ಖ್ಖನಿ ಸಿಖ್ಖರು ಪಂಜಾಬಿನಿಂದ ವಲಸೆ ಬಂದ ಒಂದು ಸಮುದಾಯ. ಕರ್ನಾಟಕದ ಎಲ್ಲಾ ಜಿಲ್ಲೆಯಲ್ಲಿ ವಿರಳವಾಗಿ ವಾಸವಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ವ್ಯಾಪಾರಿಗಳಾಗಿ ಕರ್ನಾಟಕಕ್ಕೆ ಬಂದವರು. ಆದರೆ ದಂತ ಕಥೆ ಪ್ರಕಾರ, ಗುರುಗೋವಿಂದಸಿಂಗ್, ಸಿಖ್ಖರ ಹತ್ತನೇ ಧರ್ಮಗುರು ‘ನಾಂದೇಡ’ಕ್ಕೆ (ಈಗ ಮಹಾರಾಷ್ಟ್ರದ್ಲಲಿದೆ, ಮೊದಲು ಹೈದರಾಬಾದ್ ರಾಜ್ಯದಲ್ಲಿತ್ತು) ಭೇಟಿ ನೀಡಿದರಂತೆ. ಆಕಸ್ಮಿಕ ಗೋದಾವರಿ ನದಿಯ ದಂಡೆಯಲ್ಲಿ ಬಂಡ ಭೈರಾಗಿಯನ್ನು ಎದುರಾದರಂತೆ. ಬೈರಾಗಿ ಸಿಖ್ಖ್ ಧರ್ಮಕ್ಕೆ ಮತಾಂತರಗೊಂಡರಂತೆ. ಇನ್ನೊಂದು ಕಥೆ ಪ್ರಕಾರ ಮಹಾರಾಜ ರಣಜಿತ ಸಿಂಗ್ ಒಂದು ಸೈನ್ಯದ ತುಕಡಿಯನ್ನು ಹೈದರಾಬಾದಿನ ನಿಜಾಮರ ಕೋರಿಕೆಯ ಮೇರೆಗೆ, ಅಲ್ಲಿ ಶಾಂತಿ ಸಹನೆ ಕಾಪಾಡಲು ಕಳಿಸಿದ್ದರಂತೆ. ನಿಜಾಮರಿಗೆ ಅವಶ್ಯಕತೆ ಇರುವವರೆಗೆ ಹಿಂತಿರುಗಬಾರದೆಂದು ಈ ಸೈನಿಕರಿಗೆ ಆದೇಶ ನೀಡಲಾಯಿತು. ಅಷ್ಟೇ ಅಲ್ಲ ಅವರಿಗೆ ಪಂಜಾಬಿನ ರಾಜನಿಂದ ಆದೇಶ ಬರದೆ ಹಿಂತಿರುಗುವುದನ್ನು ಊಹಿಸುವಂತೆಯೇ ಇರಲಿಲ್ಲ. ಹೀಗೆ ವಲಸೆ ಬಂದವರ ಸಂತತಿಯರವೇ ದಖನಿ ಸಿಖ್ಖರು.

ಇವರ ಮಾತೃಭಾಷೆ ಪಂಜಾಬಿ, ಇವರು ಹಿಂದಿಯಲ್ಲೂ ವ್ಯವಹರಿಸಬಲ್ಲರು. ಗುರುಮುಖಿ ಲಿಪಿಯನ್ನು ಸಮುದಾಯದ ಒಳಗೆ ಬಳಸುತ್ತಾರೆ. ಉಳಿದವರೊಂದಿಗೆ ವ್ಯವಹರಿಸುವಾಗ ದೇವನಾಗರಿ ಹಾಗೂ ಹಿಂದು ಲಿಪಿಯನ್ನು ಬಳಸುತ್ತಾರೆ. ಇವರು ಒಳಭಾಂದವ್ಯ ವಿವಾಹ ಪದ್ಧತಿಯನ್ನು ಅನುಸರಿಸುವರು. ಹಿರಿಯ ಮಗನಿಗೆ ತಂದೆಯ ನಂತರ ಮನೆಯ ವಾರಸುದಾರಿಕೆ ಸಿಗುತ್ತದೆ. ಸಾಮಾಜಿಕ, ಆರ್ಥಿಕ ವಿಷಯಗಳಲ್ಲಿ ಹೆಂಗಸರಿಗೂ ಸಮಾನ ಗೌರವವಿದೆ. ಜನನ ಸೂತಕವು ಹದಿಮೂರು ದಿನಗಳವರೆಗೆ ಇರುತ್ತದೆ, ನಲವತ್ತು ದಿನಗಳ ನಂತರ ಮಗು ಹಾಗೂ ತಾಯಿಯನ್ನು ಗುರುದ್ವಾರಕ್ಕೆ ಕರೆದೊಯ್ಯುತ್ತಾರೆ. ಕೀರ್ತನೆಯ ನಂತರ ಮಗುವಿಗೆ ಹೆಸರಿಡಲಾಗುತ್ತದೆ. ಮದುವೆಯ ಆಚರಣೆಗಳಲ್ಲಿ ದಿವಾನ, ಕೀರ್ತನೆ ಇರುತ್ತವೆ. ಇವರು ಶವವನ್ನು ಸುಡುತ್ತಾರೆ.

ಇವರ ಸಾಂಪ್ರದಾಯಿಕ ವೃತ್ತಿಯಾದ ವ್ಯವಸಾಯದಲ್ಲಿ ಈಗಲೂ ಕೆಲವರು ಮುಂದುವರೆಸುತ್ತಲಿದ್ದಾರೆ. ಇತ್ತೀಚೆಗೆ ದಖನಿ ಸಿಖ್ಖರು ಅನುಸರಿಸುವ ವೃತ್ತಿಗಳೆಂದರೆ ವ್ಯಾಪಾರ, ಸರ್ಕಾರಿ ಸೇವೆ, ಸ್ವಯಂ-ಉದ್ಯೋಗ ಹಾಗೂ ಔದ್ಯೋಗಿಕ ಕೆಲಸ ಇವರ ಧಾರ್ಮಿಕ ಪುರೋಹಿತ (ಜಾತೆದಾರ) ಇವರ ಮದುವೆ ಹಾಗೂ ಸಾವು ಇತರೆ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಡುತ್ತಾರೆ. ರಕ್ಷಾಬಂಧನ, ದಸರಾ, ದೀಪಾವಳಿ, ಹೋಳಿ, ಇತ್ಯಾದಿ ಹಬ್ಬಗಳನ್ನು ಆಚರಿಸುತ್ತಾರೆ. ಕರ್ನಾಟಕದಲ್ಲಿ ವ್ಯಾಪಾರವನ್ನೇ ಪ್ರಧಾನ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಈ ಸಮುದಾಯದಲ್ಲಿ ಬಹಳಷ್ಟು  ಜನರು ಆಧುನಿಕ ವೃತ್ತಿಯಲ್ಲಿ ತೋಡಗಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮಗಳು ಆಧುನಿಕ ವಿದ್ಯಾಭ್ಯಾಸ, ಇಂಥ ಹಲವು ಯೋಜನೆಗಳ ಸೌಲಭ್ಯ ಪಡೆದಿದ್ದಾರೆ. ಆಧುನಿಕ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಿಕೊಂಡು ಅಭಿವೃದ್ಧಿಯನ್ನು ಹೊಂದುತ್ತಿದ್ದಾರೆ.