂಗಿವಾಳ್ಳು, ಉಪ್ಪುವಾಳ್ಳು, ಇತ್ಯಾದಿ.

ಮನೆಗೆಲಸ ಮತ್ತು ಇತರ ಎಲ್ಲ ವಿಧದ ಕಾರ್ಯಚಟುವಟಿಕೆಗಳಲ್ಲಿ ಡೊಂಬ ಸ್ತ್ರೀಯರು ನೇರವಾಗಿ ಭಾಗವಹಿಸುತ್ತಾರೆ. ಈ ಸಮುದಾಯದ ಕೆಲವು ಕುಟುಂಬಗಳಲ್ಲಿ ಹುಡುಗಿಯರಿಗೆ ಬಾಲ್ಯದಿಂದಲೇ ಬೀದಿ ಕಸರತ್ತು, ಕುಣಿತ, ಕೈಚಳಕದ ವಿವಿಧ ಗತ್ತುಗಮ್ಮತ್ತುಗಳಲ್ಲಿ ತರಬೇತಿ ದೊರೆಯುತ್ತದೆ. ಡೊಂಬರಲ್ಲಿ ಬಹುಪತ್ನಿತ್ವ ಸಾಮಾನ್ಯ. ಡೊಂಬರು ಸಾಮಾನ್ಯವಾಗಿ ಅಕ್ಕನ ಮಗಳನ್ನು ಮದುವೆಯಾಗುವುದಿಲ್ಲ. ಅಕ್ಕ ತಂಗಿಯರಿಬ್ಬರೂ ಒಬ್ಬನನ್ನೇ ಮದುವೆ ಆಗಬಹುದು ಅಥವಾ ಎದುರು ಹೆಣ್ಣು ಕೊಡುವ ಅಥವಾ ತೆಗೆದುಕೊಳ್ಳುವ ಪದ್ಧತಿಯೂ ಉಂಟು. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹುಡುಗಿ ಮೈನೆರೆದಾಗ ಅದಕ್ಕಾಗಿ ಒಂದು ಬೇರೆ ಗುಡಿಸಲು ಹಾಕಿ ಏಳುದಿನ ಅವಳನ್ನು ಅಲ್ಲಿಯೇ ಇಡಲಾಗುತ್ತಿತ್ತು. ಡೊಂಬರಲ್ಲಿ ವಿಧವೆ, ವಿಧುರ ಹಾಗೂ ವಿಚ್ಛೇದಿತರ ವಿವಾಹಕ್ಕೆ ಅವಕಾಶಗಳಿವೆ. ಇವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದಾರೆ.

ನೋಡಿ:

ದೇವೇಂದ್ರ ಕುಮಾರ ಹಕಾರಿ, ‘ಡೊಂಬರ ಸಂಸ್ಕೃತಿ’, ಜನಪದ ಸಾಹಿತ್ಯ ದರ್ಶನ-೨, ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ,

Census of India., 1971. Ethnographic Notes on Dombar, Vol. II, Par–B Scheduled Castes of Tamilnadu : Director of Publications, Delhi pp L-127

Raghava Rao., D.V. 1968. ‘Domb Kinship Terms’, Man in India 48(2) : 11-123