ತಮ್ಮಡಿಗಳು ಪುರೋಹಿತ ತಮ್ಮುಡಿ, ಅರ್ಚಕ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರನ್ನು ಶಿವಾರ್ಚಕರೆಂದು ಕರೆಯುತ್ತಾರೆ. ತಮ್ಮಡಿ, ಎಂಬ ಪದದ ಅರ್ಥ ದೇವರ ಪಾದಗಳ ಸೇವಕ ಎಂದರ್ಥ. ಇವರು ಶಿವನ ಆರಾಧರರಾಗಿರುವುದರಿಂದ ಇವರಿಗೆ ಶಿವಾರ್ಚಕರೆಂದು ಹೆಸರು ಬಂದಿರಬಹುದು. ನಂಜುಂಡಯ್ಯ ಅವರ ಪ್ರಕಾರ ತಮ್ಮಡಿಗಳು ಮೈಸೂರಿನ ಚಾಮುಂಡಿ ಬೆಟ್ಟಗಳಲ್ಲಿ ವಾಸಿಸುತ್ತಾ ದೇವರಿಗೆ ಹೂವನ್ನು ಸಂಗ್ರಹಿಸುತ್ತಿದ್ದರು. ಇವರು, ಮೈಸೂರು, ತುಮಕೂರು, ಮಂಡ್ಯ, ಹಾಸನ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಈ ಸಮುದಾಯದಲ್ಲಿ ಅನೇಕ ಗೊತ್ರಗಳಿವೆ. ಪೂಜೆಯ ಉದ್ದೇಶಕ್ಕಾಗಿ ಅರ್ಚಕ, ಆಚಾರ್ಯ, ಸಾಧಕ ಮತ್ತು ಅಲಂಕೃತಗಳೆಂಬ ನಾಲ್ಕು ಗುಂಪುಗಳು ಇವೆ. ಸೋದರ ಸಂಬಂಧಿ ವಿವಾಹಗಳಿಗೆ ಇವರಲ್ಲಿ ಅವಕಾಶವಿದೆ. ಹಿರಿಯ ಮಗನಿಗೆ ತಂದೆಯ ನಂತರ ಉತ್ತರಾಧಿಕಾರದ ಹಕ್ಕು ದೊರೆಯುತ್ತದೆ. ತಮ್ಮಡಿಗಳು ಸಾಂಪ್ರದಾಯಿಕವಾಗಿ ಅರ್ಚಕರಾಗಿದ್ದಾರೆ. ಇತ್ತೀಚೆಗೆ ಇವರಲ್ಲಿ ಕೆಲವರು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೌಕರಿಯಲ್ಲಿದ್ದಾರೆ. ಇನ್ನೂ ಕೆಲವರು ಜಮೀನನ್ನು ಹೊಂದಿ ವ್ಯವಸಾಯದಲ್ಲಿ ನಿರತರಾಗಿದ್ದಾರೆ. “ಶುದ್ಧ ದೈವ ಶಿವಾರ್ಚಕ ಸಂಘ” ಎಂಬ ಸಂಘಟನೆ ಈ ಸಮುದಾಯದ ಅಭ್ಯುದಯಕ್ಕಾಗಿ ಶ್ರಮಿಸುತ್ತದೆ. ಇವರು ‘ವೀರಗಾಸೆ’ ಎಂದು ಪ್ರಖ್ಯಾತವಾಗಿರುವ ನೃತ್ಯವನ್ನು ಮಾಡುತ್ತಾರೆ ಎಂದು ತಿಳಿದುಬರುತ್ತದೆ. ಆಧುನಿಕ ಶಿಕ್ಷಣ ಹಾಗೂ ಇತರೆ ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಸೌಲಭ್ಯಗಳನ್ನು ಪಡೈದುಕೊಂಡು ಅಭಿವೃದ್ಧಿ ಸಾಧಿಸಬೇಕಾಗಿದೆ.