ದರ್ಜಿಯರನ್ನು ಭಾವಸಾರ ಕ್ಷತ್ರಿಯ, ನಾಮದೇವ, ಶಿಂಪಿ, ಶಿಂಪಿ ಎಂದೂ ಕರೆಯುತ್ತಾರೆ. ಇವರು ಮನೆಯಲ್ಲಿ ಹಾಗೂ ಸಂಬಂಧಿಕರೊಡನೆ ಮರಾಠಿಯನ್ನು ಮಾತನಾಡುತ್ತಾರೆ. ಇತರರೊಂದಿಗೆ ಕನ್ನಡದಲ್ಲಿ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಈ ಸಮುದಾಯದ ಜನರು ಸಾಮಾನ್ಯವಾಗಿ ಕರ್ನಾಟಕದ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕಂಡುಬರುತ್ತಾರೆ. ಇವರಲ್ಲಿ ಮೂರು ಭಿನ್ನಕುಲಗಳನ್ನು ಹೆಸರಿಸಲಾಗಿದೆ-ದೇವಲ, ಕುಂದಲ ಹಾಗೂ ಹರಿದಾಸ ಇವರಲ್ಲಿ ಹೊರಬಾಂಧವ್ಯದ ಬಳ್ಳಿಗಳೂ ಕೂಡ ಇವೆ, ಅವೆಂದರೆ ಪಿಸ್ಸೆ, ವಾಡೆ, ಕಾಕಡೆ, ಇತ್ಯಾದಿಗಳು. ಸೋದರ ಸಂಬಂಧಿ ವಿವಾಹಗಳಿಗೆ ಇವರಲ್ಲಿ ಅವಕಾಶವಿದೆ. ವರದಕ್ಷಿಣೆಯನ್ನು ಹಣ ಅಥವಾ ಇನ್ನಾವುದೇ ರೂಪದಲ್ಲಿ ಕೊಡುತ್ತಾರೆ. ಜನಿವಾರವನ್ನು ಧರಿಸುತ್ತಾರೆ.

ಸಾಂಪ್ರದಾಯಿಕವಾಗಿ ದರ್ಜಿಗಳು ಬಟ್ಟೆ ಹೊಲಿಯುವ ಸಮುದಾಯ. ಇವರಲ್ಲಿ ಕೆಲವರು ಸರ್ಕಾರಿ ಹಾಗೂ  ಖಾಸಗಿ ಸಂಸ್ಥೆಗಳಲ್ಲಿ ನೌಕರಿಯಲ್ಲಿದ್ದಾರೆ. ಈ ಸಮುದಾಯದವರಿಗೆ ತಮ್ಮದೇ ಜಾತಿಯ ಸಂಘಟನೆಯಿದೆ. ಇವರು ಶಿವ, ವಿಷ್ಣು, ಭವಾನಿ ಇತರೆ ದೇವರುಗಳನ್ನು ಪೂಜಿಸುತ್ತಾರೆ. ಬ್ರಾಹ್ಮಣ ಪುರೋಹಿತರು ಇವರ ಧಾರ್ಮಿಕ ವಿಧಿಗಳನ್ನು ಪೂರೈಸುತ್ತಾರೆ. ಯುಗಾದಿ, ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಇವರು ಆಚರಿಸುವ ಕೆಲವು ಮುಖ್ಯ ಹಬ್ಬಗಳು. ಈ ಸಮುದಾಯದಲ್ಲಿ ಕೆಲವರು ಆಧುನಿಕ ವೃತ್ತಿಗಳಲ್ಲಿದ್ದಾರೆ. ಆಧುನಿಕ ಸಾಮಾಜಿಕ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಆರ್ಥಿಕ, ಸಾಮಾಜಿಕ ಬದಲಾವಣೆಯನ್ನು ಹೊಂದುತ್ತಿದ್ದಾರೆ.