ಟ್ಟೇಗಾರರು ಸೋಮವಂಶೀಯ, ಸಹಸ್ರಾರ್ಜುನ ಕ್ಷತ್ರಿಯ, ಸಾವಜಿ, ಮುಂತಾದ ಹೆಸರುಗಳಿಂದ ಪರಿಚಿತರಾಗಿದ್ದಾರೆ. ಇವರು ಸುಮಾರು ಇನ್ನೂರು ವರ್ಷಗಳ ಹಿಂದೆ ಕೆಲಸವನ್ನು ಹುಡುಕಿಕೊಂಡು ಮಹಾರಾಷ್ಟ್ರದಿಂದ ಬಂದವರೆಂದು ಹೇಳಲಾಗುತ್ತದೆ. ಇವರು ಹೆಚ್ಚಾಗಿ ಬೆಂಗಳೂರು, ಹಾಸನ, ಮಂಡ್ಯ, ಧಾರವಾಡ, ಬೆಳಗಾವಿ, ಚಿತ್ರದುರ್ಗ, ಬಳ್ಳಾರಿ, ಬಾಗಲಕೋಟೆ, ಬಿಜಾಪುರ ಮುಂತಾದ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಇಂಡೋ ಆರ್ಯನ್ ಭಾಷಾ ಕುಟುಂಬಕ್ಕೆ ಸೇರಿದ ಮರಾಠಿ ಭಾಷೆಯನ್ನು ಆಂತರಿಕವಾಗಿ ಬಳಸುತ್ತಾರೆ. ಸಮಾಜದ ಇತರರೊಡನೆ ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಈ ಸಮುದಾಯವು ಅನೇಕ ಹೊರಬಾಂಧವ್ಯ ವಿವಾಹ ಗೋತ್ರಗಳಾಗಿ ವಿಭಾಗಿಸಲ್ಪಟ್ಟಿದೆ. ಅಗಸ್ತ್ಯ, ದಧೀಚಿ, ಗಾರ್ಗೇಯ, ಜಮದಗ್ನಿ, ಮಾರ್ಕಂಡೇಯ ಅವರ ಕೆಲವು ಗೋತ್ರಗಳಾಗಿವೆ. ನಂಜುಂಡಯ್ಯ ಮತ್ತು ಅಯ್ಯರ್ ಇವರುಗಳು ಪಟ್ಟೇಗಾರರಲ್ಲಿ ಇಪ್ಪತ್ತೊಂದು ಗೋತ್ರಗಳನ್ನು ಉಲ್ಲೇಖಿಸಿದ್ದಾರೆ – ಅಗಸ್ತ್ಯ (ನಂದಿಹೂವು), ಅತ್ತೇಯ (ಸಂಪಿಗೆ ಹೂವು), ಭಾರಧ್ವಾಜ (ಮುಳ್ಳು ಸೇವಂತಿಗೆ), ದಧೀಚಿ ( ಕನಿಕರ ಹೂವು), ದೂರ್ವಾಸ (ಪುನುಗುಪುಷ್ಪ), ಗಾಲವ (ಕಮಲ ಪುಷ್ಪ), ಗಾರ್ಗೇಯ (ಬಕುಳದ ಹೂವು), ಗೌತಮ (ಬಿಳಿಸೇವಂತಿಗೆ), ಹರಿತಾಪಿ (ಅಗನಿ ಹೂವು), ಜೌಬಾಲ (ಜಾಜಿ ಹೂವು), ಜಮದಗ್ನಿ (ಕೆಂಪುದಾಸವಾಳ), ಕಶ್ಯಪ (ಕಪ್ಪುಕಮಲ), ಕೌಂಡಿನ್ಯ, ಕಾವನರ್ಷಿ ಮಾರ್ಕಂಡೇಯ (ದೇಲಿಯರ ಹೂವು), (ಭದ್ರಾಪುಷ್ಪ), ಪರಾಶರ (ಭೌಂಧಿವನ ಸುಮ), ಪೌಲಾಸ್ತ್ಯ (ಮಾಲತಿ ಪುಷ್ಪ), ಪೌಂಗ್ಯ (ಮಾಲತೀ ಪುಷ್ಪ), ವಸಿಷ್ಟ, (ಮಲ್ಲಿಗೆ), ವಿಶ್ವಾಮಿತ್ರ (ದಾಸವಾಳ ಹೂ) ಇತ್ಯಾದಿ. ಇವರು ತಮ್ಮ ಅಂಕಿತ ನಾಮದ ಮುಂದೆ ಗೌರವಾರ್ಥವಾಗಿ ‘ಸಾ’ ಎಂಬ ಪದವನ್ನು ಬಳಸುತ್ತಾರೆ. ಉದಾಹರಣೆಗೆ ಈಶ್ವರಸಾ, ರಾಮುಸಾ, ಇತ್ಯಾದಿ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವರ ಸಾಂಪ್ರದಾಯಿಕ ವೃತ್ತಿ ನೇಕಾರಿಕೆ. ಇವರಲ್ಲಿ ಹೆಚ್ಚಿನವರು ಆಧುನಿಕ ವೃತ್ತಿಗಳಲ್ಲಿ ತೋಡಗಿದ್ದಾರೆ. ಇವರ ಧಾರ್ಮಿಕ ಆಚರಣೆಗಳಿಗೆ ಪೂಜಾರಿಯಾಗಿ ಬ್ರಾಹ್ಮಣನಿದ್ದರೂ, ಇವರ ಸಮುದಾಯದಲ್ಲೇ ಕೆಲವು ಧಾರ್ಮಿಕ ವಿಶೇಷಜ್ಞರಿದ್ದಾರೆ. ಆಧುನಿಕ ಶಿಕ್ಷಣ ಹಾಗೂ ಇತರೆ ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.