ತಿಗಳರು ಅಗ್ನಿಕುಲಕ್ಷತ್ರಿಯ ವಹ್ನಿಕುಲಕ್ಷತ್ರಿಯರೆಂದೂ ಹೇಳಿಕೊಳ್ಳಿತ್ತಾರೆ. ಇವರು ತಮಿಳುನಾಡಿನಿಂದ ಬಹಳ ಹಿಂದೆ ವಲಸೆ ಬಂದರು ಎಂದು ತಿಳಿಯಬಹುದು. ಇವರು ಬೆಂಗಳೂರು, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ತಮಿಳನ್ನು ಮಾತನಾಡುವ ಇವರು ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ನಂಜುಂಡಯ್ಯ ಮತ್ತು ಐಯ್ಯರ್ (೧೯೩೦) ಹೇಳುವಂತೆ ತಿಗಳರು ಬೇಸಾಯಗಾರರಾಗಿ ವೀಳ್ಯದೆಲೆಯ ಬಳ್ಳಿಯನ್ನು ಬೆಳೆಸುತ್ತಿದ್ದರು. ಇವರು ಉಳ್ಳಿ, ಕನ್ನಡ ತಿಗಳರು, ಆರ್ವತಿಗಳ, ಧರ್ಮರಾಯನ ಒಕ್ಕಲುಗಳೆಂಬ ಒಳಬಾಂಧವ್ಯ ವಿವಾಹ ಉಪಪಂಡಗಳನ್ನು ಹೊಂದಿದ್ದಾರೆ.

ತಿಗಳರು ಲಕ್ಕಮ್ಮ ದೇವರು, ದೊಡ್ಡನರಸಯ್ಯ, ದೊಡ್ಡನಂಜಪ್ಪ, ಎಲ್ಲಮ್ಮನರಸಯ್ಯ ಮತ್ತು ಮುದ್ದಣ್ಣಗಳೆಂಬ ಅನೇಕ ಪಂಗಡಗಳಾಗಿ ವಿಂಗಡನೆಯಾಗಿದ್ದಾರೆ. ಈ ಸಮುದಾಯದಲ್ಲಿ ‘ಬರಿ’ ಎನ್ನುವ ಹೊರಬಾಂಧವ್ಯ ಬೆಡಗುಗಳು ಇವೆ. ಸೋದರ ಸಂಬಂಧಿ ವಿವಾಹಗಳಿಗೆ ಇವರಲ್ಲಿ ಅವಕಾಶವಿದೆ. ವಿಧವೆ, ವಿಧುರ ಮತ್ತು ವಿಚ್ಛೇದಿತ ವಿವಾಹಗಳಿಗೆ ಅವಕಾಶವಿದೆ. ಇವರ ಪಾರಂಪರಿಕ ಉದ್ಯೋಗ ಕೃಷಿ ಮತ್ತು ಕೃಷಿ ಕೂಲಿಗಳು. ‘ತಿಗಳ ಸಂಘ’ ಎಂಬ ಸಂಘಟನೆಯು ಇವರ ಅಭ್ಯುದಯಕ್ಕಾಗಿ ಶ್ರಮಿಸುತ್ತದೆ. ಇವರಲ್ಲಿ ಕೆಲವರು ಕ್ರೈಸ್ತರಾಗಿ ಮತಾಂತರ ಹೊಂದಿದ್ದಾರೆ. ಇವರನ್ನು ತಿಗಳ ಕ್ರೈಸ್ತರು ಎಂದು ಕರೆಯುತ್ತಾರೆ. ಇವರು ಹೆಚ್ಚಾಗಿ ಬೆಂಗಳೂರು ಜಿಲ್ಲೆಗಳಲ್ಲಿ ಕೇಂದ್ರಿಕೃತಗೊಂಡಿದ್ದಾರೆ.