ಲ್ಕೆಯವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ, ಹೆಚ್ಚು ಕಂಡುಬರುತ್ತಾರೆ. ಇವರು ಭೂತ ದೈವಗಳ ಕೋಲ ಕಟ್ಟಿ ಕುಣಿಯವುದರಲ್ಲಿ ಹಾಗೂ ನಟನೆಯಲ್ಲಿ ನಿಪುಣರಾದ ಕಾರಣ ಇವರನ್ನು ನಾಟ್ಯದವರೆಂದೂ, ಕಡೆಗೆ ತುಳುವಿನಲ್ಲಿ, ನಾಟ್ಯಕ್ಕೆ ನಲಿಕೆ ಎಂಬುದಾಗಿ ಹೇಳುವುದರಿಂದಾಗಿ ‘ನಲಿಕೆಯವರು’ ಎಂಬುದಾಗಿ ಕರೆಯುತ್ತಾರೆ. ಇವರು ಈ ರೀತಿ ಕೋಲ ಕಟ್ಟಿ ಕುಣಿಯುವುದು ಕೇವಲ ವರ್ಷದ ಆರು ತಿಂಗಳು ಮಾತ್ರ. ಭೂತಗಳಿಗೆ ಉಂಬಳಿಯಾಗಿ ಕೊಟ್ಟ ಸಲ್ಪಸ್ವಲ್ಪ ಭೂಮಿಯಲ್ಲೇ ಕೃಷಿ ಮಾಡುವರು. ಉಪವೃತ್ತಿಯಾಗಿ ಅಡಿಕೆ ಮರದ ಹಾಳೆಯಿಂದ ಹಳ್ಳಿಯ ರೈತರು ಹೆಚ್ಚಾಗಿ ತಲೆಗೆ ಇಟ್ಟುಕೊಳ್ಳುವ ‘ಮುಟ್ಟಾಳೆ’ ಎಂಬ ತಲೆಕವಚವನ್ನು ತಯಾರಿಸುವುದರಲ್ಲಿ ನಿರತರಾಗುವರು. ಇವರು ಹೆಚ್ಚಾಗಿ ಅವಿದ್ಯಾವಂತರು.

ಇವರು ತುಳು ಪಾಡ್ದನಗಳನ್ನು ಕಂಠಪಾಠ ಮಾಡಿಕೊಂಡು ಹಾಡುವುದರಲ್ಲಿ ಪ್ರವೀಣರು. ಇದೊಂದು ಇವರ ಜೀವನದ ಮುಖ್ಯ ಕಲೆಯಾಗಿದೆ. ಇವರ ಕುಲದೈವ ಪಂಜುರ್ಲಿ. ಇವರ ಗಂಡಸರು ಬೇರೆ ಬೇರೆ ಊರುಗಳಲ್ಲಿ ಸವರ್ಣಿಯರು ನಂಬಿಕೊಂಡು ಬರುವ ದೈವಗಳಿಗೆ ನೇಮ, ಕೋಲಕಟ್ಟುತ್ತಾರೆ. ಹಿಂದಿನಿಂದಲೂ ಇವರು ಹೆಚ್ಚಾಗಿ ಮಳೆಗಾಲದಲ್ಲಿ ತಮ್ಮ ಮಕ್ಕಳಿಗೆ ಒಂದಲ್ಲ ಒಂದು ತರದ ವೇಷಹಾಕಿ (ತುಳುವಿನಲ್ಲಿ ಹೇಳುವ ಮುಖ್ಯವಾಗಿ ‘ಆಟಿಕಡಂಜ’, ‘ಸೋಣದ ಮದಿಯಲ್’, ‘ಕನ್ಯಪ್ಪು,’, ‘ಸಿರಿಕನ್ಯೆ’ ಮುಂತಾದ) ಮನೆಮನೆಗೆ ಹೋಗಿ ತುಳು ಪಾಡ್ದನ ಹಾಡುತ್ತಾ ‘ತೆಂಬರೆ’ ಎಂಬ ಸಣ್ಣ ಡೋಲನ್ನು ಬಾರಿಸಿ ತಮ್ಮ ಮಕ್ಕಳನ್ನು ಕುಣಿಸಿ ಹಣ ಸಂಪಾದಿಸುವರು. ಇವರ ಗಂಡಸರಿಗೆ ಸೊಂಟದಿಂದ ಮೇಲೆ ಉಡುಪು ಧರಿಸುವ ಅಭ್ಯಾಸವಿಲ್ಲ. ಗಂಡಸರು ಭೂತಗಳಿಗೆ ಕೋಲಕಟ್ಟುವ ಸಮಯ ಅವರ ಜತೆ ಪಾಡ್ದನ ಹಾಡುವುದು ಮತ್ತಿನ್ನಿತರ ಕೆಲಸಗಳಲ್ಲಿ ಹೆಂಗಸರು ನೆರವಾಗುತ್ತಾರೆ.

