ದೇವಾಂಗ ಸಮುದಾಯ, ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ವಾಸಿಸುತ್ತಿದ್ದಾರೆ. ಕನ್ನಡ ದೇವಾಂಗರು ಕನ್ನಡದಲ್ಲಿ ಮಾತನಾಡಿದ್ದರೆ. ತೆಲುಗು ದೇವಾಂಗರು ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ದೇವಲ ಮಹರ್ಷಿ ಪುರಾಣ ಕಥೆ ಹಿನ್ನೆಲೆಯಲ್ಲಿ ತಮ್ಮ ಮೂಲವನ್ನು ಗುರುತಿಸಿಕೊಳ್ಳುತ್ತಾರೆ. ಇವರಲ್ಲಿ ಹಲವಾರು ಹೊರಬಾಂಧವ್ಯದ ಬಳ್ಳಿಗಳಿವೆ – ಬೆಣ್ಣೆ, ದಬ್ಬೆ, ಕಡಗ, ಮುಚ್ಚಳಮ, ಅಬಲಿ ಹಾಗೂ ಬೆಳ್ಳಿ. ಬೆಳ್ಳಿ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿಯನ್ನು, ಸಮುದಾಯ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ ಪದ್ಧತಿಯನ್ನು  ಇವರು ಪಾಲಿಸುತ್ತಾರೆ. ಸಾಂಪ್ರದಾಯಿಕವಾಗಿ ಇಪ್ಪತ್ತು ರೂಪಾಯಿಗಳ ವಧುದಕ್ಷಿಣೆ ಕೊಡುತ್ತಾರೆ. ಇತ್ತೀಚೆಗೆ ವರದಕ್ಷಿಣೆಯನ್ನು ಹಣ ಅಥವಾ ಇತರೆ ರೂಪಾಯಿಗಳಲ್ಲಿ ಕೊಡುತ್ತಾರೆ. ವಿವಾಹ ವಿಚ್ಛೇದನೆಗೆ ಅವಕಾಶವಿಲ್ಲ. ಹಿರಿಯ ಗಂಡು ಮಗನಿಗೆ ತಂದೆಯ ನಂತರ ಮನೆಯ ವಾರಸುದಾರಿಕೆ ದೊರೆಯುತ್ತದೆ. ಹೆರಿಗೆಗೆ ಮುನ್ನಿನ ಆಚರಣೆ ‘ಸೀಮಂತ’ ವನ್ನು ಗರ್ಭಿಣಿಯಾದ ಐದನೆ ತಿಂಗಳಲ್ಲಿ ಮಾಡುತ್ತಾರೆ. ಜನನ ಸೂತಕವು ಹತ್ತುದಿನಗಳವರೆಗೆ ಇದ್ದು ನಾಮಕರಣವು ಹನ್ನೊಂದನೇ ದಿನ ನಡೆಯುತ್ತದೆ. ಋತುಮತಿಯಾದಾಗ ‘ಹೊಸಿಗೆ’ ಕಾರ್ಯ ಮಾಡುತ್ತಾರೆ. ಮದುವೆಯ ಆಚರಣೆಗಳಲ್ಲಿ ಕಾಶೀ ಯಾತ್ರೆಗೆ ಕಳುಹಿಸುವುದು, ಅರಿಶಿನ ಹಚ್ಚುವುದು, ತಾಳಿ ಕಟ್ಟುವುದು, ಕಾಲುಂಗುರ ತೊಡಿಸುವುದು, ಇತ್ಯಾದಿ.

ದೇವಾಂಗರು ಸಾಂಪ್ರದಾಯಿಕವಾಗಿ ನೇಯ್ಗೆ ಮಾಡುವವರು. ಇವರಲ್ಲಿ ಕೆಲವರು ತಮ್ಮ ಸಾಂಪ್ರದಾಯಿಕ ವೃತ್ತಿಯನ್ನು ಹಾಗೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇವರಲ್ಲಿ ಕೆಲವರು ಜವಳಿ ವ್ಯಾಪಾರ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಯಲ್ಲಿ ಇದ್ದಾರೆ. ಇವರಿಗೆ ತಮ್ಮದೇ ಆದ ಸಂಘಟನೆಯಿದೆ. ಅದನ್ನು “ದೇವಾಂಗ ಸಮಾಜ ಸಂಘ” ಎಂದು ಕರೆಯುತ್ತಾರೆ. ಅದು ಇವರ ಅಭಿವೃದ್ಧಿ ಹಾಗೂ ಏಳಿಗೆಗೆ ಶ್ರಮಿಸುತ್ತದೆ. ಇವರು ಲಕ್ಷ್ಮಿ, ಶಿವ, ಪಾರ್ವತಿ, ವೆಂಕಟರಮಣ,  ದೇವಲಮಹರ್ಷಿ ಮಾರಮ್ಮ ಇತರೆ ದೇವತೆಗಳನ್ನು ಪೂಜಿಸುತ್ತಾರೆ. ಆಧುನಿಕ ಶಿ‌ಕ್ಷಣ, ಇತರೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ನೋಡಿ:

Deep Kumar, V.S. and T.Ramachadrish, 1985. ‘Palmar C-line Variation Among The Telugu and Tamil Weaver Communities of Andhra Pradesh’, Indian Journal of Physical Anthropology & Human Genetics 11)1) 71-76

Ghettiar R.M., 1971. ‘Catholic Devara Kula Varalaru’  (in Tamil) : Catholic Devanga Sangam, Coimbatore