ಢೋರರನ್ನು ಕರ್ನಾಟಕದಲ್ಲಿ ಢೋರ ಕಕ್ಕಯ್ಯರೆಂದು ಕರೆಯುತ್ತಾರೆ. ಮರಾಠಿಯನ್ನು ಇವರು ಮಾತನಾಡುತ್ತಾರೆ. ಇವರಲ್ಲಿ – ಶಿಂಧೆ, ಸೆಲೂನ, ಶ್ರೀಕಾನ, ಸೊನೋನೆ, ನಾರಾಯಣಕರ, ಕವಾಲೆ, ಪಾವಲ, ಹೋಟ್ಕರ, ಹೋಳ್ಕರ, ಬರಾಡೆ, ಗಾಯಕ್‌ವಾಡ್ ಮತ್ತು ಮಾನಕರಗಳೆಂಬ ಹೊರ ಬಾಂಧವ್ಯ ವಿವಾಹದ ಬೆಡಗುಗಳು ಇವೆ. ಸಮುದಾಯ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ, ಬಳ್ಳಿಗಳ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿಯನ್ನು ಅನುಸರಿಸುತ್ತಾರೆ. ಸೋದರ ಸಂಬಂಧಿ ವಿವಾಹಗಳಿಗೆ ಇವರಲ್ಲಿ ಅವಕಾಶವಿದೆ. ಏಕಪತ್ನಿತ್ವ/ಏಕಪತಿತ್ವ ಇವರ ವಿವಾಹದ ರೀತಿ. ವರದಕ್ಷಿಣೆ ಹಾಗೂ ವಧುದಕ್ಷಿಣೆ ಎರಡೂ ಆಚರಣೆಯಲ್ಲಿವೆ. ಗಂಡು ಮತ್ತು ಹೆಣ್ಣು  ಇಬ್ಬರಿಗೂ ವಿವಾಹ ವಿಚ್ಛೇದನ ಪಡೆಯಲು ಹಕ್ಕಿದೆ. ವಿವಾಹ ವಿಚ್ಛೇದಿತರಿಗೆ, ವಿಧವೆ, ವಿಧುರರಿಗೆ ಮದುವೆಯಾಗುವ ಅವಕಾಶವಿದೆ. ಆಸ್ತಿಯನ್ನು ಗಂಡು ಮಕ್ಕಳಲ್ಲಿ ಸಮನಾಗಿ ಹಂಚಲಾಗುತ್ತದೆ. ತಂದೆಯ ನಂತರ ಹಿರಿಯಮಗನು ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು ಮನೆಯ ಆದಾಯಕ್ಕೆ ವ್ಯವಸಾಯ ಕೂಲಿಗಳಾಗಿ ದುಡಿದು ಸಹಾಯ ಮಾಡುತ್ತಾರೆ.

ಚಮ್ಮಾರಿಕೆ, ಢೋರರ ಸಾಂಪ್ರದಾಯಿಕ ಕಸುಬಾಗಿದೆ. ಇವರು ಚರ್ಮವನ್ನು ಖರೀದಿಸಿ, ಅದನ್ನು ಹದಮಾಡಿ ಚಮ್ಮಗಾರರಿಗೆ ಮಾರುತ್ತಾರೆ. ಇವರ ಆದಾಯದ ಎರಡನೆಯ ಮೂಲ ಕೂಲಿಕೆಲಸ. ಕೆಲವರು, ಸರಕಾರಿ ಹಾಗೂ ಖಾಸಗಿ ಸಂಸ್ಥೆಯಲ್ಲಿ ನೌಕರರಾಗಿದ್ದಾರೆ. ರೇಣುಕ, ಯಲ್ಲಮ್ಮ, ಕಾರೆವ್ವ, ಮಂಜುನಾಥ ಸ್ವಾಮಿ, ಹನುಮದೇವರು, ರಾಮ ಹಾಗೂ ಸೂಫಿಗಳನ್ನು ಆರಾಧಿಸುತ್ತಾರೆ. ಇವರು ಸಮಗಾರ ಮತ್ತು ಚಮ್ಮಾರರೊಂದಿಗೆ ಆರ್ಥಿಕ ಸಂಬಂಧವನ್ನು ಹೊಂದಿರುವರು. ಇವರ ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಗಳು ಸುಧಾರಣೆಯಾಗಬೇಕಾಗಿದೆ.