ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯ ಅಂರ್ತಜಲ ಪಾತಳಿ ಕುಸಿಯುತ್ತ ನಡೆದಿದ್ದು, ಇದನ್ನು ತಡೆಯುವುದು ಮತ್ತು ಮೇಲೆತ್ತುವುದು ಇಂದಿನ ಬಹುಮುಖ್ಯ ಅಗತ್ಯವಾಗಿದೆ. ನರ್ಮದೆಯವರೆಗಿದ್ದ ನಮ್ಮ ನಾಡಿನ ಉತ್ತರದ ಸೀಮಾರೇಖೆ, ಕವಿರಾಜಮಾರ್ಗ ಕಾಲಕ್ಕೆ ಗೋದಾವರಿಗೆ ಸರಿಯಿತು; ಇಂದು ಭೀಮೆಯ ತನಕ ಇಳಿದಿದೆ. ಗಡಿನಾಡು ಅಭದ್ರವಾಗುತ್ತಲಿದೆ. ಒಳನಾಡಿನಲ್ಲಿ ಅನ್ಯಭಾಷಾ ದ್ವೀಪಗಳು ತಲೆಯೆತ್ತುತ್ತಲಿವೆ. ಕನ್ನಡ ಮಾತೃಭಾಷಿಕರ ಸಂಖ್ಯೆ ಆಡಳಿತದಲ್ಲಿ ಕಡಿಮೆಯಾಗುತ್ತಲಿದೆ. ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯುವಲ್ಲಿ ನಮ್ಮ ಉತ್ಸಾಹ ಕುಗ್ಗುತ್ತ ಸಾಗಿದೆ. ಹೊರನಾಡಿನಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತ ನಡೆದಿವೆ. ಇವುಗಳಿಗೆ ಕಾರಣಗಳನ್ನು ಕಂಡುಹಿಡಿವುದನ್ನು, ಅದನ್ನು ತಡೆಗಟ್ಟಲು ಮಾರ್ಗೋಪಾಯಗಳನ್ನು ಶೋಧಿಸುವುದು ಇಂದಿನ ಅಗತ್ಯವೆನಿಸಿದೆ.

ಈ ದೌರ್ಬಲ್ಯಕ್ಕೆ ಇರುವ ಅನೇಕ ಕಾರಣಗಳಲ್ಲಿ ಮುಖ್ಯವಾದುದು ನಮ್ಮ ಗತ ಮತ್ತು ವರ್ತಮಾನಗಳ ನಿಜಸ್ವರೂಪವನ್ನು, ಭೌತಿಕ ಮತ್ತು ಸಾಂಸ್ಕೃತಿಕ ಸಂಪತ್ತನ್ನು ನಮ್ಮ ಜನತೆ ತಿಳಿಯದಿರುವುದು. ನಮ್ಮ ಡಾಕ್ಟರ್ ಆಗಲಿ, ಇಂಜಿನಿಯರ್ ಆಗಲಿ – ಏನೇ ಆಗುವ ಮೊದಲು ಕನ್ನಡಿಗರಾಗಬೇಕು. ಅವರು ಅನ್ಯಭೂಖಂಡಗಳ ಬಗ್ಗೆ ತಿಳಿದುಕೊಳ್ಳಲಿ, ಬಾಹ್ಯಾಕಾಶವನ್ನು ತಿಳಿದುಕೊಳ್ಳಲಿ – ಏನೇ ತಿಳಿದುಕೊಳ್ಳುವ ಮೊದಲು ಕರ್ನಾಟಕವನ್ನು ತಿಳಿದುಕೊಳ್ಳಬೇಕು. ಈ ಕರ್ನಾಟಕ ಜ್ಞಾನ (Knowledge) ಅವನಲ್ಲಿ ಕರ್ನಾಟಕ ಪ್ರಜ್ಞೆ (Awareness)ಯನ್ನು ಮೂಡಿಸುತ್ತದೆ. ಈ ಪ್ರಜ್ಞೆ ಮೂಡಿದರೆ ಸಾಕು ಅವನು ಏಕಕಾಲಕ್ಕೆ ಕನ್ನಡಿಗನೂ ಆಗುತ್ತಾನೆ ವಿಶ್ವಮಾನವನೂ ಆಗುತ್ತಾನೆ; ಇಂದಿನ ಬಹುಮುಖ್ಯ ಅಗತ್ಯವೆನಿಸಿದೆ, ಇಂದಿನ ಕನ್ನಡಿಗರನ್ನು ನಿರ್ಮಾಣ ಮಾಡುವುದು. ಈ ಹಿನ್ನೆಲೆಯಲ್ಲಿ ನಮ್ಮ ನಾಡನ್ನು ದಾಖಲಿಸಬೇಕೆಂಬ ಉದ್ದೇಶದಿಂದ “ಕರ್ನಾಟಕ ರಾಜ್ಯಕೋಶ ಮಾಲೆ” ಹೆಸರಿನ ಯೋಜನೆಯನ್ನು ಕನ್ನಡ ವಿಶ್ವವಿದ್ಯಾಲಯ ಕೈಗೆತ್ತಿಕೊಂಡಿದೆ.

