ದಕ್ಕಲರು, ದಕ್ಕಲಿ ಮುನಿಯು ತಮ್ಮ ವಂಶದ ಮೂಲ ಪುರುಷ ಎಂದು ಹೇಳುತ್ತಾರೆ. ಇವರಿಗೆ ದಕ್ಕಲ ಎಂಬ ಹೆಸರು ಬಂದಿರುವುದಕ್ಕೆ ಈ ಹಿನ್ನೆಲೆ ಕಾರಣವಿರಬಹುದು. ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುವ ಒಂದು ಅಲೆಮಾರಿ ಸಮುದಾಯವಾಗಿದೆ. ಥರ್ಸ್ಟನ್ ತಮ್ಮ ಎರಡನೇ ಸಂಪುಟದಲ್ಲಿ ದಕ್ಕಲರ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ದಕ್ಕಲ ಅಥವಾ ದಕ್ಕಲಿಯರು ಒಂದು ಅಲೆಮಾರಿ ಗುಂಪು. ಇವರು ಮಾದಿಗ ಸಮುದಾಯದ ಜನರಿಂದ ಮಾತ್ರ ಭಿಕ್ಷೆ ಬೇಡಿ ಬದುಕುತ್ತಾರೆ ಎಂದು ತಿಳಿಸುತ್ತಾರೆ. ದಕ್ಕಲರನ್ನು ತೆಲಂಗಾಣ ಪ್ರದೇಶದಲ್ಲಿ ದಕ್ಕಲ, ದಕ್ಕಲ್ವಾರ್, ದೊಕ್ಕಲ, ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.

ಇವರ ಹುಟ್ಟಿನ ಬಗೆಗೆ ಇರುವ ದಂತ ಕಥೆಯ ಪ್ರಕಾರ ಒಮ್ಮೆ ಶಿವನ ಮದುವೆಗೆ ಆಭರಣಗಳನ್ನು ತಯಾರಿಸಲು ಒಬ್ಬ ಅಕ್ಕಸಾಲಿಗನನ್ನು ಕರೆಯಲಾಯಿತಂತೆ. ಅವನ ಬಳಿ ಆಭರಣಗಳನ್ನು ತಯಾರಿಸುವ ಯಾವ ಉಪಕರಣಗಳೂ ಇಲ್ಲದಿದ್ದ ಕಾರಣ, ಜಾಂಬ ಮುನಿಯು ತನ್ನ ಮಗನನ್ನೆ ಬಲಿಕೊಟ್ಟ ಫಲವಾಗಿ ಆಭರಣ ತಯಾರಿಸಲಾಯಿತಂತೆ. ಆದರೆ ಶಿವನ ಕೃಪೆಯಿಂದ ಮತ್ತೆ ಜೀವ ಪಡೆದ ಜಾಂಬ ಮುನಿಯ ಮಗ ತನ್ನ ತಂದೆಯಲ್ಲಿಗೆ ಬಂದಾಗ, ತಂದೆ ತನ್ನ ಮಗನನ್ನು ಗುರುತಿಸದಂತಾಗಿ, ಮನೆಗೆ ಪ್ರವೇಶ ನೀಡದೆ, ಬೆನ್ನೆಲುಬಿನಿಂದ ಬದುಕಿ ಉಳಿದ ನೀನು ಡಕ್ಕಲಿ ಎಂಬ ಹೆಸರಿನಿಂದ, ಮಾದಿಗರ ಮನೆಯಲ್ಲಿ ಭಿಕ್ಷೆ ಬೇಡಿ ಬದುಕೆಂದು ಹೇಳಿದನಂತೆ. ಹೀಗೆ ದಕ್ಕಲ ಎಂಬ ಪದವು ಜಾಂಬುಮುನಿಯಿಂದ ಸೃಷ್ಟಿಗೊಂಡಿತೆಂಬ ಕತೆ ಇದೆ (ಥರ್ಸ್ಟನ್ ೧೯೧೯). ತೆಲುಗಿನಲ್ಲಿ ಡಕ್ಕಲ್/ಡೊಕ್ಕ ಎಂಬುದಕ್ಕೆ ಬೆನ್ನಲುಬು ಎಂಬ ಪದವಿದ್ದು ಬೆನ್ನೆಲುಬಿನಿಂದ ಮತ್ತೆ  ಜೀವ ಪಡೆದವನು ಎಂಬ ಅರ್ಥವನ್ನು ನೀಡುತ್ತದೆ. ಹೀಗೆ ಪುನಃ ಜೀವ ಪಡೆದ ದಕ್ಕ ಮುನಿಯ ವಂಶಸ್ಥರೇ ದಕ್ಕಲರೆಂದು ಹೇಳುತ್ತಾರೆ.

