ದೇವಲಿಗರು ಕರ್ನಾಟಕಕ್ಕೆ ಗೋವಾದಿಂದ ವಲಸೆ ಬಂದವರು. ಕೆಲವು ಶತಮಾನಗಳ ಹಿಂದೆ ಈ ಸಮುದಾಯದ ಮಹಿಳೆಯರು ದೇವಸ್ಥಾನದಲ್ಲಿ ಸಹಾಯಕರಾಗಿದ್ದರು. ದೇವಸ್ಥಾನದ ದೀಪಗಳಿಗೆ ಬತ್ತಿ ಹೊಸೆಯುವುದು,ದ ದೇವಸ್ಥಾನದ ಮುಂಗಟ್ಟುಗಳ ರಿಪೇರಿ ಹಾಗೂ ಸ್ವಚ್ಛಮಾಡುವುದು, ದೇವಸ್ಥಾನದ ಪಾತ್ರೆಗಳನ್ನು ತೊಳೆಯುವುದು, ಇತ್ಯಾದಿ ಕೆಲಸಗಳನ್ನು ಮಾಡಿಕೊಂಡಿದ್ದರು. ಅಂತಹ ಹೆಂಗಸರನ್ನು ಗೌರವದಿಂದ ಮೊದಲು ‘ಕಲಾವಂತ’ರೆಂದು ಕರೆಯುತ್ತಿದ್ದರು. ಈ ಮಹಿಳೆಯರ ವಂಶದಲ್ಲಿ ಜನಿಸಿದವರು ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಇವರಿಗೆ ಮೊದಲಿನ ಅಪಕೀರ್ತಿ ಇನ್ನೂ ಇದೆ. ಇವರ ಮೊದಲ ಹೆಸರು ‘ಗಮಂತಕ್ ಸಮಾಜ’ ಎನ್ನಲಾಗುತ್ತಿದೆ. ಇವರು ಮನೆಯಲ್ಲಿ ಕೊಂಕಣಿಯನ್ನು ಇತರೆ ಜನರ ಜೊತೆ ಕನ್ನಡವನ್ನು ಮಾತನಾಡಿ ಕನ್ನಡ ಲಿಪಿ ಬಳಸುವರು. ಮೊದಲು ವಂಶದ ಹೆಸರನ್ನು ತಾಯಿಯಿಂದ ಪಡೆಯುತ್ತಿದ್ದರು. ಆದರೆ ಇತ್ತೀಚೆಗೆ ತಂದೆಯಿಂದ ಪಡೆಯುತ್ತಾರೆ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ವಿವಾಹ ವಿಚ್ಛೇದನೆಗೆ ಹಾಗೂ ಮರುವಿವಾಹಗಳಿಗೆ ಅನುಮತಿಯಿದೆ. ಮನೆಯ ಹಿರಿಯ ಗಂಡುಮಗನಿಗೆ ತಂದೆಯ ನಂತರ ಮನೆಯ ಉತ್ತರಾಧಿಕಾರತ್ವ ದೊರೆಯುತ್ತದೆ. ಈಗ ದೇವಲಿಗಳು ಹೆಚ್ಚಾಗಿ ನಗರಗಳಲ್ಲಿ ವಾಸಿಸಿ, ಅನೇಕ ಆಧುನಿಕ ವೃತ್ತಿಗಳಲ್ಲಿ ತೊಡಗಿದ್ದಾರೆ. ಹಳ್ಳಿ ಗಾಡಿನಲ್ಲಿ ಕೆಲವೊಂದು ಕುಟುಂಬಗಳು ಸ್ವಂತ ಭೂಮಿಯನ್ನು ಹೊಂದಿ ವ್ಯವಸಾಯವನ್ನು ಮಾಡುತ್ತಿದ್ದಾರೆ. ಇವರು ಗಣೇಶ, ದುರ್ಗ, ವಿಷ್ಣು, ಈಶ್ವರ  ಮುಂತಾದ ದೇವರುಗಳನ್ನು ಪೂಜಿಸುತ್ತಾರೆ. ಇವರ ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.