ಇವರ ಆಡುವ ಭಾಷೆ ತುಳು. ಆದರೆ ಕಾಸರಗೋಡು, ಪುತ್ತೂರು, ಸುಳ್ಯ, ಕಡೆ ಮಲೆಯಾಳ ಮಾತನಾಡುವರು. ಕುಂದಾಪುರ ಕಡೆಯಲ್ಲಿ ‘ಪಾನೆಯವರು’ ಎಂಬುದಾಗಿ ಇವರನ್ನು ಕರೆಯುವರು. ಮೂಡುಬಿದ್ರೆ ಇತ್ಯಾದಿ ಕಡೆ ಪಾಣೆಯವರು ‘ಪಾಣೇರ್’ ಎಂಬುದಾಗಿ ಕರೆಯುವರು. ನಲ್ಕೆಯವರಲ್ಲಿ ಮದುವೆ ದಿನವನ್ನು ಹೆಣ್ಣು ಮತ್ತು ಗಂಡಿನ ಕಡೆಯ ಎರಡೂ ಗ್ರಾಮದವರು ಸೇರಿ ನಿಶ್ಚಯ ಮಾಡುವರು. ಸಮುದಾಯದ ಯಜಮಾನಿಗೆ ಗುರಿಕಾರನೆಂದು ಕರೆಯುವರು. ಇವರ ಮದುವೆ ಹಿಂದೆ ಹೆಚ್ಚಾಗಿ ರಾತ್ರಿ ಸಮಯ ಜರುಗುತ್ತಿತ್ತು. ಆದರೆ ಈ ಪದ್ಧತಿ ಇತ್ತೀಚ್ಚೆಗೆ ಬದಲಾಗಿದೆ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ನಲ್ಕೆಯವರಲ್ಲಿ ಬಳ್ಳಿಗಳಿವೆ – ಸಾಲಿಯನ್ನಾಯ, ಕರುಂಬೆರನ್ನಾಯ, ಅರಸನ್ನಾಯ, ಕಿರೋಡಿಯನ್ನಾಯ ಮುಂತಾದವು. ಒಂದೇ ಬಳ್ಳಿಗಳೊಳಗೆ ಮದುವೆ ಸಂಬಂಧ ನಡೆಯುವುದಿಲ್ಲ. ಇವರಲ್ಲಿ ವಿಧವೆ, ವಿಧುರ  ಹಾಗೂ ವಿಚ್ಛೇದಿತರು ಮದುವೆಯಾಗಬಹುದು. ನಲ್ಕೆಯವರು ಮಗು ಹುಟ್ಟಿದರೆ ಹೆಸರು ಇಡುವ ವಿಶೇಷ ದಿನ ಆಚರಿಸುವ ಪದ್ಧತಿ ಇದೆ. ನಲ್ಕೆಯವರಲ್ಲಿ ಶವವನ್ನು ಹೂಳುವ/ಸುಡುವ ಎರಡೂ ಕ್ರಮಗಳನ್ನು ಅನುಕೂಲಕ್ಕೆ ತಕ್ಕಂತೆ ಮಾಡುವರು. ಹೆಣವನ್ನು ಹೂಳಿದರೆ ಹದಿಮೂರನೇ ದಿನ ಉತ್ತರ ಕ್ರಿಯೆಯನ್ನು ಮಾಡುವರು. ಇವರಲ್ಲಿ  ಹೆಣವನ್ನು ಸುಟ್ಟರೆ ಐದನೇ ದಿನ ಹೆಣ ಸುಟ್ಟ ಬೂದಿಯನ್ನು  ರಾಶಿ ಮಾಡಿ, ನದಿಯಲ್ಲಿ ಬಿಡುವರು. ಇವರು ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಇವರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಗಳು ಸುಧಾರಣೆಯಾಗಬೇಕಾದ ಅಗತ್ಯವಿದೆ.

ನೋಡಿ:

ಕಮಲಾಕ್ಷ, ಪಿ., ೧೯೯೪. ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ಮತ್ತು ಗಿರಿಜನರ ಸಾಮಾಜಿಕ ಇತಿಹಾಸ,  ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಐಗಳ್, ೧೯೯೨. ದಕ್ಷಿಣ ಕನ್ನಡ ಜಿಲ್ಲಾ ಪ್ರಾಚೀನ ಇತಿಹಾಸ.  ಕಿಲ್ಲೆ ‌ಪ್ರಕಾಶನ, ಮಂಗಳೂರು.