ಈ ಯೋಜನೆ ಭೌತಿಕ ಕರ್ನಾಟಕ, ಪ್ರಾಗತಿಕ ಮತ್ತು ಸಾಂಸ್ಕೃತಿಕ ಕರ್ನಾಟಕವೆಂಬ ಮೂರು ಘಟಕಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಘಟಕದಲ್ಲಿ ೫ರಂತೆ ಒಟ್ಟು ೧೫ ಸಂಪುಟಗಳು ಸಿದ್ಧಗೊಳ್ಳಲಿವೆ.

ಮೊದಲ ಹಂತವಾಗಿ ಭೌತಿಕ ಕರ್ನಾಟಕ ಸಮಗ್ರ ಅಧ್ಯಯನವನ್ನೊಳಗೊಂಡ ೫ ಸಂಪುಟಗಳು ಹೀಗಿವೆ : ಭೂಮಿ ಸಂಪುಟ, ಸಸ್ಯ ಸಂಪುಟ, ಪ್ರಾಣಿ-ಪಕ್ಷಿ ಸಂಪುಟ, ಜನಸಮುದಾಯ ಸಂಪುಟ ಮತ್ತು ಭಾಷಾಸಂಪುಟ, ಇವುಗಳಲ್ಲಿ “ಜನಸಮುದಾಯ ಸಂಪುಟ” ಈಗ ಪ್ರಕಟವಾಗುತ್ತಲಿದೆ.

ಕರಾವಳಿ, ಮಲೆನಾಡು, ಬಯಲುನಾಡು – ಹೀಗೆ ಕರ್ನಾಟಕದ ಭೂಪರಿಸರ ವೈವಿಧ್ಯಮಯವಾಗಿರುವುದರಿಂದ, ಇಲ್ಲಿಯ ಜನಸಮುದಾಯ ಸಹಜವಾಗಿಯೇ ವಿಭಿನ್ನ ಘಟಕಗಳಾಗಿ ಒಡೆದು ನಿಂತಿದೆ. ಮುಂದೆ ದೈವ ಧರ್ಮ-ರಾಜ್ಯಾಡಳಿತಗಳ ಹೆಸರಿನಲ್ಲಿ ಇವು ಧರಿಸಿದ ಆಕಾರಗಳೂ ಅನೇಕ. ಕರ್ನಾಟಕವು ಉತ್ತರ – ದಕ್ಷಿಣ ಭಾರತಗಳ ಹೊಸ್ತಿಲಲ್ಲಿರುವುದರಿಂದ ಮತ್ತು ದಕ್ಷಿಣದಲ್ಲಿ ಅನ್ಯಪ್ರಾಂತಗಳಿಂದ ಆವೃತವಾಗಿರುವುದರಿಂದ ಕಾಲಕಾಲಕ್ಕೆ ಬೇರೆ ಬೇರೆ ಜನಸಮುದಾಯಗಳೂ ಈ ನಾಡಿನಲ್ಲಿ ತೂರಿಬಂದವು. ಅವುಗಳ ಸಂಗಮದಿಂದಾಗಿ ಮೂಲದ ಸಮುದಾಯಗಳು ಮಿಶ್ರರೂಪಕ್ಕೆ ತಿರುಗಿದವು. ಹೀಗಾಗಿ ಕರ್ನಾಟಕ ಸಮುದಾಯ ಸಂಖ್ಯಾದೃಷ್ಟಿಯಿಂದ ಅನೇಕ ಸ್ವರೂಪ ದೃಷ್ಟಿಯಿಂದ ವಿಶಿಷ್ಟವೆನಿಸಿವೆ.

