ದೀವರು ಶಿವಮೊಗ್ಗ ಸಾಗರ, ಸೊರಬ ಮತ್ತು ಹೊಸನಗರ ತಾಲೂಕುಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರು ಮಲೆನಾಡಿನ ಒಂದು ಬುಡಕಟ್ಟು. ಇವರನ್ನು ಹಳೇಪೈಕ ಎಂದು ಸಹ ಕರೆಯುತ್ತಾರೆ. ಹಳೇಪೈಕ ಎನ್ನುವ ಪದವೇ ಇವರ ಪ್ರಾಚೀನತೆಯನ್ನು ಸೂಚಿಸುತ್ತದೆ. ಇವರಲ್ಲಿ ಕಾನದೀವರು ಮತ್ತು ಬಗನಿದೀವರು ಎಂಬ ಎರಡು ಉಪಪಂಗಡಗಳು ಕಂಡುಬರುತ್ತವೆ. ಸಾಂಪ್ರದಾಯಕವಾಗಿ ಇವರು ಮರದಿಂದ ಹೆಂಡ ಇಳಿಸುವ ವೃತ್ತಿಯನ್ನು ಮಾಡಿಕೊಂಡಿವರು. ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ತಮ್ಮನ್ನು ತೋಡಗಿಸಿಕೊಂಡಿದ್ದಾರೆ. ದೀವರನ್ನು ಈಡಿಗರ ಒಂದು ಉಪಪಂಗಡಗಳಾಗಿ ಪರಿಗಣಿಸಲಾಗಿದೆ. ಅತ್ಯಂತ ಶ್ರೀಮಂತ ಜಾನಪದ ಪರಂಪರೆಯುಳ್ಳ ಈ ಜನರು ಭೂಮಿ ಹುಣ್ಣಿಮೆ ಮತ್ತು ಗೌರಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ಭೂಮಿ ಹುಣ್ಣಿಮೆಯ ಸಂದರ್ಭದಲ್ಲಿ ಬಟ್ಟೆಗಳ ಮೇಲೆ ಬರೆಯುವ ಚಿತ್ತಾರಗಳು ಹಾಗೂ ಮದುವೆಯ ಸಂದರ್ಭದಲ್ಲಿ ಗೋಡೆಗಳ ಮೇಲೆ ಬರೆಯುವ ಚಿತ್ತಾರಗಳು ಅತ್ಯಂತ ಮನಮೋಹಕ. ಸಾಂಸ್ಕೃತಿಕ ನಾಯಕನಾದ ಕುಮಾರರಾಮನ ಆರಾಧನೆಯನ್ನು ಮಾಡುತ್ತಾರೆ. ದೀವರು ಡೊಳ್ಳಿನ ಕುಣಿತದಲ್ಲಿ ಪರಿಣತರು.

ಸ್ವಾತಂತ್ರ್ಯಪೂರ್ವದಲ್ಲಿ ಭೂಮಾಲಿಕರ ಭೂಮಿಗಳಲ್ಲಿ ಕೃಷಿ ಕೂಳಿಗಳಾಗಿ ಗೇಣಿದಾರರಾಗಿ ದುಡಿಯುತ್ತಿದ್ದ ಇವರು ಸ್ವಾತಂತ್ರ್ಯಾನಂತರದಲ್ಲಿ ಸ್ವಲ್ಪ ಉನ್ನತ ಸ್ಥಿತಿಗೆ ಬಂದರು. ಪ್ರಸಿದ್ಧ ಸಮಾಜವಾದಿ ನಾಯಕ ಗೋಪಾಲ ಗೌಡರ ನಾಯಕತ್ವದಲ್ಲಿ ನಡೆದ ಭುಸುಧಾರಣ ಚಳುವಳಿ ಈ ಸಮುದಾಯದ ಜನರಿಗೆ ವರವಾಗಿ ಪರಿಣಮಿಸಿತು. ಈ ಚಳುವಳಿಯು ದೀವರನ್ನು ಅಂದಿನ ಭೂಮಾಲಿಕರಿಂದ ಮುಕ್ತಿಗೊಳಿಸಿತು. ಇದಕ್ಕೆ ಕಾಗೋಡು ಸತ್ಯಾಗ್ರಹ ಚಳುವಳಿ ಪ್ರಸಿದ್ಧ ಉದಾಹರಣೆ. ನಂತರದ ದಿನಗಳಲ್ಲಿ ತಮ್ಮ ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಮನಾರ್ಹವಾದ ಬದಲಾವಣೆಯನ್ನು ಹೊಂದಿದ್ದಾರೆ.

