ದೇಶಭಂಡಾರಿಗಳನ್ನು ಸರಳವಾಗಿ ಭಂಡಾರಿ ಎಂದು ಕರೆಯುತ್ತಾರೆ. ಇವರು ಜಾತಿಬಾಹಿರರಾದ ವ್ಯಕ್ತಿಗಳು ಸೇರಿ ಆದ ಸಮುದಾಯ. ಇವರು ಸಮಾಜದಲ್ಲಿ ಅನೈತಿಕ ಸಂಬಂಧಗಳಿಂದ ಜಾತಿಬಾಹಿರರಾದವರು ಎಂದು ಎಂಥೋವನ್ (೧೯೨೦) ಹೇಳುತ್ತಾರೆ. ಇವರನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ‘ಮದಕರ್’ ಎಂದು ಕರೆಯುತ್ತಿದ್ದರು. ಏಕೆಂದರೆ ಇವರ ವೃತ್ತಿ ತಾಳೆ ಮರಗಳಿಂದ ಭಟ್ಟಿ ಇಳಿಸುವುದಾಗಿತ್ತು. ಇವರು ಇಂಡೋ ಆರ್ಯನ್ ಭಾಷೆಯಾದ ಕೊಂಕಣಿಯನ್ನು ಮಾತನಾಡುತ್ತಾರೆ. ಇತರರೊಂದಿಗೆ ತುಳು, ಕನ್ನಡದಲ್ಲಿ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ.

ಈ ಸಮುದಾಯದಲ್ಲಿ ಒಳಬಾಂಧವ್ಯ ವಿವಾಹಗಳಿಗೆ ಹಾಗೂ ಸೋದರ ಸಂಬಂಧಿ ವಿವಾಹಗಳಿಗೆ ಅವಕಾಶವಿದೆ. ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಹೆರಿಗೆಯ ಮುನ್ನಿನ  ಕಾರ್ಯ ಮತ್ತು ಹೆರಿಗೆಯ ನಂತರ ಸೂತಕವನ್ನು ಆಚರಿಸುತ್ತಾರೆ. ಮಗು ಹುಟ್ಟಿದ ಹನ್ನೆರಡನೇ ದಿನದಂದು ನಾಮಕರಣವಿರುತ್ತದೆ. ನಂತರ ಮುಂಡನ ಕಾರ್ಯವನ್ನು ಮಾಡಿಸುತ್ತಾರೆ. ಮದುವೆಯ ಕಾರ್ಯಗಳೆಲಲ ವಧುವಿನ ಮನೆಯಲ್ಲಿಯೇ ನಡೆಯುತ್ತವೆ. ಶವವನ್ನು ಸುಡುತ್ತಾರೆ ಹಾಗೂ ತಿಥಿ ಒಂಭತ್ತನೇ ದಿನದಿಂದ ಹದಿನಾಲ್ಕನೇ ದಿನ ಮುಗಿಯುತ್ತದೆ.

ದೇಶಭಂಡಾರಿಗಳು ಹಂಚಿನ ಕಾರ್ಖಾನೆ, ಗೋಡಂಬಿ ಸಂಸ್ಕರಣೆ, ವ್ಯವಸಾಯದಲ್ಲಿ ಕೂಲಿಗಳಾಗಿ ದುಡಿದು ಜೀವನ ನಡೆಸುತ್ತಾರೆ. ಕೆಲವರಿಗೆ ಸ್ವಲ್ಪ ವ್ಯವಸಾಯ ಮಾಡುವ ಭೂಮಿಯಿದೆ ಜೊತೆಗೆ ತೋಟಗಾರಿಕೆ, ಪಶುಸಂಗೋಪನೆ ಮಾಡುತ್ತಾರೆ. ತಿರುಪತಿಯ ವೆಂಕಟೇಶ್ವರ ಹಾಗೂ ಇತರೆ ದೇವರುಗಳನ್ನು ಪೂಜಿಸುತ್ತಾರೆ. ಇವರು ದೀಪಾವಳಿ, ಯುಗಾದಿ ಹಬ್ಬಗಳನ್ನು ಆಚರಿಸುತ್ತಾರೆ. ಇವರು ಸಾರಸ್ವತ ಬ್ರಾಹ್ಮಣ, ಮರಾಠ ಹಾಗೂ ಇತರರೊಂದಿಗೆ ಸಾಮಾಜಿಕ ಸಂಪರ್ಕ ಹೊಂದಿದ್ದಾರೆ. ಇವರು ಆಧುನಿಕ ಸಾಮಾಜಿಕ ಸೌಲಭ್ಯಗಳ ಬಗ್ಗೆ ಹಾಗೂ ಅಭಿವೃದ್ಧಿ ಯೋಜನೆಗಳ. ಉಪಯೋಗವನ್ನು ಪಡೆದುಕೊಳ್ಳಲು ವ್ಯವಸ್ಥಿತವಾದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.