ಇತ್ತೀಚೆ ಸ್ಥಿರಸಮಾಜವು ಚರಸಮಾಜವಾಗುತ್ತಲಿರುವುದರಿಂದ, ಈ ಸಮುದಾಯಗಳ ಮೂಲಸ್ವರೂಪ ಮೊದಲಿನಕ್ಕಿಂತ ಹೆಚ್ಚು ವೇಗದಿಂದ ಬದಲಾಗುತ್ತ ನಡೆದಿದೆ. ಮೂಲಸ್ವರೂಪ ಸಂಪೂರ್ಣ ಮರೆಯಾಗುವ  ಮೊದಲು ಅವುಗಳನ್ನು ದಾಖಲಿಸುವುದು ಇಂದು ತೀರ ಅವಶ್ಯವೆನಿಸಿದೆ. ಆಂಗ್ಲರ ಆಗಮನದ ಬಳಿಕ ಇಂಥ ಸಮುದಾಯಗಳ ದಾಖಲಾತಿ ಪ್ರಯತ್ನಗಳು ಆಗಾಗ ಕರ್ನಾಟಕದಲ್ಲಿ ಜರುಗಿದ್ದರೂ, ಈ ಕಾರ್ಯ ಪೂರ್ಣಪ್ರಮಾಣದಲ್ಲಿ ನೆರವೇರಲಿಲ್ಲ. ಇಂಥ ಕೊರತೆಯನ್ನು ತುಂಬಿಕೊಡುವ ಉದ್ದೇಶದಿಂದ ಸಿದ್ಧಗೊಂಡಿದೆ, ಜನಸಮುದಾಯ ಸಂಪುಟ.

ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಅಧ್ಯಾಪಕರಾದ ಶ್ರೀ ಹೆಚ್.ಡಿ.ಪ್ರಶಾಂತ್ ಅವರು ಕಷ್ಟಪಟ್ಟು ಪ್ರಕಟಿತ ಆಕರಗಳನ್ನು, ಕ್ಷೇತ್ರಕಾರ್ಯದ ಫಲಿತಗಳನ್ನು ಅಲವಂಬಿಸಿ ಈ ಕೃತಿರಚನೆಯನ್ನು ಪೂರೈಸಿದ್ದಾರೆ. ನಮ್ಮ  ಸುದೈವಕ್ಕೆ ಡಾ.ಜೋಗನ್ ಶಂಕರ್, ಪ್ರೊ.ಮಹೇಶ ತಿಪ್ಪಶೆಟ್ಟಿ, ಶ್ರೀ ಸುರೇಶ ಪಾಟೀಲ ಅವರಂಥ ಶ್ರಮಸಂಸ್ಕೃತಿಯ ವಿದ್ವಾಂಸರ ಸಹಾಯ ಲಭ್ಯವಾಗಿದೆ. ಹೀಗಾಗಿ ಪ್ರಕಟಿತ ಆಕರ ಸಾಮಗ್ರಿ, ಕ್ಷೇತ್ರಕಾರ್ಯ, ವಿದ್ವಾಂಸರ ನೆರವು ಈ ಮೂರು ನೆಲೆಗಳಿಂದ ಈ ಕಾರ್ಯವನ್ನು ಪೂರೈಸಲಾಗಿದೆ. ಇವರೆಲ್ಲರಿಗೆ ನಮ್ಮ ಅಭಿನಂದನೆಗಳು ಸಲ್ಲುತ್ತವೆ.

ಜನಸಮುದಾಯದ ದಾಖಲೆಯನ್ನುವುದು ಬೆರಳು ಸಂದುಗಳಲ್ಲಿ ಸೋರಿ ಹೋಗಿ, ಉಳಿದಿರುವ ನೀರನ್ನು ಬೊಗಸೆಯಲ್ಲಿ ಹಿಡಿದಂತೆ. ಮೇಲಾಗಿ ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾದ, ಬದಲಾಗುತ್ತಿರುವ ಸಮುದಾಯಗಳ ನಿರ್ದಿಷ್ಟ ದಾಖಲೆ ಅಸಾಧ್ಯವೇ ಸರಿ. ಹೀಗಿದ್ದೂ ಸಮುದಾಯಗಳ ಬಗೆಗಿನ ಗೌರವದಿಂದ ಈ ಕೃತಿಯನ್ನು ರೂಪಿಸಲಾಗಿದೆ. ಇಂಥ ಕೋಶಗಳಿಗೆ ಇರುವುದು ಅರ್ಧವಿರಾಮವೇ ಹೊರತು, ಪೂರ್ಣ ವಿರಾಮವಲ್ಲ – ಎಂಬುದನ್ನು ಅರ್ಥಮಾಡಿಕೊಂಡು, ಈ ಗ್ರಂಥವನ್ನು ನೋಡಬೇಕೆಂದು ಬಿನ್ನವಿಸಿಕೊಳ್ಳುತ್ತೇವೆ.

ಎಂ.ಎಂ. ಕಲಬುರ್ಗಿ
ಕುಲಪತಿಗಳು