ರಯನ್ ಸಮುದಾಯದ ಜನರು ಧಾರ್ಮಿಕ ಆಚಾರಣೆ, ಮದುವೆ, ಹಬ್ಬ, ಉತ್ಸವ, ಇತ್ಯಾದಿ ಸಮಾರಂಭಗಳಲ್ಲಿ ಚರ್ಮದ ಡೋಲನ್ನು ಬಾರಿಸುವರು. ಆ ಡೋಲಿಗೆ ತಮಿಳಿನಲ್ಲಿ ‘ಪರೆಯಿ’ ಎಂದು ಕರೆಯುವರು. ಆ ಡೋಲನ್ನು ಬಾರಿಸುತ್ತಿದ್ದರಿಂದಾಗಿ ಈ ಸಮುದಾಯವನ್ನು ಪರಯನ್ ಎಂದು ಕರೆಯಲಾಯಿತು ಎಂದು ಹೇಳಲಾಗಿದೆ (ಕಮಲಾಕ್ಷ, ೧೯೯೪). ಮಲಯಾಳಂ ಪ್ರದೇಶದಲ್ಲಿ ಈ ಸಮುದಾಯದವರನ್ನು ಪುಲಿಯನ್ ಎಂದು ಕರೆಯುವರು. ‘ಪೆರಿಯ ಪುರಾಣ’ ಎಂಬ ತಮಿಳು ಗ್ರಂಥದಲ್ಲಿ ಪುಲಿಯನ್ ಎಂಬ ಜನರು ತಮಿಳುನಾಡಿನಲ್ಲಿ ರಾಜರಾಗಿದ್ದರು ಎಂಬುದಾಗಿ ಹೇಳಲಾಗಿದೆ. ಈ ಮೇಲಿನ ಅಂಶಗಳಿಂದ ನಮಗೆ ಪರಯನ್ ಸಮುದಾಯದವರು ಕೇರಳ ಹಾಗೂ ತಮಿಳುನಾಡಿನವರು ಎಂದು ತಿಳಿದುಬರುತ್ತದೆ . ಪಶ್ಚಿಮ ತೀರದ ಪರಯನರು ಮಹಮ್ಮದೀಯರ ಅತ್ಯಾಚಾರದಿಂದ ಪಾರಾಗಲು ತಿರುನ್ನೆವೆಳ್ಳಿಯಿಂದ ಓಡಿಬಂದ ತಲೆಮಾರಿನವರೆಂದು ಥರ್ಸ್ಟನ್ (೧೯೦೯) ವಿವರಿಸುತ್ತಾರೆ.

ಇವರು ಮಲಯಾಳಂ ಭಾಷೆಯನ್ನು ಮಾತನಾಡುತ್ತಾರೆ. ತುಳು ಮತ್ತು ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿ ಬಳಸುತ್ತಾರೆ. ಸಲಿಯಾನ್ನಯ, ಬಾಂಗ್ರಾನ್ನಯ, ಪುಲ್ಲತಾನ್ನಯ, ಗುಜ್ಜಾರನ್ನಯ ಮುಂತಾದ ಅನೇಕ ಬೆಡಗುಗಳನ್ನು ಹೊಂದಿದ್ದಾರೆ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸ್ತ್ರೀಯರು ಮನೆಗೆಲಸ, ವ್ಯವಸಾಯದ ಕೂಲಿಗಳಾಗಿ ಮತ್ತು ಪ್ರಾಣಿ ಸಾಕಾಣಿಕೆಯಂತಹ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.

ಸಾಂಪ್ರದಾಯಿಕವಾಗಿ ಪರಯನ್‌ರು ಭೂತ ನೃತ್ಯ ಮಾಡುವುದರಲ್ಲಿ ಪ್ರಖ್ಯಾತರಾಗಿದ್ದರು. ಬುಟ್ಟಿ ಹೆಣೆಯುವ ವೃತ್ತಿಯಲ್ಲಿ ಕೆಲವರು ತೊಡಗಿದ್ದಾರೆ. ಸಮುದಾಯದ ನಾಯಕನಾದ ‘ಗುರಿಕಾರ’ನು ಕೋಮಿನ ಒಳ ಜಗಳಗಳನ್ನು ಬಗೆಹರಿಸಿ, ತಪಿಸ್ಥರಿಗೆ ದಂಡ ವಿಧಿಸುತ್ತಾರೆ. ಇವರು ಕೋದಮಂತಯ್ಯ, ಕಲ್ಲರ್ಟಿ, ಪಿಲಿಚಂಡಿ, ಪಂಜುರ್ಲಿ ಇತ್ಯಾದಿ ಭೂತಗಳನ್ನು ಪೂಜಿಸುತ್ತಾರೆ. ತುಳು ಪಾಡ್ದನ ಹಾಡುವುದರಲ್ಲಿ ಹಾಗೂ ಭೂತ ನೃತ್ಯಗಳಲ್ಲಿ ಮಾಡುವುದರಲ್ಲಿ ಇವರು ಪರಿಗಣಿತರಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಇವರ ಸಾಂಪ್ರದಾಯಿಕ ವೃತ್ತಿಯಲ್ಲಿ ಸ್ವಲ್ಪ ಬದಲಾವಣೆ ಕಂಡುಬರುತ್ತಿದೆ. ಪರಯನ್ ಸಮುದಾಯದ ಜನರು ಸರಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇವರ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಾನಮಾನಗಳು ಸುಧಾರಣೆಯಾಗುವ ಅಗತ್ಯ ಇದೆ.

ನೋಡಿ:

ಕಮಲಾಕ್ಷ., ೧೯೯೪. ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಇತಿಹಾಸ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು