ದುರಗಮುರಗಿಗಳು, ಮೂಲತಃ ಬುಡಕಟ್ಟಿನ ಸಮುದಾಯವಾಗಿದ್ದು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಲೆದಾಡುವ ಅಲೆಮಾರಿಗಳು. ಇವರ ಸಾಂಸ್ಕೃತಿ ಆಚಾರ ವಿಚಾರ ಇತ್ಯಾದಿಗಳನ್ನು  ನೋಡಿದರೆ ಇವರು ಭಿಲ್ಲಗೊಂಡ ಜಾತಿಯವರಿಂದ ಬಂದ ದ್ರಾವಿಡ ಜನಾಂಗಕ್ಕೆ ಸೇರಿದವರಾಗಿರಬೇಕು (ಗೀತಾನಾಗಭೂಷಣ, ೧೯೯೩). ಇವರ ಮೂಲದ ಬಗ್ಗೆ ದಾಖಲಾತಿಯಲ್ಲಿ ಭಿನ್ನಾಭಿಪ್ರಾಯಗಳು ಕಂಡುಬರುತ್ತವೆ. ದುರಗಮುರಗಿಗಳು ಉತ್ತರದಿಂದ ಬಂದವರೆಂದೂ ದ್ರಾವಿಡ ಗುಂಪಿಗೆ ಸೇರಿದವರೆಂದೂ ಚಂದ್ರಶೇಖರ ಕಂಬಾರರ ಒಂದು ಅಭಿಪ್ರಾಯ (ಕನ್ನಡ ಜಾನಪದ ವಿಶ್ವಕೋಶ ಪುಟ ೧೦೩೮-೧೯೮೫). ಚೆನ್ನಣ್ಣ ವಾಲೀಕಾರರು ಶಕ್ತಿ ಪೂಜಕರಾದ ದ್ರಾವಿಡ ಗುಂಪಿಗೆ ದುರಗಮುರಗಿಗಳು ಸೇರಿರುವುದರಿಂದ ಇವರು ದಕ್ಷಿಣದವರೇ ಆಗಿರಬೇಕು ಎಂದು ಅಭಿಪ್ರಾಯಪಡುತ್ತಾರೆ. ಇವರ ಭಾಷೆಯಿಂದ ಇವರು ತೆಲುಗು ಮೂಲದವರು ಎಂದು ತಿಳಿದುಬರುತ್ತದೆ.

ಈ ಸಮುದಾಯದ ಜನರು ಕರ್ನಾಟಕದಲ್ಲಿ ಬೀದರ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ಕೊಪ್ಪಳ, ಗದಗ, ಕಾವೇರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ದುರಗಮುರಗಿಗಳನ್ನು ಬುರ್ಬುರ್ಚರೆಂದು ಸಹ ಕರೆಯುತ್ತಾರೆ. ದುರುಗಮುರಗಿಯವರು ದೇವರ ಹೆಸರಿನಲ್ಲಿ ಭಿಕ್ಷೆ ಬೇಡುವ ಒಂದು ಸಣ್ಣ ಸಮುದಾಯ. ಇವರಲ್ಲಿ ಪೆಟ್ಟಿಗಿಯವರು ಮತ್ತು ಬುಟ್ಟಿಯವರುಎಂಬ ಒಳಬಾಂಧವ್ಯದ ಪಂಗಡಗಳಿವೆ. ಪೆಟ್ಟಿಗೆಯವರು ಮೇಲು ಎಂದು ಬುಟ್ಟಿಯವರು ಕೀಳು ಎಂಬ ಭಾವನೆ ಇದೆ.

ಭಿಕ್ಷಾಟನೆಯಲ್ಲಿದ್ದಾಗ ಒಬ್ಬ ದುರುಗಮುರುಗ ವ್ಯಕ್ತಿಯನ್ನು ಸುಲಭವಾಗಿ ಗುರುತಿಸಬಹುದು. ಸೊಂಟಕ್ಕೆ ಪಟ್ಟಿಯನ್ನು, ತಾಮ್ರದ ಸಣ್ಣಗಂಟೆಗಳಿರುವ ಗೆಜ್ಜೆ ಧರಿಸಿರುತ್ತಾನೆ. ತಲೆಕೂದಲುಗಳನ್ನು ಒಂದು ಗಂಟಾಗಿ ಕಟ್ಟಿರಲಾಗುತ್ತದೆ. ಇವನು ಕುಂಕುಮ ಮತ್ತು ಅರಿಶಿನ ಪಟ್ಟಿಗಳನ್ನು ಹಣೆಗೆ ಹಾಗೂ ತೋಳುಗಳಿಗೆ ಬಳಿದುಕೊಂಡಿರುತ್ತಾನೆ. ಈ ಸಮುದಾಯದಲ್ಲಿ ಪಿತೃಪ್ರಧಾನ ಬೆಡಗುಗಳಿವೆ. ಅವುಗಳಲ್ಲಿ ಕೆಲವನ್ನು ಗುರುತಿಸಲಾಗಿದೆ-ತುಮ್ಮಲವರು, ಬಿಸಿಲವರು, ಗುಜ್ಜಲವರು, ಸಂಗದವರು ಎಲ್ಲವರು, ಎರಗೊಂಡರವರು, ಬೆಳಗಂಥವರು ಮತ್ತು ಎಮ್ಮೆಗಳವರು. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ವಧುದಕ್ಷಿಣೆಯನ್ನು ಸಾಂಪ್ರದಾಯಿಕವಾಗಿ ಕೊಡಲಾಗುತ್ತದೆ. ಇವರ ಸಮಾಜದಲ್ಲಿ ವಿಚ್ಛೇದನೆ ಮತ್ತು ಮರುಮದುವೆಗೆ ಅವಕಾಶವಿದೆ. ಹಿರಿಯ ಮಗನು ತಂದೆಯ ನಂತರ ಮನೆಯ ಉತ್ತರಾಧಿಕಾರಿಯಾಗುವನು. ನಾಮಕರಣವನ್ನು ಮಗು ಹುಟ್ಟಿದ ಮೂರನೆಯ ದಿನದಲ್ಲಿ ಆಚರಿಸಲಾಗುತ್ತದೆ. ಗಂಡು ಮಗುವಿಗೆ ಐದು ತಿಂಗಳ ನಂತರ ಒಂದು ವರ್ಷದ ಮಧ್ಯೆ ಜವಳ ಆಚಾರ ವಿಧಿಯನ್ನು ಮಾಡುತ್ತಾರೆ.  ವಿವಾಹ ಮತ್ತು ವಿವಾಹ ಸಂಬಂಧಿ ಆಚಾರ ವಿಧಿಯನ್ನು ಮಾಡುತ್ತಾರೆ. ವಿವಾಹ ಮತ್ತು ವಿವಾಹ ಸಂಬಂಧ ಆಚಾರ ವಿಧಿಗಳನ್ನು ಮದುಮಗನ ಮನೆಯಲ್ಲಿ ನೆರವೇರುತ್ತದೆ. ಶವವನ್ನು ಸುಟ್ಟು, ಸೂತಕವನ್ನು ಹತ್ತು ದಿನಗಳವರೆಗೆ ಆಚರಿಸಲಾಗುತ್ತದೆ.

ಇವರು ಪ್ರಮುಖವಾಗಿ ಭಿಕ್ಷಾಟನೆಯಿಂದಲೆ ಬದುಕುತ್ತಾರೆ. ದುರುಗಮುರುಗ ಕುಟುಂಬವು ದೇವಿ-ದುರ್ಗವ್ವನ ಮೂರ್ತಿಯಿದ್ದ ಪೆಟ್ಟಿಗೆಯನ್ನು ಹಳ್ಳಿ ಹಳ್ಳಿಗಳಿಗೆ ತೆಗೆದುಕೊಂಡು ಹೋಗುತ್ತಾರಲ್ಲದೆ, ದಾರಿಯಲ್ಲಿ ದೇವಿಯ ಮೂರ್ತಿಯನ್ನು ಇಟ್ಟುಕೊಂಡು ಅದರ ಪ್ರದರ್ಶನವನ್ನು ನಡೆಸುತ್ತಾರೆ. ಹೆಂಗಸರು ಡೋಲು ಬಾರಿಸುವರು ಮತ್ತು ಅವರ ಪತಿ ತನ್ನನ್ನೆ ಲಡ್ಡಿನಿಂದ (ಚಾವಟಿ) ಹೊಡೆದುಕೊಂಡು ಜನರಲ್ಲಿ ಭಿಕ್ಷೆಯನ್ನಾಚಿಸುವನು.ಲ ಭಿಕ್ಷೆಯನ್ನು ಸಂಗ್ರಹಿಸಿದ ಮೇಲೆ ಇವರು ಬೇರೆ ಹಳ್ಳಿಗೆ ಸಂಚರಿಸುವರು. ಇತ್ತೀಚೆಗೆ ಇವರು ತಮ್ಮ ಸಾಂಪ್ರದಾಯಿಕ ಕಸಬನ್ನು ತೊರೆಯುತ್ತಿದ್ದಾರೆ. ಇವರಲ್ಲಿ ವಿದ್ಯಾಭ್ಯಾಸದ ಮಟ್ಟ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದೆ. ಆಧುನಿಕ ಸೌಲಭ್ಯಗಳ ಬಳಕೆ ಮತ್ತು ಉಪಯೋಗ ಇವರಲ್ಲಿ ಬಹಳ ಕಡಿಮೆ. ಇವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿಯು ಶೋಚನೀಯವಾಗಿದೆ.

ನೋಡಿ:

ಗೀತಾ ನಾಗಭೂಷಣ, ೧೯೯೩. ದುರುಗಮುರಗಿಯರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ; ಬೆಂಗಳೂರು.