ಕರ್ನಾಟಕದಲ್ಲಿ ದಕ್ಕಲರು ಬೀದರ, ಗುಲ್ಬರ್ಗಾ, ರಾಯಚೂರು, ಬಿಜಾಪುರ, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ದಕ್ಕಲಿಗರು ಮೂಲತಃ ಭಿಕ್ಷೆಯನ್ನು ಅವಲಂಬಿಸಿ ಬದುಕುವ ಗುಂಪು. ಬೇಟೆಯಾಡುವುದು ಉಪ ಕಸುಬು. ಸುತ್ತಮುತ್ತಲಿನ ಕೆರೆಗಳಲ್ಲಿ ಮೀನು ಹಿಡಿದು, ಸಣ್ಣ ಮೀನುಗಳನ್ನು ಒಣಗಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಇತ್ತೀಚೆಗೆ ಇವರಲ್ಲಿ ಕೆಲವರು ತಮ್ಮ ಮೂಲವೃತ್ತಿಯನ್ನು ಬಿಟ್ಟು, ಸರಕಾರ ನೀಡಿರುವ ದರಖಾಸ್ತು ಭೂಮಿ ಪಡೆದು ವ್ಯವಸಾಯದಲ್ಲಿ ತೊಡಗಿದ್ದಾರೆ.

