ಡ್ತಿಗಳು, ಕರ್ನಾಟಕದಲ್ಲಿ ಪಂಡಿತ್ ಹಾಗೂ ಪದಾತಿಗಳೆಂದು ಪರಿಚಿತರು. ಇವರು ಕನ್ನಡ ಪಡ್ತಿ ಮತ್ತು ಕೊಂಕಣಿ ಪಡ್ತಿಗಳೆಂಬ ಎರಡು ಒಳಬಾಂಧವ್ಯದ ಉಪಗುಂಪುಗಳನ್ನು ಹೊಂದಿದ್ದಾರೆ. ಎಂಥೋವನ್ (೧೯೨೨) ಹೇಳುವಂತೆ ಇವರು ಗೋವಾದಿಂದ ಕರ್ನಾಟಕಕ್ಕೆ ಸುಮಾರು ಮುನ್ನೂರು ವರ್ಷಗಳ ಹಿಂದೆಯೇ ಬಂದಿದ್ದಾರೆ. ಕೊಂಕಣಿಪಡ್ತಿಗಳು ಕೊಂಕಣಿ ಹಾಗೂ ಕನ್ನಡ ಪಡ್ತಿಗಳು ಕನ್ನಡದಲ್ಲಿ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಪಡ್ತಿಯಲ್ಲಿರುವ ಎರಡು ಉಪಗುಂಪುಗಳನ್ನು ಭಾಷೆಯ ಆಧಾರದ ಮೇಲೆ ಮಾಡಲಾಗಿದೆ. ಕನ್ನಡ ಪಡ್ತಿ  ಹೊರಬಾಂಧವ್ಯ ವಿವಾಹದ ಬೆಡಗುಗಳನ್ನು ಹೊಂದಿದೆ – ಕೋಟಾರಕರ, ತಾಲೆಕರ, ನಾಗೇಕರ, ಗೈಂಪರ, ಚಿನಚೋಕರ ಮತ್ತು ಗಾವೊಂಡಿಗಳು. ಕೊಂಕಣಿ ಪಡ್ತಿಗಳಲ್ಲಿ ಇರುವ ಬೆಡಗುಗಳು ನಾಗೇಕರ, ಮಾಚಾಕರ ಹಾಗೂ ಕಾಂಡೋಕರ ಮುಂತಾದವುಗಳಾಗಿವೆ. ಪ್ರತಿಯೊಂದು ಬೆಡಗುಗಳಿಗೂ ಪ್ರತ್ಯೇಕ ಮನೆ ದೇವತೆಗಳಿವೆ. ಸೋದರ ಸಂಬಂಧಿ ವಿವಾಹಗಳಿಗೆ ಇವರಲ್ಲಿ ಅವಕಾಶವಿದೆ. ವಿಧವೆ, ವಿದುರ, ವಿಚ್ಛೇದಿತರ ವಿವಾಹವಾಗಬಹುದು. ಹಿರಿಯ ಮಗನಿಗೆ ಮನೆಯ ಅಧಿಕಾರವು ತಂದೆಯ ನಂತರ ದೊರೆಯುತ್ತದೆ.

ಉಪ್ಪು ತಗೆಯುವುದು ಇವರ ಸಾಂಪ್ರದಾಯಿಕ ವೃತ್ತಿ. ಮೀನುಗಾರಿಕೆ, ಶ್ರಮಗೂಲಿ ಹಾಗೂ ಸಣ್ಣ ಪುಟ್ಟ ವ್ಯಾಪಾರಗಳನ್ನು ಮಾಡುತ್ತಾರೆ. ಕೆಲವರು ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ನೌಕರರಾಗಿದ್ದಾರೆ. ಆಧುನಿಕ ಸಾಮಾಜಿಕ, ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುವ ಮೂಲಕ ಅಭಿವೃದ್ಧಿ ಕಾರ್ಯಕ್ರಮದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇವರ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.