ನಾಯಿಂದರು ಕ್ಷೌರಿಕ ಸಮುದಾಯಕ್ಕೆ ಸೇರಿದವರಾಗಿದು ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಕಂಡುಬರುತ್ತಾರೆ. ಭಂಡಾರಿ, ಕೆಲಸಿಗ, ಮಹಾಕ್, ಪರಿಯಲಿಗ, ಕ್ಷೌರಿಕ, ಭಜಂತ್ರಿ, ಕ್ಷತ್ರಿಯ, ನಾವಟಿಗ, ಹಡಪದ, ಕೋಡಿಯ, ಅಂಬಟ್ಟನ್, ಮಂಗಳಿ ಮತ್ತು ನಾಪಿತರೆಂದು ಹಲವು ಹೆಸರುಗಳಿಂದ ಪರಿಚಿತರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಾಯಿಂದ ಸಮಾಜ ಹನ್ನೆರಡನೆ ಶತಮಾನದ ಹಡಪದ ಅಪ್ಪಣನ ವಂಶದವರೆಂದು ಗುರುತಿಸಿಕೊಳ್ಳುತ್ತಾರೆ. ಮಾತನಾಡುವ ಭಾಷೆಯ ಆಧಾರದ ಮೇಲೆ ಇವರು ಅನೇಕ ಉಪಜಾತಿಗಳನ್ನು ಹೊಂದಿದ್ದಾರೆ (ಥರ್ಸ್ಟನ್ ೧೯೦೯). ಇವರು ದೇವ ದೇವತೆಗಳ ಕ್ಷೌರಿಕನಾದ ‘ಸವಿತ ಬ್ರಹ್ಮಶ್ರೀ’ಯ ಮೂಲದವರೆಂದು ಹೇಳಿಕೊಳ್ಳುತ್ತಾರೆ. ಇವರಲ್ಲಿ –  ತೋಲಾರ, ಗುಜ್ಜಾರನ್ನತೆ, ಕುಂದಾರನ, ಸಲಿವನ ಇತ್ಯಾದಿ ಹೊರಬಾಂಧವ್ಯ ವಿವಾಹ ಪದ್ಧತಿಯ ಬಳ್ಳಿಗಳು ಇವೆ.

ನಾಯಿಂದರಲ್ಲಿ ನಂಜುಂಡಯ್ಯ ಮತ್ತು ಐಯ್ಯರ್ (೧೯೩೧) ಮೊರಸು, ಉಪ್ಪಿನ ಮತ್ತು ಶೀಲವಂತರೆಂಬ ಮೂರು ಉಪಪಂಗಡಗಳನ್ನು ಗುರುತಿಸಿದ್ದಾರೆ. ಜೊತೆಗೆ, ಮುವತ್ತಾರು ಹೊರಬಾಂಧವ್ಯದ ಬೆಡಗುಗಳನ್ನು ಕೂಡ ಗುರುತಿಸಿದ್ದಾರೆ – ಚಿಟ್ಲು, ಗರ್ರ‍ಮ, ಜಂಬು, ಕನ್ನಾಗುಲ, ಕರು, ಮಲ್ಲೇಳ ಮುತ್ಯಾಲ, ನವಿಲು, ಪಾಲು, ಸಾಮಾನ್ವಿ, ಉತ್ತರುನಾಸ, ಪುಸ್ತಾ-ಅಪ, ಪ್ರಹ್ರಾನ, ವಸ್ತುಕಾ, ಸಸ್ವರ, ರುಚಿದತ್ತಾ, ಲೋಖೇತು, ಇಂದ್ರಸೇನ, ಭದ್ರ, ಕೋಲಾಪಲ್ಹಾಸ ವಾಸ್ತುಪತಿ, ಚಿತ್ರಕಮಾನು, ಗಿರಿಧರ್ಮ, ದೇವಭದ್ರ, ರಾಜಧರ್ಮ, ಕೌಸಲಿ, ಸಹಸ್ರಭೀರು, ವಸುಧಮರ, ವ್ಯಂಜಕ, ಭುಕ್ತಾವ್ಯಯ, ಶನಿಭಾಸ, ದೇಶಕಮಾಸು, ವಜ್ರಚೇತ, ಪ್ರೂಭುತನಾಮ, ಯಜ್ಯಮಂತೆ. ಒಳಬಾಂಧವ್ಯ ವಿವಾಹವು ಉಪಪಂಗಡ ಮಟ್ಟದಲ್ಲಿ ಹಾಗೂ ಹೊರಬಾಂಧವ್ಯ ವಿವಾಹವು ಬೆಡಗುಗಳ ಮಟ್ಟದಲ್ಲೂ ರೂಢಿಯಲ್ಲಿದೆ. ವಿಧವೆ, ವಿದುರ ಹಾಗೂ ವಿಚ್ಛೇದಿತರಿಗೆ ವಿವಾಹಕ್ಕೆ ಅವಕಾಶವಿದೆ. ಉತ್ತರಾಧಿಕಾರವು ತಂದೆಯ ನಂತರ ಕುಟುಂಬದ ಹಿರಿಯ ಮಗನಿಗೆ ದೊರೆಯುತ್ತದೆ. ವಿಶೇಷವೆಂದರೆ ದಕ್ಷಿಣ ಕರ್ನಾಟಕದ ನಾಯಿಂದರಿಗೂ ಉತ್ತರ ಕರ್ನಾಟಕದ ಹಡಪದರಿಗೆ ಕೆಲವು ಸಾಮಾಜಿಕ ವ್ಯತ್ಯಾಸವಿದೆ.

ನಾಯಿಂದರ ಸಾಂಪ್ರದಾಯಿಕ ವೃತ್ತಿ ಕ್ಷೌರ ಮಾಡುವುದರ ಜೊತೆಗೆ ಇತರೆ ವೃತ್ತಿಗಳಲ್ಲಿಯೂ ತೋಡಗಿದ್ದಾರೆ. ಇವರು ‘ಸವಿತ ಸಮಾಜ’ ಎಂಬ ಸಮುದಾಯ ಸಂಘಟನೆಯನ್ನು ಹೊಂದಿದ್ದಾರೆ. ಸಾಂಪ್ರದಾಯಿಕವಾಗಿ ಧಾರ್ಮಿಕ ಸಮಾರಂಭಗಳಲ್ಲಿ ಸಂಗೀತ ವಾದ್ಯಗಳನ್ನು ನುಡಿಸಿ, ಪಂಜನ್ನು ಹಿಡಿಯುತ್ತಾರೆ. ಬಾಲಕರ ವಿದ್ಯಾಭ್ಯಾಸಕ್ಕೆ ಪ್ರಾಶಸ್ತ್ಯ, ನೀಡಲಾಗುತ್ತದೆ. ಇವರ ಆರ್ಥಿಕ, ಶೈಕ್ಷಣಿಕ, ರಾಜಕೀಯ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.