ದಾಸರಿಗಳು, ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಕಾಣಸಿಗುತ್ತಾರೆ. ಇವರು ತೆಲುಗು, ಕನ್ನಡ ಮಾತನಾಡಿ, ಕನ್ನಡ  ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಕೆಲವು ಒಳಬಾಂಧವ್ಯ ಪಂಗಡಗಳಿವೆ. ಅವುಗಳನ್ನು ವೃತ್ತಿಗನುಸಾರ ಮಾಡಲಾಗಿದೆ. ಅವೆಂದರೆ ಸುನಿವ, ಶಂಖು, ನಾಮಧಾರಿ, ಧರ್ಮ, ಮುಂದಾಳ್ರು, ಪಲ್, ಉಮ್ಮೆತ್ತು, ಇತ್ಯಾದಿ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಕಂಡುಬರುತ್ತದೆ. ಸಾಂಪ್ರದಾಯಿಕವಾಗಿ ವಧುದಕ್ಷಿಣೆಯನ್ನು ಕೊಡಬೇಕು. ಮರುವಿವಾಹಗಳಿಗೆ ಈ ಸಮಾಜದಲ್ಲಿ ಅವಕಾಶವಿದೆ. ತಂದೆಯ ನಂತರ ಹಿರಿಯ ಮಗ ಮನೆಯ ಯಜಮಾನನಾಗುತ್ತಾನೆ. ಜನನದ ಸೂತಕವು ಹನ್ನೊಂದು ದಿನಗಳವರೆಗೆ ಇರುತ್ತದೆ, ನಂತರ ನಾಮಕರಣ ಶಾಸ್ತ್ರವಿರುತ್ತದೆ. ಮದುವೆಯು ವರನ ಮನೆಯಲ್ಲಿ ನಡೆಯುತ್ತದೆ. ಶವವನ್ನು ಹೂಳುತ್ತಾರೆ ಹಾಗೂ ಸಾವಿನ ಸೂತಕವು ಹನ್ನೊಂದು ದಿನಗಳವರೆಗೆ ಇರುತ್ತದೆ.

ಇವರ ಸಾಂಪ್ರದಾಯಿಕ ವೃ‌ತ್ತಿ ಭಿಕ್ಷೆ ಬೇಡುವುದು. ಹೊಲೆಯ, ಮಾದಿಗ, ಹಾಗೂ ಜಾಂಬುವ ಜಾತಿಯವರಿಗೆ ಪುರೋಹಿತರಾಗಿಯೂ ಕೆಲಸ ಮಾಡುತ್ತಾರೆ. ಕೆಲವರು ವ್ಯವಸಾಯದ ಕೂಲಿಗಳಾಗಿಯೂ ದುಡಿಯುತ್ತಾರೆ. ಆಂಜನೇಯ, ಹಾಗೂ ನರಸಿಂಹ ಇವರು ಪೂಜಿಸುವ ದೇವರುಗಳು. ಇವರು ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಕಾರ್ಯಕ್ರಮಗಳನ್ನು ಉಪಯೋಗಿಸಿಕೊಂಡು ಅಭಿವೃದ್ಧಿ ಸಾಧಿಸಲು ಪ್ರಯತ್ನಿಸಿದ್ದಾರೆ. ಆದರೆ ಇವರ ಆರ್ಥಿಕ, ಶೈಕ್ಷಣಿಕ, ಪರಿಸ್ಥಿತಿಯು ಸುಧಾರಣೆಯಾಗಬೇಕಾದ ಅಗತ್ಯವಿದೆ.