ದಕ್ಕಲರು ಮೂಲತಃ ಅಲೆಮಾರಿಗಳಾದ್ದರಿಂದ ಇವರಿಗೆ ಒಂದು ನಿಗದಿತ ಸ್ಥಳ ಕಂಡುಬರುವುದಿಲ್ಲ. ಸಾಮಾನ್ಯವಾಗಿ ಇವರು ತಮ್ಮ ವಾಸಕ್ಕಾಗಿ ಊರಿನ ಮಾದಿಗರ ಕೇರಿಯ ಸಮೀಪದ ಬಯಲು ಅಥವಾ ಮರಗಳ ಕೆಳಗೆ ವಸತಿಯನ್ನು ನಿರ್ಮಿಸಿಕೊಳ್ಳುತ್ತಾರೆ. ಆದಿಜಾಂಬವ ಜಾತಿಯಲ್ಲಿನ ಉಪಜಾತಿ ಎಂದು ಗುರುತಿಸಿಕೊಳ್ಳುವ ದಕ್ಕಲರು, ‘ಮಹಾರಾಷ್ಟ್ರದಲ್ಲಿ ಮಾಂಗ್‌ರ ಉಪಜಾತಿಯವರಾಗಿದ್ದಾರೆ. ಆಂಧ್ರದ ತೆಲುಗು ಮಾದಿಗರಲ್ಲಿ ಹಾಗೂ ಕರ್ನಾಟಕದ ಮಾದಿಗರಲ್ಲಿ ಉಪಜಾತಿಯವರಾಗಿ ಕಂಡುಬರುತ್ತಾರೆ. ಒಟ್ಟಿನಲ್ಲಿ ದಕ್ಕಲರು ಮಾದಿಗರಲ್ಲಿನ ಒಂದು ಉಪಜಾತಿ ಎಂಬುದು ಸ್ಪಷ್ಟ. ಇವರಲ್ಲಿ ಕುರಿಯರು, ಮೇಲರು ಮತ್ತು ಕಂಬಳೇರು ಮುಂತಾದ ಬೆಡುಗಗಳಿವೆ. ಐವಳೇರು, ಕಸ್ತೂರೆಡು, ಕಬ್ಬರಿಕೆ, ಡವಾಣಿರು, ಡಾಕೂರರು, ಬಾಣದವರು, ಕಮಿರಿಕಿ, ನಲ್ಲಪೋಗಲು, ಹಿರಿಗೋಡು, ಕಮರಿಗೋಡು, ಟಗರು, ಇತ್ಯಾದಿ ಬೆಡಗುಗಳು ಕಂಡುಬರುತ್ತವೆ (ಚೆಲುವರಾಜು, ೧೯೯೩).ಕಂಬಳೇರು, ಐವಳೇರು, ಟಗರು ಬೆಡಗುದವರು ಪರಸ್ಪರ ಅಣ್ಣ ತಮ್ಮಂದಿರ ಭಾವನೆ ಇರುವುದರಿಂದ ಇವುಗಳ ನಡುವೆ ವೈವಾಹಿಕ ಸಂಬಂಧ ನಡೆಯುವುದಿಲ್ಲ. ಹೆಣ್ಣು ಮಗಳ ಬಸಿರಿನ ಸಮಯದಲ್ಲಿ, ಐದನೆಯ ತಿಂಗಳಲ್ಲಿ ಉಡಿ ತುಂಬುವುದು ಎಂಬ ಶಾಸ್ತ್ರ ಮಾಡುತ್ತಾರೆ. ದಕ್ಕಲರಲ್ಲಿ ಸತ್ತರೆ, ಹೂಳುವ ಮತ್ತು ಸುಡುವ ಪದ್ಧತಿ ಇದೆ. ಸತ್ತವರಿಗೆ ಮೂರನೇ ದಿನ ಕೂಳು, ಹದಿನಾರನೇ ದಿವಸ ತಿಥಿ ಹಾಗೂ ವರ್ಷದ ತಿಥಿಯನ್ನು ನಡೆಸುತ್ತಾರೆ.

ದಕ್ಕಲರು ಆಚರಿಸುವ ಪ್ರಮುಖ ಹಬ್ಬಗಳು ಯುಗಾದಿ, ದುರ್ಗಮ್ಮನ ಹಬ್ಬ, ಚೌಡಮ್ಮನ ಹಬ್ಬ, ಬನ್ನಿ ಹಬ್ಬ, ಹೋಳಿ, ಗೌರಿ, ದಸರಾ, ದೀಪಾವಳಿ, ಇತ್ಯಾದಿ. ದಕ್ಕಲರ ಆಚಾರ ವಿಚಾರಗಳಲ್ಲಿ ಬದಲಾವಣೆಗಳು ಉಂಟಾಗಿರುವುದನ್ನು ಹಲವಾರು ವಿದ್ವಾಂಸರು ಗುರುತಿಸಿದ್ದಾರೆ. ಇವರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿಗಳು ಸುಧಾರಣೆಯಾಗಬೇಕಾದ ಅಗತ್ಯವಿದೆ.

ನೋಡಿ:

ಚಂದ್ರಶೇಖರ ಕಂಬಾರ., ೧೯೮೫. ಕನ್ನಡ ಜಾನಪದ ವಿಶ್ವಕೋಶ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಚೆಲುವರಾಜು., ೧೯೯೩. ದಕ್ಕಲರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು

Mysore Census Report L. 1891. Mysore State Gazeteer Govt., of India

Sherring M.A., 1994. The Tribes & Castes of the Bombay Presidency