ದೊಂಬಿದಾಸರನ್ನು, ಕಾಶಿದಾಸ, ಬಾಳಶೆಟ್ಟಿ ಮತ್ತು ಹೆಣ್ಣು ವೇಷದವರು ಎಂದೂ ಕರೆಯುತ್ತಾರೆ. ಇವರಲ್ಲಿ ಎರಡು ಉಪಜಾತಿಗಳಿವೆ. ಗೊಲ್ಲದಾಸ ಮತ್ತು ಶೆಟ್ಟಿದಾಸ. ಇವರು ತುಂಬಾ ಹಿಂದೆ ಆಂಧ್ರಪ್ರದೇಶದಿಂದ ವಲಸೆ ಬಂದಿರುವರೆಂದು ಹೇಳಲಾಗುತ್ತದೆ. ಮೂಲತಃ ಇವರನ್ನು ‘ದಾಸರು’ ಎಂದು ಹೇಳಲಾಗುತ್ತಿತ್ತು. ದೊಂಬಿ ಪದವು ಗತಕಾಲದ ಒಂದು ಘಟನೆಯ ನಂತರ ಬಳಕೆಗೆ ಬಂದಿದೆ. ಇವರು ಹರಿಕಥೆ ಕಥನಮಾಡುವಾಗ ಪ್ರೇಕ್ಷಕರಲ್ಲಿ ಒಂದು ದೊಂಬಿ ನಡೆಯಿತು, ಇದರಿಂದ ಇವರಿಗೆ ಈ ಹೆಸರು ಬಂತು ಎಂದು ಹೇಳಲಾಗುತ್ತದೆ. ಇನ್ನೊಂದು ವಿವರಣೆ ಎಂದರೆ ಇವರು ಪುರಾಣಸಂಬಂಧಿ ಜ್ಞಾನವನ್ನು ದುಂಬಿಗಳಷ್ಟು ಮಧುರವಾಗಿ ಹಾಡುವರು. ದುಂಬಿ ನಂತರದಲ್ಲಿ ದೊಂಬಿಯಾಗಿ ಬದಲಾವಣೆ ಹೊಂದಿರಬಹುದು. ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ.

ಗೊಲ್ಲ ಮತ್ತು ಶೆಟ್ಟಿ ಎಂಬ ಎರಡು ಉಪಜಾತಿಗಳು ಮುಂದೆ ಹಲವಾರು ಬೆಡಗುಗಳಾಗಿ ವಿಭಜನೆಯಾಗಿದೆ.  ಸೋದರ ಸಂಬಂಧಿ ವಿವಾಹಗಳಿಗೆ ಅನುಮತಿಯಿದೆ. ಏಕಪತಿತ್ವ/ಏಕಪತ್ವಿತ್ವ ನಿಯಮವನ್ನು ಆಚರಿಸುವರು. ಸಾಂಪ್ರದಾಯಿಕವಾಗಿ ವಧುದಕ್ಷಿಣೆಯನ್ನು ನೀಡಲಾಗುತ್ತದೆ. ವಿವಾಹ ವಿಚ್ಛೇದನಕ್ಕೆ ಅನುಮತಿಯಿದೆ. ವಿಧವೆ, ವಿಧುರ ಮತ್ತು ವಿಚ್ಛೇದಿತರ ವಿವಾಹಕ್ಕೆ ಅವಕಾಶವಿದೆ. ತಂದೆಯ ನಂತರ ಹಿರಿಯ ಮಗನು ಉತ್ತರಾಧಿಕಾರಿಯಾಗುವನು. ದೊಂಬಿಗಳಲ್ಲಿ ಕೆಲವು ಮುಖ್ಯ ವಿವಾಹ ಆಚರಣೆಗಳೆಂದರೆ ವಿವಾಹ ನಿಶ್ಚಯ, ಬಳೆ ತೊಡಿಸುವುದು, ತಾಳಿಕಟ್ಟುವುದು ಮುಂತಾದವುಗಳು. ಶವವನ್ನು ಸುಟ್ಟು, ಸೂತಕವನ್ನು ಹತ್ತು ದಿನಗಳವರೆಗೆ ಆಚರಿಸಲಾಗುವುದು.

ಈ ಸಮುದಾಯದ ಕೆಲವೇ ಜನರಿಗೆ ಕೃಷಿ ಭೂಮಿ ಇರುತ್ತದೆ. ಇವರಲ್ಲಿ ಹೆಚ್ಚಿನ ಜನರು, ಕೂಲಿ ಕೆಲಸವ, ಸಣ್ಣ ಪುಟ್ಟ ವ್ಯಾಪಾರ ಇತರೆ ಉದ್ಯೋಗವನ್ನು ಅವಲಂಬಿಸಿರುವರು. ಇದನ್ನು ಹಾಡು ಮತ್ತು ಜಾನಪದ ಕಥೆಗಳನ್ನು ಹೇಳುವುದರ ಜೊತೆಗೆ ಮುಂದುವರೆಸುತ್ತಿದ್ದರು. ಈಗ ಇದು ನಿಧಾನವಾಗಿ ಮರೆಯಾಗುತ್ತಿದೆ. ದೊಂಬಿದಾಸರು ಸಾಮೂಹಿಕವಾಗಿ ತಿರುಪತಿಯ ವೆಂಕಟರಮಣ ದೇವರನ್ನು ಆರಾಧಿಸಿ, ಅವನ ಹೆಸರಿನಲ್ಲಿ ಭಕ್ತಿಪರಯಾಚನೆಯನ್ನು ಮಾಡುತ್ತಾರೆ. ಜಾನಪದ ಕಥೆಗಾರರು ಹಾಗೂ ನಾಟಕಕಾರರು ಈ ಸಮುದಾಯದಲ್ಲಿ ಇರುವರು. ಗಂಡು ಮಗುವಿನ ಶಿಕ್ಷಣದ ಬಗ್ಗೆ ಇವರ ಮನೋವೃತ್ತಿ ಉತ್ತಮವಾಗಿದೆ. ಆದರೆ ಅದು ಹೆಣ್ಣು ಮಕ್ಕಳಿಗೆ ಇಲ್ಲವಾಗಿದೆ. ಇವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯ ಸುಧಾರಣೆಯಾಗಬೇಕಾದ ಅವಶ್ಯಕತೆ ಇದೆ.

ನೋಡಿ:

ಪರಮಶಿವಯ್ಯ, ಜೀ.ಶಂ, ೧೯೮೦, ದೊಂಬಿದಾಸರು, ಬುಕ್ ಹೌಸ್ ಪಬ್ಲಿಕೇಷನ್, ಬೆಂಗಳೂರು.

Tribal Culture Reasearch and Training Institute, ‘Dommara-Nomadic Tribe’ : Tribal Welfare Department, Govt.of Andra Pradesh, Hyderabad