ದೇವಾಡಿಗ ಕರ್ನಾಟಕದ ಹಾಗೂ ಕೇರಳ ಗಡಿ ಜಿಲ್ಲೆಗಳಲ್ಲಿ ಕಂಡುಬರುವ ಒಂದು ಕರೆಯುತ್ತಾರೆ. ಉಡುಪಿಯ ಕಡೆಯಲ್ಲಿ ಇವರನ್ನು ಶೇರೆಗಾರರು ಎಂದು ಕರೆಯುತ್ತಾರೆ. ಇವರಲ್ಲಿ ಎರಡು ಉಪಗುಂಪುಗಳಿವೆಯೆಂದು ನಂಬಲಾಗಿದೆ. ಅವೆಂದರೆ ಕನ್ನಡ ಮೊಯ್ಲಿ, ತುಳುಮೊಯ್ಲಿ. ಹಿಂದೆ ಅವು ಒಂದೇ ಕುಲವಾಗಿದ್ದವು. ಸಾಂಪ್ರದಾಯಿಕವಾಗಿ ದೇವಾಡಿಗರು ಜೈನ ಬಸ್ತಿಗಳಲ್ಲಿ ಹಾಡುಗಾರರಾಗಿದ್ದವರು. ಸ್ವುವರ್ಟ್‌‌ರ ಪ್ರಕಾರ ಇವರು “ಸೇವಕರ ಒಂದು ಸಮುದಾಯವಾಗಿದ್ದು, ಹಿಂದೂಗಳ ದೇವಸ್ಥಾನಗಳಲ್ಲಿ ಇವರು ಗಾಯಕರಾಗಿದ್ದರು”. ಮಯೂರ ವರ್ಮನು ಹಲವಾರು ಹೊಸ ದೇವಸ್ಥಾನಗಳನ್ನು ಕಟ್ಟಿಸಿದಾಗ, ಆಗ ಬ್ರಾಹ್ಮಣರಿಗೆ ಆ ದೇವಸ್ಥಾನಗಳ ಸೇವೆಗಳನ್ನು ಮಾಡಲಾಗಲಿಲ್ಲ. ಆದ್ದರಿಂದ ಮಯೂರರ್ವನು “ಪೂಜೆ ಹಾಗೂ ಆರಾಧನೆಗಳನ್ನು ಬ್ರಾಹ್ಮಣರು ಮಾತ್ರ  ಮಾಡಬೇಕು ಹಾಗೂ ಸ್ಥಾನಿಕರು ಮತ್ತು ದೇವಾಡಿಗರು ಇತರ ಸೇವೆಗಳನ್ನು ಮಾಡಬೇಕು” ಎಂದು ಅಪ್ಪಣೆ ಮಾಡಿದ್ದನಂತೆ (ಥರ್ಸ್ಟನ್, ೧೯೦೯ : ೧೫೩).

ಕರ್ನಾಟಕದಲ್ಲಿ ದೇವಾಡಿಗರು ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿದ್ದಾರೆ. ತುಳು ಮೊಯ್ಲಿಯರು  ತುಳು ಮಾತನಾಡಿದ್ದರೆ.  ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರು ತಾಯಿ ಕುಲಾಧಾರಿತ ಬಳ್ಳಿಗಳನ್ನು ಹೊಂದಿದ್ದಾರೆ – ಕುದಂರಣ್ಣಯ್ಯ, ಸಾಳಿಯಣ್ಣಯ್ಯ, ಬಂಗೇರಣ್ಣಯ್ಯ, ಕಜ್ಜನಣ್ಣಯ್ಯ, ಕರಿಯಣ್ಣಯ್ಯ, ಭೂತಿಯಣ್ಣಯ್ಯ, ಗುಜ್ಜಾರಣ್ಯಯ್ಯ ಹಾಗೂ ಕೊಚಟಬೆಟ್ಟಣ್ಣಯ್ಯ ಎಂಬ ಬಳ್ಳಿಗಳನ್ನು ಇವರಲ್ಲಿ ಗುರುತಿಸಲಾಗಿದೆ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ವಿವಾಹ ವಿಚ್ಛೇದನ ಪಡೆಯುವ ಹಕ್ಕಿದೆ ಹಾಗೂ ಮರುಮದುವೆ ಕೂಡ ಆಗಬಹುದು. ಇವರು ಅಳಿಯ ಸಂತಾನ ಪದ್ಧತಿಯನ್ನು ಅನುಸರಿಸುತ್ತಾರೆ. ಆಸ್ತಿಯು ಮನೆಯ ಎಲ್ಲ ಹೆಣ್ಣು ಮಕ್ಕಳ ನಡುವೆ ಸಮನಾಗಿ ಹಂಚಲಾಗುತ್ತದೆ. ಆದರೆ ವಾರಸುದಾರಿಕೆಯು ಹಿರಿಮಗಳ ಮಗನಿಗೇ ಹೋಗುತ್ತದೆ. ಇತ್ತೀಚೆಗೆ ಇವರಲ್ಲಿ ಕೆಲವರು ತಮ್ಮ ಗಂಡು ಮಕ್ಕಳಿಗೂ ಆಸ್ತಿಯಲ್ಲಿ ಪಾಲು ಕೊಡುತ್ತಿದ್ದಾರೆ. ಶವವನ್ನು ಹೂಳಿ, ಸೂತಕವನ್ನು ಹತ್ತು ದಿನಗಳವರೆಗೆ ಆಚರಿಸಿ, ಹನ್ನೊಂದನೇ ದಿನದಂದು ತಿಥಿಮಾಡುತ್ತಾರೆ.

ಸಾಂಪ್ರದಾಯಿಕವಾಗಿ ದೇವಾಡಿಗರು ದೇವಾಲಯಗಳಲ್ಲಿ ಸಂಗೀತಗಾರರು, ಇತ್ತೀಚೆಗೆ ಗಂಡಸರು ಹಾಗೂ ಹೆಂಗಸರು ಬೀಡಿಸುತ್ತುವ ಕೆಲಸಗಳಲ್ಲಿ ದುಡಿಯುತ್ತಾರೆ. ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಗಳಲ್ಲಿದ್ದಾರೆ. ದುರ್ಗಾಪರಮೇಶ್ವರಿ, ರಾಘವೇಂದ್ರ ಹಾಗೂ ಗಣಪತಿ ಜೊತೆಗೆ ಭೂತಗಳಾದ ಪಂಜುರ್ಲಿ, ಬೊಬ್ಬರಾಯ ಇತ್ಯಾದಿ ಭೂತಗಳನ್ನು ಪೂಜಿಸುತ್ತಾರೆ. ಗ್ರಾಮದ ಹಬ್ಗ ಹಾಗೂ ಭೂತ ಕೋಲಗಳಲ್ಲಿ ಭಾಗವಹಿಸಿ ಸಂಗೀತ ವಾದ್ಯಗಳನ್ನು ನುಡಿಸುತ್ತಾರೆ. ಇವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ್ದಿದ್ದಾರೆ.