ದೀವರ ಮಹಿಳೆಯರು

ದೀವರ ಮಹಿಳೆಯರು

ದೀವರಲ್ಲಿ ವಿಭಕ್ತ ಕುಟುಂಬಗಳು ಸಾಮಾನ್ಯ. ತಂದೆಯ ಆಸ್ತಿಯನ್ನು ಗಂಡು ಮಕ್ಕಳಿಗೆ ಸಮನಾಗಿ ಹಂಚಲಾಗುತ್ತದೆ. ಹಿರಿಯಮಗ ತಂದೆಯ ನಂತರ ವಾರಸುದಾರನಾಗುತ್ತಾನೆ. ಇವರಲ್ಲಿ ಹೊರಬಾಂಧವ್ಯ ಮದುವೆಗಳು ಚಾಲ್ತಿಯಲ್ಲಿವೆ. ರಕ್ತ ಸಂಬಂಧಿಗಳಲ್ಲೇ ಮದುವೆಯಾಗಲು ಪ್ರೋತ್ಸಾಹಿಸುತ್ತಾರೆ. ವಧುದಕ್ಷಿಣೆಯನ್ನು ವಸ್ತುಗಳ ರೂಪದಲ್ಲಿ ಕೊಡುತ್ತಾರೆ. ವಿವಾಹ ವಿಚ್ಛೇದನೆಗೆ ಅವಕಾಶವಿದೆ. ವಿಚ್ಛೇದನ ನಂತರ ಮಕ್ಕಳು ತಂದೆಯ ಬಳಿ ಉಳಿಯುತ್ತಾರೆ. ವಿಚ್ಛೇದಿತರಿಗೆ ವಿವಾಹವಾಗಲು ಅವಕಾಶವಿದೆ. ಋತುಮತಿಯಾದಾಗ ಮಾಡುವ ವಿಧಿಯನ್ನು ‘ಹೊಸಿಗೆ’ ಎಂದು ಕರೆಯುತ್ತಾರೆ. ಶವವನ್ನು ಹೂಳುತ್ತಾರೆ. ಸೂತಕವು ಹನ್ನೊಂದು ದಿನ ಇರುತ್ತದೆ.

ಇವರ ಸಾಂಪ್ರದಾಯಿಕ ವೃತ್ತಿಯೆಂದರೆ, ಈಚಲು ಮರದಿಂದ ಮಧ್ಯ (ಕಳ್ಳು ಇಳಿಸುವುದು) ಸಂಗ್ರಹಿಸುವುದು. ಇವರಲ್ಲಿ ವ್ಯವಸಾಯಗಾರರು ಹಾಗೂ ವ್ಯವಸಾಯದ ಕೂಲಿಗಳೂ ಇದ್ದಾರೆ. ದೀವರು ಇತ್ತೀಚೆಗೆ ರಾಜಕೀಯ ಹಾಗೂ ಇತರ ಸೌಲಭ್ಯಗಳಿಗಾಗಿ ಸಂಘಟನೆಯಾಗಿದ್ದಾರೆ. ಯಲ್ಲಮ್ಮ ಈ ಕೋಮಿನ ಆರಾಧ್ಯ ದೈವ. ಸುರೆಗಡಿಗೆ ದೇವರನ್ನು ಇವರು ಪೂಜಿಸುತ್ತಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕೀಯ ನಾಯಕರು ಈ ಸಮುದಾಯದಲ್ಲಿ ಇದ್ದಾರೆ. ಇವರು ಆಧುನಿಕ ಶಿಕ್ಷಣ ಪದ್ಧತಿ, ಇತರೆ ಆಧುನಿಕ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ.