ಟುವ ಎಂದರೆ ನಾಟ್ಯ ಮಾಡುವವರು. ಪಾರಂಪರಿಕ ನಾಟ್ಯ ಮಾಡುವವರನ್ನು ನಟುವರು ಎಂದು ಗುರುತಿಸಲಾಗಿದೆ. ನಟ ಮತ್ತು ನಟಿ ಪದಗಳಿಗೆ ವ್ಯಾಪಕ ಅರ್ಥಗಳನ್ನು ಗುರುತಿಸಲಾಗಿದೆ. ಥರ್ಸ್ಟನ್ ಪ್ರಕಾರ ನಾಟ್ಯ ಮಾಡುವವರೇ ನಟುವರು. ನಟುವರು ಪ್ರಾಯಶಃ ಉತ್ತರ ಭಾರತದ ‘ನಟ್ಸ್’ ರನ್ನು ಹೋಲುವಂತಹವರು. ರೈಸ್ ಅಭಿಪ್ರಾಯಪಡುವಂತೆ ನಟುವರು ಅಪರೂಪಕ್ಕೆ ಕಾಣಸಿಗುವ ಗುಂಪು ಅಥವಾ ಸಮುದಾಯ. ನಟುವರನ್ನು ಕುರಿತಂತೆ ಅನೇಕ ಪ್ರಸ್ತಾಪಗಳು ನಮಗೆ ಲಭ್ಯವಾಗುತ್ತದೆ. ನಟುವರ ಮೂಲ ಭಾಷೆ ತೆಲುಗು, ಆದರೆ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಾರೆ. ಇವರು ಆಂಧ್ರದ ಮೂಲದವರೆನ್ನುವುದಕ್ಕೆ ಇವರಾಡುವ ಭಾಷೆಯೂ ಸಹ ಪುಷ್ಟಿಯನ್ನೊದಗಿಸುತ್ತದೆ. ಎಂ.ಎ.ಶೆರಿಂಗ್ ಸೂಚಿಸುವಂತೆ ಉತ್ತರ ಭಾರತದಲ್ಲಿ ನಟುವರು ಆರ್ಯರ ಆಗಮನದ ನಂತರ ದಕ್ಷಿಣ ಭಾರತಕ್ಕೆ ವಲಸೆ ಬಂದರು. ದಕ್ಷಿಣಕ್ಕೆ ಬಂದ ನಂತರ ಇಲ್ಲಿನ ದ್ರಾವಿಡ ಭಾಷೆಗಳಲ್ಲೊಂದಾದ ತೆಲುಗನ್ನು ತಮ್ಮ ಭಾಷೆಯನ್ನಾಗಿ ಅಳವಡಿಸಿಕೊಂಡರು ಎಂದು ಹೇಳುತ್ತಾರೆ.

ನಟುವರಲ್ಲಿ ಎರಡು ರೀತಿಯಿವೆ. ಅವೆಂದರೆ ಪುಕ್ಕತರು ಮತ್ತು ತಿರುನಾಮದವರು. ಪುಕ್ಕತರು ನೃತ್ಯಕ್ಕೆ ಹೆಸರುವಾಸಿಯಾದರೆ, ತಿರುನಾಮದವರು ಸಂಗೀತಕ್ಕೆ ಪ್ರಸಿದ್ಧರು. ಪುಕ್ಕತರು ಸಸ್ಯಾಹಾರಿಗಳಾದರೆ, ತಿರುನಾಮದವರು ಮಾಂಸಾಹಾರಿಗಳು. ಹೀಗೆ ತಿರುನಾಮದವರು ಮತ್ತು ಪುಕ್ಕತರು ಅನೇಕ ವಿಷಯಗಳಲ್ಲಿ ವಿರುದ್ಧ ದಿಕ್ಕುಗಳಲ್ಲಿ ಸಾಗುತ್ತಾರೆ. ಪುಕ್ಕತ ಗಂಡಸರು ನಾಟ್ಯದಲ್ಲಿ ಭಾಗಿಗಳಾಗುತ್ತಿರಲಿಲ್ಲ. ತಿರುನಾಮದವರು ಗಂಡಸರು  ಮತ್ತು ಹೆಂಗಸರು ಒಟ್ಟಾಗಿಯೇ ಸಂಗೀತ ಪ್ರದರ್ಶನದಲ್ಲಿ ಭಾಗಿಗಳಾಗುತ್ತಿದ್ದರು.

ನಟುವರಲ್ಲಿ ಎರಡು ಪ್ರಮುಖ ಕುಲಗಳಿವೆ. ‘ಪಸುಪಲೇಟಿ’ ಕುಲ, ‘ತಿರುನಾಮದವರ’ ಕುಲ. ಈ ಎರಡು ಕುಲಗಳಲ್ಲಿ ಒಳಬಾಂಧವ್ಯ ವಿವಾಹ ಪದ್ಧತಿ ಜಾರಿಯಲ್ಲಿದೆ. ಇವರಲ್ಲಿ ಸೋದರ ಸಂಬಂಧಿ ಮದುವೆಗಳು ನಡೆಯುವುದು ತಿಳಿದುಬರುತ್ತದೆ. ಇಂದಿಗೂ ಸಮಾನ ಜಾತಿಗಳೊಂದಿಗೆ ವಿವಾಹಗಳು ನಡೆಯುತ್ತಿದ್ದರೂ, ಒಳಬಾಂಧವ್ಯ ವಿವಾಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇತ್ತೀಚೆಗೆ ಇವರು ತಮ್ಮ ಪಾರಂಪರಿಕ ವೃತ್ತಿಯನ್ನು ಬಿಟ್ಟು ವ್ಯವಸಾಯ, ಪ್ರಾಣಿಸಾಕಾಣಿಕೆ, ರೇಷ್ಮೆ ಕೃಷಿ ಮತ್ತು ವ್ಯಾಪಾರ ಮಾಡುತ್ತಿದ್ದಾರೆ. ಆಧುನಿಕ ಸಾಮಾಜಿಕ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಅಭಿವೃದ್ಧಿ ಸಾಧಿಸಲು ಈ ಸಮುದಾಯದ ಜನರು ಪ್ರಯತ್ನಿಸಿದ್ದಾರೆ.

ನೋಡಿ:

ಮುನಿಶಾಮಪ್ಪ ಹೊಸೂರು., ೧೯೯೩. ನಟವರ ಸಂಸ್ಕೃತಿ. ಕನ್ನಡ ಸಾಹಿತ್ಯ ಅಕಾಡೆಮಿ ಬೆಂಗಳೂರು.

Sherring, M.A., ‘Native Races of India’, Hindu Tribes & Castes : Vol.3,  Cosmo Publication, Delhi.